ಕಳೆದ ಬಾರಿ ಮೇ ಮಧ್ಯಭಾಗದಿಂದ ಅಕ್ಟೋಬರ್ ತಿಂಗಳ ಅಂತ್ಯದವರೆಗೂ ಸುರಿದ ಆರು ತಿಂಗಳ ದೀರ್ಘ ಮಳೆ ಕಾಫಿ ಬೆಳೆಯ ಮೇಲೆ ಬಾರಿ ಪರಿಣಾಮ ಬೀರಿದ್ದು ಕಳೆದ ಬಾರಿಗೆ ಹೋಲಿಸಿದರೆ ಶೇ. ೩೦ರಿಂದ ೪೦ ಫಸಲು ಕುಸಿತ ಎಂಬ ಮಾತುಗಳು ಕೇಳಿ ಬರುತ್ತಿದೆ. ಮಳೆಯ ಕಾರಣಕ್ಕೆ ಔಟ್ ಟನ್ ಸಹ ಇಲ್ಲದಾಗಿದ್ದು ೨೭ರಿಂದ ೨೯ ಔಟ್ ಟನ್ ಬರುತ್ತಿದ್ದ ಕಾಫಿ ತೋಟಗಳಲ್ಲಿ ಈ ಬಾರಿ ೨೪ರಿಂದ ೨೬ ಔಟ್ ಟನ್‌ಗೆ ಕುಸಿದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಈ ಬಾರಿ ಇಳುವರಿ ಇಲ್ಲ, ಧಾರಣೆಯೂ ಇಲ್ಲ, ಔಟ್ ಟನ್ ಸಹ ಇಲ್ಲ. ಅಲ್ಲದೆ ಅಕಾಲಿಕ ಮಳೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ಹಂಗಾಮು ಸಹ ಇಲ್ಲ ಎಂಬ ಮಾತು ಕಾಫಿ ಬೆಳೆಗಾರರ ವಲಯದಿಂದ ಕೇಳಿ ಬರುತ್ತಿದೆ.ಹೌದು ಈಗಾಗಲೇ ತಾಲೂಕಿನಲ್ಲಿ ಶೇ. ೬೦ರಷ್ಟು ಕಾಫಿ ಕೊಯ್ಲು ಮುಗಿದಿದ್ದು ಕಾಫಿ ಕೊಯ್ಲು ನಡೆಸಿರುವ ಬೆಳೆಗಾರರು ಈ ಬಾರಿ ಇಳುವರಿ ಕುಂಠಿತ, ಬೆಲೆಯೂ ಇಲ್ಲ, ಇತ್ತ ಔಟ್ ಟನ್ ಸಹ ಇಲ್ಲ ಎಂಬ ಮಾತುಗಳನ್ನಾಡುತ್ತಿದ್ದಾರೆ.
ಇಳುವರಿ ಕುಸಿತಕ್ಕೆ ಕಾರಣ:ಕಳೆದ ಬಾರಿ ಮೇ ಮಧ್ಯಭಾಗದಿಂದ ಅಕ್ಟೋಬರ್ ತಿಂಗಳ ಅಂತ್ಯದವರೆಗೂ ಸುರಿದ ಆರು ತಿಂಗಳ ದೀರ್ಘ ಮಳೆ ಕಾಫಿ ಬೆಳೆಯ ಮೇಲೆ ಬಾರಿ ಪರಿಣಾಮ ಬೀರಿದ್ದು ಕಳೆದ ಬಾರಿಗೆ ಹೋಲಿಸಿದರೆ ಶೇ. ೩೦ರಿಂದ ೪೦ ಫಸಲು ಕುಸಿತ ಎಂಬ ಮಾತುಗಳು ಕೇಳಿ ಬರುತ್ತಿದೆ. ಮಳೆಯ ಕಾರಣಕ್ಕೆ ಔಟ್ ಟನ್ ಸಹ ಇಲ್ಲದಾಗಿದ್ದು ೨೭ರಿಂದ ೨೯ ಔಟ್ ಟನ್ ಬರುತ್ತಿದ್ದ ಕಾಫಿ ತೋಟಗಳಲ್ಲಿ ಈ ಬಾರಿ ೨೪ರಿಂದ ೨೬ ಔಟ್ ಟನ್‌ಗೆ ಕುಸಿದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬೆಲೆ ಕುಸಿತ:ಜಾಗತಿಕ ಕಾಫಿ ಉತ್ಪಾದನೆಯಲ್ಲಿ ಭಾರತ ಏಳನೇ ಸ್ಥಾನದಲ್ಲಿದ್ದು ನೆರಳಿನಾಶ್ರಯದಲ್ಲಿ ಬೆಳೆಯುವ ಭಾರತದ ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆ ಇದೆ. ಇದೇ ಕಾರಣಕ್ಕೆ ಕಳೆದ ಅರ್ಧ ದಶಕದಲ್ಲಿ ನಾಲ್ಕುಪಟ್ಟು ಕಾಫಿ ಧಾರಣೆ ಹೆಚ್ಚಾಗಿದೆ. ಆದರೆ, ಈ ಬೆಲೆ ಹೆಚ್ಚಳ ರಫ್ತುದಾರರಿಗೆ ಶಾಪವಾಗಿ ಪರಿಣಮಿಸಿದ್ದು ನಾಲ್ಕು ವರ್ಷದ ಹಿಂದೆ ಒಂದು ಕೋಟಿ ಬಂಡವಾಳಕ್ಕೆ ಕನಿಷ್ಠ ಇನ್ನೂರು ಟನ್ ಕಾಫಿ ರಫ್ತು ಮಾಡುತ್ತಿದ್ದ ರಫ್ತುದಾರರಿಗೆ ಇಂದು ಇಷ್ಟೇ ಬಂಡವಾಳಕ್ಕೆ ೨೦೦ ಟನ್ ಕಾಫಿ ರಫ್ತು ಮಾಡಲು ಮಾತ್ರ ಸಾಧ್ಯವಾಗುತ್ತಿದೆ. ಇದು ಅಧಿಕ ಬಂಡವಾಳ ಕಡಿಮೆ ಆದಾಯ ಎಂಬಂತಾಗಿದೆ. ಇದರಿಂದಾಗಿ ಸಾಕಷ್ಟು ರಫ್ತುದಾರರು ಭಾರತದ ಕಾಫಿ ಮಾರುಕಟ್ಟೆಗೆ ಬೆನ್ನು ತೋರಿದ್ದಾರೆ ಎಂಬ ಮಾತು ಮಾರುಕಟ್ಟೆಯಲ್ಲಿ ಕೇಳಿ ಬರುತ್ತಿದೆ. ಇದರಿಂದಾಗಿ ರಫ್ತುದಾರರ ಕೊರತೆ ಸಹ ಬೆಲೆ ಇಳಿಕೆಗೆ ಕಾರಣ ಎಂಬ ಮಾತಿದ್ದರೆ ಮತ್ತೊಂದೆಡೆ ಜಾಗತಿಕವಾಗಿ ಹೆಚ್ಚು ಕಾಫಿ ಬೆಳೆಯುವ ದೇಶಗಳಾದ ಇಂಡೋನೇಷ್ಯ, ವಿಯೆಟ್ನಾಂನಲ್ಲಿ ಕಳೆದ ಅರ್ಧ ದಶಕದಿಂದ ಪ್ರಕೃತಿಕ ವಿಕೋಪದಿಂದ ಈ ದೇಶಗಳಲ್ಲಿ ಕಾಫಿ ಗಣನೀಯವಾಗಿ ಕುಸಿತ ಕಂಡಿತ್ತು. ಇದೇ ಕಾರಣಕ್ಕೆ ಭಾರತದ ಕಾಫಿಗೆ ಚಿನ್ನದಂತಹ ಬೆಲೆ ಬಂದಿದೆ. ಆದರೆ, ಈ ಬಾರಿ ಈ ದೇಶಗಳಲ್ಲಿ ಕಾಫಿ ಉತ್ಪಾದನೆ ಹೆಚ್ಚಿದ್ದು ಭಾರತದಲ್ಲಿ ಕಾಫಿ ಕೊಯ್ಲು ನಡೆಸುವ ವೇಳೆಯೆ ಹೆಚ್ಚು ಕಾಫಿ ಬೆಳೆಯುವ ದೇಶಗಳಲ್ಲೂ ಕಾಫಿ ಕೊಯ್ಲಿಗೆ ಬಂದಿದೆ. ಇದೇ ಕಾರಣಕ್ಕೆ ಮಾರುಕಟ್ಟೆ ಕುಸಿತಗೊಂಡಿದೆ. ಅಲ್ಲದೆ ರಫ್ತುದಾರರು ಕಡಿಮೆ ದರಕ್ಕೆ ದೊರಕುವ ಇತರೆ ದೇಶದ ಕಾಫಿಯನ್ನು ಬಿಟ್ಟು ಭಾರತದ ಮಾರುಕಟ್ಟೆಗೆ ಆಗಮಿಸುತ್ತಿಲ್ಲ ಎಂಬ ಮಾತಿದೆ. ಮಳೆ ಬೆಳೆ ಹಾನಿ:
ಸದ್ಯ ವರ್ಷದ ಮೊದಲ ಮಳೆ ಜನವರಿ ಮಧ್ಯಭಾಗದಲ್ಲಿ ಕಾಫಿ ಬೆಳೆಯುವ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಹಲವೆಡೆ ೨೫ ಮೀ. ಮೀಟರ್‌ನಿಂದ ೭೫ ಮೀ. ಮೀಟರ್‌ನವರೆಗೆ ಸುರಿದಿದ್ದು ಕಾಫಿ ಬೆಳೆಯುವ ಪ್ರದೇಶಕ್ಕೆ ಇದು ಅಕಾಲಿಕ ಮಳೆ ಎಂಬ ಹೆಸರು ಪಡೆದಿದೆ. ಜನವರಿ ಮಧ್ಯಭಾಗದಲ್ಲಿ ಆಗತಾನೇ ರೋಬಸ್ಟ್ ಕಾಫಿ ಕೊಯ್ಲು ಆರಂಭವಾಗಿದ್ದು ಅಧಿಕ ಮಳೆ ಸುರಿದ ಪರಿಣಾಮ ಕಾಫಿ ಗಿಡಗಳಲ್ಲಿ ಹೂವು ಅರಳಿತ್ತು. ಪರಿಣಾಮ ಕಾಫಿ ಹೂವು ಮೂಡಿದ ವೇಳೆ ಫಸಲು ಕೀಳುವುದರಿಂದ ಹಾನಿ ಹೆಚ್ಚು ಎಂಬ ಕಾರಣಕ್ಕೆ ಹೂವು ಕಮರುವವರಗೆ ಸಾಕಷ್ಟು ಕಾಫಿ ತೋಟಗಳಲ್ಲಿ ಕೊಯ್ಲು ನಡೆಸುವುದನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಹೂವು ಕಮರಿದ ನಂತರ ಕೊಯ್ಲು ಆರಂಭವಾಗಿದೆ. ಆದರೆ, ಹೂವು ಹಾಳಾಗದಂತೆ ಕೊಯ್ಲು ನಡೆಸುವುದು ಅಸಾಧ್ಯ, ಇದು ಮುಂದಿನ ವರ್ಷದ ಕಾಫಿ ಫಸಲಿನ ಮೇಲೂ ದುಷ್ಪರಿಣಾಮ ಬೀರಲಿದೆ. ಅಲ್ಲದೆ ಹಣ್ಣು ಕೊಯ್ಲಿಗೂ ಮುನ್ನ ಮಳೆಯಾಗಿದ್ದು ಗಿಡದಲ್ಲಿ ಸಂಪೂರ್ಣ ಮೂಡಲು ಸಾಧ್ಯವಾಗಿಲ್ಲ. ಸದ್ಯ ಹೂವಾಗಿರುವುದನ್ನು ಉಳಿಸಿಕೊಳ್ಳಬೇಕಾದರೆ ಕನಿಷ್ಠ ೨೦ ದಿನಕ್ಕೂಮ್ಮೆ ಹನಿನೀರಾವರಿ ವ್ಯವಸ್ಥೆ ಮಾಡಲೇಬೇಕಿದೆ. ಇದರಿಂದ ಖರ್ಚು ಹೆಚ್ಚು. ಅಲ್ಲದೆ ಇಷ್ಟು ಪ್ರಮಾಣದ ನೀರಾವರಿ ವ್ಯವಸ್ಥೆ ಸಾಕಷ್ಟು ಬೆಳೆಗಾರರ ಬಳಿ ಇಲ್ಲ ಎಂಬ ಕೊರಗು ಕೇಳಿ ಬರುತ್ತಿದೆ. ಹೊಸಗಿಡಗಳಿಗೆ ಸಹಕಾರಿ:ಮೆಣಸು, ಅಡಿಕೆಗಲ್ಲದೆ ಕಳೆದ ವರ್ಷ ನಾಟಿ ಮಾಡಿರುವ ಎಲ್ಲ ವಾಣಿಜ್ಯ ಬೆಳೆಗಳಿಗೂ ಅಕಾಲಿಕ ಮಳೆ ಔಷಧಿಯಂತೆ ಕೆಲಸ ಮಾಡಿದ್ದು ಸಣ್ಣ ಗಿಡಗಳನ್ನು ಉಳಿಸಿಕೊಳ್ಳಲು ಹನಿನೀರಾವರಿ ಮಾಡಬೇಕಿದ್ದ ಬೆಳೆಗಾರರಿಗೆ ಅಕಾಲಿಕ ಮಳೆಯಿಂದ ತಪ್ಪಿದಂತಾಗಿದೆ.
* ಹೇಳಿಕೆ 1ಈ ಬಾರಿ ಇಳುವರಿ ಕಡಿಮೆ ಹಾಗೂ ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಧಾರಣೆಯು ಕಡಿಮೆಯಾಗಿದ್ದು, ಸಾಕಷ್ಟು ಬೆಳೆಗಾರರು ತಮ್ಮ ಉತ್ಪನ್ನವನ್ನು ಮಾರಾಟ ಮಾಡದೆ ಉತ್ತಮ ಧಾರಣೆಗಾಗಿ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.
- ಯಡೇಹಳ್ಳಿ ಆರ್ ಮಂಜುನಾಥ್, ಕಾಫಿ ಬೆಳೆಗಾರರು* ಹೇಳಿಕೆ 2
ಹೆಚ್ಚು ಕಾಫಿ ಬೆಳೆಯುವ ದೇಶಗಳಲ್ಲಿ ಈ ಬಾರಿ ಉತ್ತಮ ಇಳುವರಿ ಲಭಿಸಿರುವ ಪರಿಣಾಮ ಅಂತಾರಾಷ್ಟ್ರೀಯ ಕಾಫಿ ಮಾರುಕಟ್ಟೆಗೆ ಈ ಬಾರಿ ಹೆಚ್ಚಿನ ಕಾಫಿ ಹರಿದು ಬರುತ್ತಿರುವುದು ಭಾರತದ ಕಾಫಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತಕ್ಕೆ ಕಾರಣವಾಗಿದೆ.- ಧರ್ಮರಾಜ್, ಹೊಂಕರವಳ್ಳಿ, ಗೀತಾ ಕಾಫಿ ಟ್ರೇಡರ್