ಸಾರಾಂಶ
ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್ ವಿರೋಧಿಸಿ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬುಧವಾರ ಮತ್ತು ಗುರುವಾರ ಬೇಕರಿ ಹಾಗೂ ಕಾಂಡಿಮೆಂಟ್ಸ್ ಸೇರಿದಂತೆ ವಿವಿಧೆಡೆ ಹಾಲು, ಕಾಫಿ-ಚಹಾ ಮತ್ತು ಹಾಲಿನ ಇತರ ಉತ್ಪನ್ನಗಳ ಮಾರಾಟದಲ್ಲಿ ವ್ಯತ್ಯಯ
ಬೆಂಗಳೂರು : ಸಣ್ಣ ವ್ಯಾಪಾರಿಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನೋಟಿಸ್ ವಿರೋಧಿಸಿ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬುಧವಾರ ಮತ್ತು ಗುರುವಾರ ಬೇಕರಿ ಹಾಗೂ ಕಾಂಡಿಮೆಂಟ್ಸ್ ಸೇರಿದಂತೆ ವಿವಿಧೆಡೆ ಹಾಲು, ಕಾಫಿ-ಚಹಾ ಮತ್ತು ಹಾಲಿನ ಇತರ ಉತ್ಪನ್ನಗಳ ಮಾರಾಟದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಈ ಕುರಿತು ಮಾತನಾಡಿರುವ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು, ಸಣ್ಣ ವ್ಯಾಪಾರಿಗಳಿಗೆ ನೀಡಿರುವ ನೋಟಿಸ್ ಹಿಂಪಡೆಯಲು ಕೋರಿ ಆರಂಭಿಸಿರುವ ಹೋರಾಟಕ್ಕೆ ದೊಡ್ಡ ಸಂಖ್ಯೆಯಲ್ಲಿ ಬೆಂಬಲ ಸಿಕ್ಕಿದೆ. ಅದಕ್ಕಾಗಿ ಜು.23 ಮತ್ತು ಜು.24ರಂದು ಬೇಕರಿ, ಕಾಂಡಿಮೆಂಟ್ಸ್ ಸೇರಿದಂತೆ ಸಣ್ಣ ಅಂಗಡಿಗಳಲ್ಲಿ ಹಾಲು, ಚಹಾ, ಕಾಫಿ ಮತ್ತಿತರ ಹಾಲಿನ ಉತ್ಪನ್ನಗಳನ್ನು ಮಾರುವುದಿಲ್ಲ. ಕಪ್ಪು ಪಟ್ಟಿ ಧರಿಸಿ ಇತರ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತೇವೆ ಎಂದು ತಿಳಿಸಿದರು.
ಅನೇಕ ಅಪಾರ್ಟ್‌ಮೆಂಟ್‌ಗಳಿಗೆ ಹಾಗೂ ಸಣ್ಣ ಪುಟ್ಟ ಕಚೇರಿ, ಉದ್ಯಮಗಳಿಗೆ ಸಣ್ಣ ವ್ಯಾಪಾರಿಗಳು ಹಾಲು ಪೂರೈಕೆ ಮಾಡುತ್ತಾರೆ. ಅಂತಹ ಎಲ್ಲ ಸ್ಥಳಗಳಿಗೆ ಹಾಲು ಪೂರೈಕೆಯಲ್ಲಿ ಎರಡು ದಿನ ವ್ಯತ್ಯಯವಾಗುತ್ತದೆ. ಇನ್ನು ಕೆಲವು ನಂದಿನಿ ಬೂತ್‌ಗಳ ವ್ಯಾಪಾರಿಗಳು ಕೂಡ ಪ್ರತಿಭಟನೆಗೆ ಸಾಥ್ ನೀಡುತ್ತಿದ್ದಾರೆ. ಜು.25ರಂದು ಎಲ್ಲ ರೀತಿಯ ಸಣ್ಣ ವ್ಯಾಪಾರಿಗಳು ತಮ್ಮ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ ಎಂದು ಅವರು ತಿಳಿಸಿದರು.
ಕ್ಯೂಆರ್ ಕೋಡ್ ತೆಗೆದಿಟ್ಟು ವ್ಯಾಪಾರ:
ನೋಟಿಸ್‌ನಿಂದಾಗಿ ಅನೇಕ ವ್ಯಾಪಾರಿಗಳು ಹೆದರಿ ಕ್ಯೂಆರ್ ಕೋಡ್‌ಗಳನ್ನು ತೆಗೆದಿಟ್ಟಿದ್ದಾರೆ. ಗ್ರಾಹಕರು ಕೇಳಿದರೆ ಮಾತ್ರ ತೋರಿಸುತ್ತಿದ್ದಾರೆ. ಎಲ್ಲ ವ್ಯಾಪಾರಿಗಳಲ್ಲಿ ಜಿಎಸ್‌ಟಿ ನೋಟಿಸ್‌ನ ಆತಂಕವಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಸಣ್ಣ ವ್ಯಾಪಾರಿಗಳೆಲ್ಲಾ ಯುಪಿಐ ಮೂಲಕ ಹಣ ಸ್ವೀಕರಿಸುವುದನ್ನೇ ನಿಲ್ಲಿಸಿ ಬಿಡುತ್ತಾರೆ. ಹೀಗಾಗಿ, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಆತಂಕ ನಿವಾರಿಸಬೇಕು ಎಂದು ರವಿ ಶೆಟ್ಟಿ ಹೇಳಿದರು.
ಬೀದಿ ಬದಿ ವ್ಯಾಪಾರಿಗಳು, ಇಂತಹ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರು ಅವಿದ್ಯಾವಂತರಾಗಿದ್ದು, ಕಾನೂನು ತಿಳಿವಳಿಕೆ ಇಲ್ಲವೇ ಇಲ್ಲ. ಅವರಿಗೆ ಜೀವನ ನಡೆಸುವಷ್ಟು ಸಣ್ಣ ಲಾಭ ಇರುತ್ತದೆ. ಇಂತಹ ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಟ್ಯಾಕ್ಸ್ ನೋಟಿಸ್ ನೀಡುತ್ತಿದ್ದಾರೆ. ಅವರಿಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಎರಡು ಸಂಘಟನೆಗಳಿಂದ ಭಿನ್ನ ನಡೆ:
ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಜಿಎಸ್‌ಟಿ ನೋಟಿಸ್ ವಿರುದ್ಧದ ಹೋರಾಟಕ್ಕೆ ಬೇಕರಿ ಮತ್ತು ಕಾಂಡಿಮೆಂಟ್ಸ್ ವ್ಯಾಪಾರಿಗಳ ಒಕ್ಕೂಟ ಮಂಗಳವಾರ ಜೊತೆಯಾಗಿದೆ. ಆದರೆ, ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಎರಡು ಸಂಘಟನೆಗಳ ನಡೆ ತದ್ವಿರುದ್ಧವಾಗಿದೆ.
ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಎಂದಿನಂತೆ ಮಾರಾಟ ಮಾಡುತ್ತೇವೆ ಎಂದು ವ್ಯಾಪಾರಿಗಳ ಒಕ್ಕೂಟ ಹೇಳಿದೆ. ಆದರೆ, ಹಾಲು ಮಾರಾಟ ಮಾಡುವುದಿಲ್ಲ ಎಂದು ಕಾರ್ಮಿಕರ ಪರಿಷತ್ ಘೋಷಿಸಿದೆ. ಹೀಗಾಗಿ, ಕೆಲವು ಬೇಕರಿಗಳಲ್ಲಿ ಹಾಲು, ಚಹಾ ದೊರೆತರೆ ಮತ್ತೆ ಕೆಲವೆಡೆ ಲಭ್ಯವಾಗದಿರಬಹುದು.
ಹಾಲಿನ ಪೂರೈಕೆ ಅಬಾಧಿತ:
ನಂದಿನಿ ಸೇರಿದಂತೆ ವಿವಿಧ ಹಾಲಿನ ಪೂರೈಕೆ, ಮಾರಾಟ ಮಾಡುವ ಡೈರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಹಾಲು ಪೂರೈಕೆದಾರರು ಎಂದಿನಂತೆ ಕಾರ್ಯ ನಿರ್ವಹಿಸುತ್ತಾರೆ. ಹೀಗಾಗಿ, ಬೇಕರಿ ಮತ್ತು ಕಾಂಡಿಮೆಂಟ್ಸ್ ಹೊರತಾದ ಹಾಲಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ.
ಹೂ ಕೊಟ್ಟು ಬೆಂಬಲ ಕೋರಿದ ಕಾರ್ಯಕರ್ತರು:
ಜು.25ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿರುವ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕೆ.ಆರ್. ಮಾರುಕಟ್ಟೆ ವ್ಯಾಪಾರಿಗಳಿಗೆ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ ಗುಲಾಬಿ ಹೂವು ಮತ್ತು ಜಿಎಸ್ಟಿ ಕುರಿತಾದ ಭಿತ್ತಿಪತ್ರ ನೀಡುವ ಮೂಲಕ ಬೆಂಬಲ ಕೋರಿತು.
1% ತೆರಿಗೆ ಪಡೆದು ಬಿಟ್ಬಿಡಿ: ವ್ಯಾಪಾರಿಗಳು
ಬೆಂಗಳೂರು: ಜಿಎಸ್ಟಿ ಮಿತಿಯನ್ನು ಮೀರಿ ವ್ಯಾಪಾರ ಮಾಡಿರುವ ಸಣ್ಣ ವ್ಯಾಪಾರಿಗಳಿಗೆ ರಾಜಿ ತೆರಿಗೆ ಯೋಜನೆಯಡಿ ಶೇ.1ರಷ್ಟು ತೆರಿಗೆ ಕಟ್ಟಿಸಿಕೊಂಡು ಪ್ರಕರಣ ಇತ್ಯರ್ಥಪಡಿಸಬೇಕು. ಇಲ್ಲದಿದ್ದರೆ ಯುಪಿಐ ಬಳಕೆ ನಿಲ್ಲಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಬೇಕರಿ, ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ದಿಮೆದಾರರ ಒಕ್ಕೂಟ ಹೇಳಿದೆ.