ಕಳೆದ ನಾಲ್ಕೈದು ವರ್ಷಗಳಿಂದ ಮಿತಿಮೀರಿದ ಕಾಡಾನೆಗಳ ಹಾವಳಿಯ ನಡುವೆಯೂ ಕೃಷಿಯನ್ನೇ ಅವಲಂಬಿಸಿ ಕಾಫಿ ಹಾಗೂ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾ ಆರ್ಥಿಕ ಸಂಕಷ್ಟದೊಂದಿಗೆ ಜೀವನ ಸಾಗಿಸುತ್ತಿರುವ ಅದೆಷ್ಟೋ ಮಧ್ಯಮ ವರ್ಗದ ಬೆಳೆಗಾರರಿಗೆ ಇದೀಗ ಕಾಫಿ ಬೆಳೆ ಬೆಲೆ ಏರಿಕೆ ಕಂಡಿದ್ದು ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ ಇದೇ ಸಮಯದಲ್ಲಿಯೆ ಕಾಫಿ ಕಳ್ಳರ ಹಾವಳಿ ಮಿತಿ ಮೀರುತ್ತಿದ್ದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಕನ್ನಡಪ್ರಭ ವಾರ್ತೆ ಬೇಲೂರು
ಮಲೆನಾಡು ಭಾಗವಾದ ಅರೇಹಳ್ಳಿ ಹಾಗೂ ಸುತ್ತಮುತ್ತ ಕಾಫಿ ಕಳುವು ಹೆಚ್ಚಾಗುತ್ತಿದ್ದು ಬೇಸತ್ತ ಬೆಳೆಗಾರರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಅವಶ್ಯಕ ಸುರಕ್ಷತೆ ಕ್ರಮವನ್ನು ಕಲ್ಪಿಸುವಂತೆ ಮನವಿ ಮಾಡಿದರು.ಕಳೆದ ನಾಲ್ಕೈದು ವರ್ಷಗಳಿಂದ ಮಿತಿಮೀರಿದ ಕಾಡಾನೆಗಳ ಹಾವಳಿಯ ನಡುವೆಯೂ ಕೃಷಿಯನ್ನೇ ಅವಲಂಬಿಸಿ ಕಾಫಿ ಹಾಗೂ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾ ಆರ್ಥಿಕ ಸಂಕಷ್ಟದೊಂದಿಗೆ ಜೀವನ ಸಾಗಿಸುತ್ತಿರುವ ಅದೆಷ್ಟೋ ಮಧ್ಯಮ ವರ್ಗದ ಬೆಳೆಗಾರರಿಗೆ ಇದೀಗ ಕಾಫಿ ಬೆಳೆ ಬೆಲೆ ಏರಿಕೆ ಕಂಡಿದ್ದು ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ ಇದೇ ಸಮಯದಲ್ಲಿಯೆ ಕಾಫಿ ಕಳ್ಳರ ಹಾವಳಿ ಮಿತಿ ಮೀರುತ್ತಿದ್ದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಶಾರಿಬ್ ಫರ್ಹಾನ್ ಮಾತನಾಡಿ ತಾಲೂಕಿನ ಅರೆಹಳ್ಳಿ ಹಾಗೂ ಸುತ್ತಮುತ್ತಲಿನ ಹಲವೆಡೆ ದಿನದಿಂದ ದಿನಕ್ಕೆ ಕಳ್ಳರು ಹಸಿ ಕಾಫಿ ಕಳವು ಮಾಡುತ್ತಿರುವುದಲ್ಲದೆ ಇತ್ತೀಚೆಗೆ ಮನೆಯಂಗಳದ ಕಣದಲ್ಲಿಯೂ ಶೇಖರಿಸಿಟ್ಟ ಕಾಫಿಯನ್ನು ಸಹ ದೋಚುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಬೆಳೆಗಾರರು ದಿನನಿತ್ಯ ಆತಂಕದಿಂದ ಬದುಕುವಂತಹ ಸ್ಥಿತಿ ಎದುರಾಗಿದ್ದು, ಬೆಳೆಗಾರರ ಸಂಘದ ಪರವಾಗಿ ನೊಂದ ಬೆಳೆಗಾರರೊಂದಿಗೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ನಮ್ಮ ನಿವೇದನೆಯನ್ನು ಸೂಕ್ಷ್ಮವಾಗಿ ಪರಿಗಣಿಸಿ ಅವಶ್ಯಕ ಸುರಕ್ಷತೆ ಕ್ರಮವನ್ನು ಕೈಗೊಂಡು ನಮ್ಮೆಲ್ಲರಿಗೂ ನ್ಯಾಯ ಒದಗಿಸುವಂತೆ ಪೊಲೀಸರಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಬೆಳೆಗಾರ ಜಗನ್ನಾಥ್ ಶೆಟ್ಟಿ ಮಾತನಾಡಿ ಭಾನುವಾರ ಕಾಫಿ ಕೊಯ್ಲಿನ ನಂತರ ಪಲ್ಪರ್ ಮಾಡಿ ಮನೆಯ ಸಮೀಪ ಕಣದಲ್ಲಿ ಸುಮಾರು 800 ಕೇಜಿಗಳಷ್ಟು ಹಸಿ ಕಾಫಿ ಬೀಜಗಳನ್ನು ಚೀಲದಲ್ಲಿ ಶೇಖರಿಸಿಟ್ಟು ಪಕ್ಕದಲ್ಲಿಯೇ ನಿಲ್ಲಿಸಿದ್ದ ಕಾರಿನೊಳಗೆ ವಿಶ್ರಾಂತಿ ಪಡೆಯುತ್ತಿದ್ದೆ. ಮಧ್ಯರಾತ್ರಿ ಸುಮಾರು 3ರ ಸಮಯದಲ್ಲಿ ಮೂರ್ನಾಲ್ಕು ಜನರಿದ್ದ ಖದೀಮರ ಗುಂಪು ಕೈಯಲ್ಲಿ ಲಾಂಗು, ಮಚ್ಚುಗಳ ಸಮೇತ ಬಂದು ಸುಮಾರು 2 ಲಕ್ಷ ರು. ಮೌಲ್ಯದ ಕಾಫಿಯನ್ನು ದೋಚುತ್ತಿದ್ದರು, ಆ ವೇಳೆಗಾಗಲೇ ಎಚ್ಚರಗೊಂಡು ಆತ್ಮರಕ್ಷಣೆಗಾಗಿ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದೆ. ಆಗ ಅಲ್ಲಿಂದ ಕಾಲ್ಕಿತ್ತಿದ್ದಾರೆ, ಸಾಲದಕ್ಕೆ ಮರುದಿನ ಬೆಳಿಗ್ಗೆ 7.30ರ ಸಮಯದಲ್ಲಿ ದೂರು ನೀಡಲು ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ವಾಪಸ್ಸು ಬರುವಾಗ ಅಲ್ಲಿ ಉಳಿದಿದ್ದ ಇನ್ನೂ ಎರಡು ಮೂಟೆ ಕಾಫಿಯನ್ನು ಸಹ ಕಳವು ಮಾಡಿದ್ದಾರೆ, ಇವೆಲ್ಲವನ್ನೂ ಗಮನಿಸಿದರೆ ಯಾವುದೋ ಗುಂಪು ನಿತ್ಯ ಹುನ್ನಾರ ನಡೆಸುತ್ತಿದೆ, ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಖದೀಮರನ್ನು ಪತ್ತೆಹಚ್ಚಿ ನಮಗೆ ನ್ಯಾಯ ಒದಗಿಸಬೇಕು ಹಾಗೂ ಇಂತಹ ಪ್ರಕರಣಗಳು ಮತ್ತೆಲ್ಲೂ ಮರುಕಳಿಸಬಾರದು ಎಂದು ಮನವಿ ಮಾಡಿದರು.