ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಹಿಂದುಳಿದವರು ಹಾಸ್ಟೆಲ್ ನಲ್ಲಿ ಇರುವಾಗ ಸಹಬಾಳ್ವೆಯಿಂದ ಇರುತ್ತೀರಿ. ಆದರೆ ಹೊರ ಬಂದಮೇಲೆ ಜಾತಿ ವ್ಯವಸ್ಥೆಯಡಿ ಜೀವಿಸುವುದು ಏಕೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವೆಲ್ಲರೂ ವೈಚಾರಿಕ ಶಿಕ್ಷಣ ಪಡೆಯಬೇಕು ಎಂದು ಕಿವಿಮಾತು ಹೇಳಿದರು.ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ಪ್ರಥಮ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಮತ್ತು ಡಿ. ದೇವರಾಜ ಅರಸು- ಎಲ್.ಜಿ. ಹಾವನೂರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿಕ್ಷಿತರು ಸಮಾಜದ ಸಮಸ್ಯೆಗೆ ಸ್ಪಂದಿಸಬೇಕು. ಆದ್ದರಿಂದ ಪ್ರತಿಯೊಬ್ಬರು ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣ ಪಡೆಯಬೇಕು. ಆಗ ಸಮ ಸಮಾಜದ ಪರಿಕಲ್ಪನೆ ಸಾಧ್ಯವಾಗುತ್ತದೆ. ಪ್ರತಿಯೊಬ್ಬರಿಗೂ ಶಿಕ್ಷಣ ಬಹಳ ಮುಖ್ಯ. ಸ್ವಾತಂತ್ರ್ಯ ಪೂರ್ವದಲ್ಲಿ ಶೇ. 10 ರಿಂದ 15 ರಷ್ಟಿದ್ದ ಸಾಕ್ಷರತೆ ಪ್ರಮಾಣವು ಈಗ ಶೇ. 76ಕ್ಕೆ ತಲುಪಿದ್ದು, ಇದು ಶೇ. ನೂರು ಆಗಬೇಕು. ನಾವು ಕಂದಾಚಾರ, ಮೂಢನಂಬಿಕೆಗೆ ಮಾರುಹೋಗಬಾರದು ಎಂದರು.ಶಿಕ್ಷಣ ಪಡೆದು ಇಂದು ಉನ್ನತ ಸ್ಥಾನದಲ್ಲಿರುವವರು ಸಮಾಜದ ಋಣ ತೀರಿಸಬೇಕು. ಸಮಾಜದಿಂದ ಸಹಾಯ ಪಡೆದುಕೊಂಡು ಶಕ್ತಿವಂತರಾಗಿರುವವರು, ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಆಗ ಮಾತ್ರ ಸಮಾಜದ ಸರ್ವತೂಮುಖ ಅಭಿವೃದ್ಧಿ ಸಾಧ್ಯ. ನನ್ನ ಮೇಲೂ ಸಮಾಜದ ಋಣ ಇದ್ದು, ಅದನ್ನು ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ದೇಶದಲ್ಲಿ ಅನೇಕ ಧರ್ಮ, ಜಾತಿಗಳಿಗೆ. ಯಾವ ಧರ್ಮವೂ ಪರಸ್ಪರ ದ್ವೇಷಿಸಿ ಎಂದು ಹೇಳಿಲ್ಲ. ಹೀಗಾಗಿ ಒಬ್ಬರನ್ನೊಬ್ಬರು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ಕನಿಷ್ಠ ಪಕ್ಷ ವಿದ್ಯಾವಂತರಾದವರು ಈ ಕೆಲಸ ಮಾಡಬೇಕು. ಅವರೇ ಜಾತಿ ಮಾಡಬಾರದು. ಸಮಾಜದಲ್ಲಿ ಮಾದರಿಯಾಗಿ ಜೀವನ ಸಾರ್ಥಕವಾಗುವಂತೆ ಬದುಕಬೇಕು ಎಂದು ಅವರು ಸಲಹೆ ನೀಡಿದರು.ಕಳೆದ ಅವಧಿಯಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಕಾರಿನ ಮೇಲೆ ಕಾಗೆ ಕೂತಿದ್ದಕ್ಕೆ ಏನೇನೋ ಹೇಳಿದರು. ಜ್ಯೋತಿಷಿಯೊಬ್ಬರು ಟಿವಿಯಲ್ಲಿ ಕುಳಿತು ನಾನು ಬಜೆಟ್ ಮಂಡಿಸುವುದೇ ಇಲ್ಲ ಎಂದರೆ, ಮತ್ತೊಬ್ಬರು ಬಜೆಟ್ ಮಂಡಿಸಿದ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದರು. ಆದರೆ, ನಾನು ಮೊದಲ ಅವಧಿ ಪೂರ್ವಗೊಳಿಸಿ, 2ನೇ ಅವಧಿಯಲ್ಲೂ ಎರಡೂವರೆ ವರ್ಷ ಪೂರ್ಣಗೊಳಿಸಿದ್ದೇನೆ. ಎಲ್ಲವನ್ನೂ ಮೌಢ್ಯ, ಕಂದಾಚಾರದ ದೃಷ್ಟಿಯಿಂದ ನೋಡುವುದನ್ನು ಬಿಡಬೇಕು. ಗುಲಾಮಗಿರಿಯಿಂದ ಬದುಕಬಾರದು ಎಂದು ಅವರು ಕರೆ ಕೊಟ್ಟರು.
ಪ್ರೊ. ರವಿವರ್ಮ ಕುಮಾರ್ ಅಮಾವಾಸ್ಯೆಯ ದಿನ, ರಾಹು ಕಾಲದಲ್ಲೇ ಮದುವೆಯಾದವರು. ಆದರೂ ಸಾರ್ಥಕ ದಾಂಪತ್ಯ ಅವರದ್ದು. ನನಗೆ ಈ ಅಮಾವಾಸ್ಯೆಯ ಮೇಲೆ ನಂಬಿಕೆ ಇಲ್ಲದಿದ್ದರೂ ನಮ್ಮ ಮನೆಯವರು ನಂಬುತ್ತಾರೆ ಎಂದು ಹೇಳಿದರು.ಕರ್ನಾಟಕದಲ್ಲಿ 3.88 ಲಕ್ಷ ವಿದ್ಯಾರ್ಥಿಗಳು ಹಾಸ್ಟೆಲ್ ಗಳಲ್ಲಿ ಓದುತ್ತಿದ್ದಾರೆ. ಹಿಂದೆ ಮೈಸೂರಿನಲ್ಲಿ ಎರಡು ಹಾಸ್ಟೆಲ್ ಗಳು ಮಾತ್ರ ಇದ್ದವು. ಇಂದು ನಗರದ ಪ್ರದೇಶದಲ್ಲೇ 45 ಹಾಸ್ಟೆಲ್ ಗಳಿದ್ದು, 6,599 ವಿದ್ಯಾರ್ಥಿಗಳು ಇದ್ದಾರೆ. ನಮ್ಮ ಸರ್ಕಾರ ದಲಿತರು, ಹಿಂದುಳಿದರು, ಬಡ ವಿದ್ಯಾರ್ಥಿಗಳ ನೆರವಿಗೆ ಸದಾ ಇರುತ್ತದೆ ಎಂದರು.
ನಾನು ಕರ್ನಾಟಕದಲ್ಲಿ ಕನ್ನಡವನ್ನೇ ಮಾತನಾಡುತ್ತೇನೆ, ಕನ್ನಡದಲ್ಲೇ ವ್ಯವಹರಿಸುತ್ತೇನೆ ಎಂದು ಪ್ರತಿಯೊಬ್ಬರೂ ಶಪಥ ಮಾಡಬೇಕು. ಇಂದು ಬೆಂಗಳೂರಿನಲ್ಲಿ ಬೇರೆ ರಾಜ್ಯದಲ್ಲಿರುವ ಅನುಭವ ಆಗುತ್ತಿದ್ದು, ಕನ್ನಡದ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದು ಅವರು ಹೇಳಿದರು.ಇದೇ ವೇಳೆ ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್ ಅವರಿಗೆ ದೇವರಾಜ ಅರಸು ಮತ್ತು ಹಾವನೂರು ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಕೆ. ಹರೀಶ್ ಗೌಡ, ಡಿ. ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಕೆ. ಶಿವಕುಮಾರ್, ಡಾ. ಸೋಮಾ ಇಳಂಗೋವನ್, ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್, ಸಂಘದ ಗೌರವಾಧ್ಯಕ್ಷ ರಾಮಯ್ಯ, ಅಧ್ಯಕ್ಷ ಶಿವಸ್ವಾಮಿ, ಉಪಾಧ್ಯಕ್ಷ ಆರ್. ಮಹದೇವು, ರವಿ ಬೋಸರಾಜ್ ಮೊದಲಾದವರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))