'Coffee Land' gears up for the festivities of the Festival of Lights
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮಕ್ಕೆ ಕಾಫಿನಾಡು ಚಿಕ್ಕಮಗಳೂರು ನಗರ ಸಜ್ಜಾಗಿದ್ದು, ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಮಣ್ಣಿನ ಹಣತೆ, ಬಣ್ಣಬಣ್ಣದ ಆಕಾಶಬುಟ್ಟಿ, ಪಟಾಕಿ, ಹೂವು, ಹಣ್ಣು ಸೇರಿದಂತೆ ಹಬ್ಬದ ಆಚರಣೆಗೆ ಅಗತ್ಯವಾದ ವಸ್ತುಗಳ ಖರೀದಿಯಲ್ಲಿ ಜನರು ನಿರತರಾಗಿದ್ದಾರೆ. ಮನೆಗಳ ಸ್ವಚ್ಛತೆ, ಅಲಂಕಾರ, ಲಕ್ಷ್ಮಿ ಪೂಜೆ ಹಾಗೂ ಬಲಿಪಾಡ್ಯಮಿಯ ಸಿದ್ಧತೆಗಳು ಗರಿಗೆದರಿವೆ. ಆದರೆ ಈ ಬಾರಿ ಪಟಾಕಿ ಮಾತ್ರವಲ್ಲದೆ ಹೂವು ಮತ್ತು ಹಣ್ಣುಗಳ ಬೆಲೆಯೂ ಹೆಚ್ಚಾಗಿರುವುದು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿಸಿದೆ.ನಗರದ ಬೈಪಾಸ್ ರಸ್ತೆಯಲ್ಲಿರುವ ಪಟಾಕಿ ಮೈದಾನದಲ್ಲಿ ವಿವಿಧ ಬಗೆಯ ಪಟಾಕಿಗಳ ಮಳಿಗೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ತಮಿಳುನಾಡು, ಹೊಸಕೋಟೆ ಹಾಗೂ ಹೊಸೂರಿನಿಂದ ವಿವಿಧ ಮಾದರಿಯ ಪಟಾಕಿಗಳನ್ನು ತರಲಾಗಿದೆ. ಮೆಣಸಿನಕಾಯಿ, ಲಕ್ಷ್ಮಿ, ಆನೆ ಪಟಾಕಿ, ಬಿಜಿಲಿ, ಗರ್ನಾಲ್, ರಾಕೆಟ್, ಫ್ಲವರ್ ಪಾಟ್ ಹಾಗೂ ಹೂವಿನ ಕುಂಡ ಸೇರಿದಂತೆ ವಿವಿಧ ಪಟಾಕಿಗಳ ಖರೀದಿ ನಡೆಯುತ್ತಿದೆ.ಆಕಾಶದಲ್ಲಿ ಬಣ್ಣದ ಚಿತ್ತಾರ ಮೂಡಿಸುವ ರಾಕೆಟ್, ಫ್ಲವರ್ ಪಾಟ್ಗಳತ್ತ ಯುವಕರು ಆಸಕ್ತಿ ತೋರುತ್ತಿದ್ದರೆ, ಪಿಸ್ತೂಲ್ ಮಾದರಿಯ ಪಟಾಕಿ, ಬಣ್ಣದ ರೀಲು ಹಾಗೂ ಸಣ್ಣ ಪಟಾಕಿಗಳತ್ತ ಮಕ್ಕಳು ಆಕರ್ಷಿತರಾಗಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣದ ಉದ್ದೇಶದಿಂದ ಹಸಿರು ಪಟಾಕಿಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದರೂ, ಅವುಗಳ ಬೆಲೆ ಹೆಚ್ಚಳವಾಗಿರುವುದು ಖರೀದಿದಾರರ ಲೆಕ್ಕಾಚಾರ ಬದಲಿಸಿದೆ.ಇನ್ನೊಂದೆಡೆ ನಗರದ ಅಂಬೇಡ್ಕರ್ ರಸ್ತೆ, ಮಾರ್ಕೆಟ್ ರಸ್ತೆ, ವಿಜಯಪುರ, ತೊಗರಿಹಂಕಲ್ ವೃತ್ತ, ಎಂ.ಜಿ. ರಸ್ತೆ ಹಾಗೂ ಆಜಾದ್ ಪಾರ್ಕ್ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಹೂವು, ಹಣ್ಣು, ಮಾವಿನ ಸೊಪ್ಪು, ಬಾಳೆಗಿಡ ಹಾಗೂ ತಾವರೆ ಹೂವುಗಳ ಮಾರಾಟ ಭರದಿಂದ ಸಾಗಿದೆ. ಗುರುನಾಥ ಚಿತ್ರಮಂದಿರ ರಸ್ತೆ, ಅಂಬೇಡ್ಕರ್ ಭವನ ರಸ್ತೆ ಸೇರಿದಂತೆ ವಿವಿಧೆಡೆ ಆಕಾಶಬುಟ್ಟಿ, ಅಲಂಕಾರಿಕ ವಿದ್ಯುತ್ ದೀಪಗಳು, ರಂಗೋಲಿ ಹಾಗೂ ಬಣ್ಣದ ಪುಡಿಗಳ ಖರೀದಿಯೂ ಜೋರಾಗಿದೆ.ದೀಪಾವಳಿಯ ಸಾಂಪ್ರದಾಯಿಕ ಆಚರಣೆಯ ಭಾಗವಾಗಿರುವ ಮಣ್ಣಿನ ಹಣತೆಗಳಿಗೆ ಉತ್ತಮ ಬೇಡಿಕೆ ಕಂಡುಬಂದಿದೆ. ಸಾಮಾನ್ಯ ಹಣತೆ, ಜೋಡಿ ಹಣತೆ, ಅಲಂಕಾರಿಕ ಹಣತೆ ಹಾಗೂ ತುಳಸಿ ಕಟ್ಟೆಯ ಹಣತೆ ಸೇರಿದಂತೆ ವಿವಿಧ ವಿನ್ಯಾಸದ ಹಣತೆಗಳು ಮಾರಾಟಕ್ಕೆ ಬಂದಿವೆ. ಮನೆ, ಅಂಗಡಿ ಹಾಗೂ ಕಟ್ಟಡಗಳ ಮುಂಭಾಗ ಅಳವಡಿಸಲು ವಿವಿಧ ಬಣ್ಣಗಳ ಆಕಾಶಬುಟ್ಟಿಗಳನ್ನು ಖರೀದಿಸುತ್ತಿದ್ದಾರೆ. ಅಂಗಡಿಗಳನ್ನು ಸ್ವಚ್ಛಗೊಳಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸುವ ಕಾರ್ಯವೂ ನಡೆಯುತ್ತಿದೆ. ಬಟ್ಟೆ ಅಂಗಡಿಗಳಲ್ಲಿಯೂ ಹೊಸ ಬಟ್ಟೆಗಳ ಖರೀದಿ ಭರಾಟೆ ಹೆಚ್ಚಾಗಿದೆ.
ಹೂ-ಹಣ್ಣು ಬೆಲೆಯಲ್ಲಿ ಹೆಚ್ಚಳ: ಹಬ್ಬದ ಪೂಜೆ ಹಾಗೂ ಅಲಂಕಾರಕ್ಕೆ ಅಗತ್ಯವಾದ ಹೂವುಗಳ ಬೆಲೆ ಈ ಬಾರಿ ಹೆಚ್ಚಾಗಿದೆ. ಚಂಡು ಹೂವು ಮಾರಿಗೆ ₹50, ಸೇವಂತಿಗೆ ₹80 ಹಾಗೂ ಮಲ್ಲಿಗೆ ₹100ರಂತೆ ಮಾರಾಟವಾಗುತ್ತಿದೆ. ಗುಲಾಬಿ, ಸುಗಂಧರಾಜ, ಬಿಡಿ ಹೂವು, ಬಾಳೆಗಿಡ, ಮಾವಿನ ಸೊಪ್ಪು ಹಾಗೂ ತುಳಸಿ ಹಾರಗಳ ಖರೀದಿಯೂ ನಡೆಯುತ್ತಿದೆ.ಹಣ್ಣುಗಳ ಮಾರುಕಟ್ಟೆಯಲ್ಲಿಯೂ ಬೆಲೆ ಏರಿಕೆಯಾಗಿದೆ. ಸೇಬು ಕೆ.ಜಿಗೆ ₹120, ದಾಳಿಂಬೆ ₹100, ಮೂಸಂಬಿ ₹80, ದ್ರಾಕ್ಷಿ ₹120, ಬಾಳೆಹಣ್ಣು ₹120, ಕಿತ್ತಳೆ ₹100 ಹಾಗೂ ಕಲ್ಲಂಗಡಿ ₹30ರಂತೆ ಮಾರಾಟವಾಗುತ್ತಿವೆ. ಸೀತಾಫಲ, ಸೀಬೆ, ಸಪೋಟ ಹಾಗೂ ಅನಾನಸ್ ಹಣ್ಣುಗಳಿಗೂ ಬೇಡಿಕೆ ಕಂಡುಬಂದಿದೆ.ಒಟ್ಟಿನಲ್ಲಿ ಮಣ್ಣಿನ ಹಣತೆಗಳ ಬೆಳಕು, ಆಕಾಶಬುಟ್ಟಿಗಳ ಬಣ್ಣ, ಹೂವು-ಹಣ್ಣುಗಳ ಪರಿಮಳ ಹಾಗೂ ಪಟಾಕಿಗಳ ಸಂಭ್ರಮದಿಂದ ಕಾಫಿನಾಡಿನ ಮಾರುಕಟ್ಟೆಗಳಲ್ಲಿ ದೀಪಾವಳಿಯ ಕಳೆ ಮನೆಮಾಡಿದೆ. ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಉತ್ಸಾಹದ ನಡುವೆಯೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರು ಖರೀದಿಗೆ ಬಜೆಟ್ ಲೆಕ್ಕಾಚಾರ ಹಾಕುವಂತಾಗಿದೆ.