ಬಾದಾಮಿ ಉತ್ಖನನದಲ್ಲಿ ನಾಣ್ಯ, ಮೂಳೆ ಪತ್ತೆ

| Published : Apr 18 2025, 12:32 AM IST

ಸಾರಾಂಶ

ಐತಿಹಾಸಿಕ ಚಾಲುಕ್ಯರ ನಾಡಿನ ಬಾದಾಮಿ ಮೇಣಬಸದಿ ಗುಹೆಗಳ ನಾಲ್ಕನೇಯ ಜೈನ ಗುಹೆಯಿಂದ ಅಗಸ್ತ್ಯತೀರ್ಥ ಹೊಂಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಭಾರತೀಯ ಧಾರವಾಡದ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಕೈಗೊಂಡಿರುವ ಉತ್ಖನನ ಕಾರ್ಯದಲ್ಲಿ ಕೆಲವು ಹಳೆಯ ಕಾಲದ ನಾಣ್ಯಗಳು, ಮೂಳೆಗಳು ದೊರೆತಿವೆ.

ಕನ್ನಡಪ್ರಭ ವಾರ್ತೆ ಬಾದಾಮಿ

ಐತಿಹಾಸಿಕ ಚಾಲುಕ್ಯರ ನಾಡಿನ ಬಾದಾಮಿ ಮೇಣಬಸದಿ ಗುಹೆಗಳ ನಾಲ್ಕನೇಯ ಜೈನ ಗುಹೆಯಿಂದ ಅಗಸ್ತ್ಯತೀರ್ಥ ಹೊಂಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಭಾರತೀಯ ಧಾರವಾಡದ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಕೈಗೊಂಡಿರುವ ಉತ್ಖನನ ಕಾರ್ಯದಲ್ಲಿ ಕೆಲವು ಹಳೆಯ ಕಾಲದ ನಾಣ್ಯಗಳು, ಮೂಳೆಗಳು ದೊರೆತಿವೆ.

ಮೇಣಬಸದಿ ಗುಹೆಯಿಂದ ಅಗಸ್ತ್ಯತೀರ್ಥ ಹೊಂಡಕ್ಕೆ ಹೊಂದಿಕೊಂಡ ಭೂತನಾಥ ಸಮುಚ್ಚಯಕ್ಕೆ ತೆರಳುವ ಮಾರ್ಗದಲ್ಲಿ ಈ ಉತ್ಖನನ ನಡೆಯುತ್ತಿದೆ. ಈ ವೇಳೆ ಬಂಡೆಗಲ್ಲಿನ ಮೆಟ್ಟಿಲು, ಬಿಡಿಗಲ್ಲಿನ ಮೆಟ್ಟಿಲುಗಳು ದೊರೆತಿವೆ. ಇವು ಚಾಲುಕ್ಯರ ಕಾಲದ ಕುರುಹುಗಳಾಗಿರಬಹುದು ಎಂದೂ ಅಂದಾಜಿಸಲಾಗಿದೆ. ಮಾತ್ರವಲ್ಲ ಇನ್ನೂ ಉತ್ಖನನ ಕಾರ್ಯ ಮುಂದುವರಿದಿದ್ದು ಭೂಗರ್ಭದಲ್ಲಿ ಇತಿಹಾಸವನ್ನು ಹೊರತೆಗೆಯುವ ಯತ್ನ ಮುಂದುವರಿದಿದೆ.ಕಳೆದ ಹಲವು ದಿನಗಳಿಂದ ಇಲ್ಲಿ ಉತ್ಖನನ ಕಾರ್ಯ ಕೈಗೊಂಡಿರುವ ಇಲಾಖೆ ಅಧಿಕಾರಿಗಳಿಗೆ ಮೆಟ್ಟಿಲುಗಳ ಜೊತೆಗೆ ಮಣ್ಣಿನ ಮಡಿಕೆಯೊಂದು ದೊರೆತಿದೆ. ಇದರಲ್ಲಿ ಕೆಲ ಮೂಳೆ (ಎಲುಬು) ಮತ್ತು ಒಂದು ನಾಣ್ಯ ದೊರೆತಿದೆ. ಇದನ್ನು ಈಗಾಗಲೇ ಧಾರವಾಡ ವಲಯದಲ್ಲಿರುವ ಸಂಶೋಧನಾ ಕೇಂದ್ರಕ್ಕೆ ರವಾನಿಸಲಾಗಿದ್ದು, ಅದರ ಕುರಿತಾದ ಇತಿಹಾಸ ಹೊರಬರಬೇಕಿದೆ.ಮೂಳೆ ಮತ್ತು ನಾಣ್ಯದ ಕಾಲಮಾನದ ನಿಖರತೆ ತಿಳಿಯಲು ಇವುಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪರಿಶೀಲನೆ ನಂತರ ಕಾಲಮಾನ ಮತ್ತು ಇವುಗಳ ಇರುವಿಕೆಯ ಇತಿಹಾಸದ ಕುರಿತು ಮಾಹಿತಿ ತಿಳಿದು ಬರಲಿದೆ. ಇನ್ನು ಮೆಟ್ಟಿಲುಗಳನ್ನು ಪರಿಶೀಲಿಸಿರುವ ಅಧಿಕಾರಿಗಳು ಇದನ್ನು ವಿಶೇಷವಾಗಿ ಜೈನ ಸುಮುದಾಯಕ್ಕೆ ಸಂಬಂಧಿಸಿದ್ದು ಎಂದು ಅಂದಾಜಿಸಿದ್ದಾರೆ.ಜೈನ ಬಸದಿಗೆ ಸಂಪರ್ಕ:

ಆಗಿನ ಕಾಲದಲ್ಲಿ ಜೈನ ಧರ್ಮದ ಅನುಯಾಯಿಗಳು ಸರಳ ಮಾರ್ಗದಲ್ಲಿ ಸಂಚರಿಸದೇ ದುರ್ಗಮ ಮಾರ್ಗದಲ್ಲಿ ಸಂಚರಿಸುತ್ತಿದ್ದರು ಎನ್ನುವುದು ಇತಿಹಾಸತಜ್ಞರ ವಾದ. ಇದಕ್ಕೆ ಇತಿಹಾಸ ಪುಟಗಳಲ್ಲಿ ಒಂದು ವ್ಯಾಖ್ಯಾನವಿದೆ. ದೇವರನ್ನು ಕಾಣುವ ಮಾರ್ಗ ಸರಳವಾಗಿರಬಾರದು ದೇವರನ್ನು ಕಾಣಲು ಕಷ್ಟಪಟ್ಟು ತೆರಳಬೇಕು ಎಂಬ ಭಾವನೆ ಜೈನರದ್ದಾಗಿತ್ತು ಎಂಬ ಮಾತಿದೆ.ಉತ್ಖನನಕ್ಕೂ ಜೈನ ಗುಹೆಗೂ ಲಿಂಕ್:

ಉತ್ತರಾಭಿಮುಖವಾಗಿರುವ ಜೈನ ಗುಹೆಗೆ ಸೂಕ್ತ ಮಾರ್ಗವಿದ್ದರು ಕೂಡ ಅವರು ಗುಹೆಯ ಕೆಳಗೆ ಅಗಸ್ತ್ಯತೀರ್ಥ ಹೊಂಡಕ್ಕೆ ಹೊಂದಿಕೊಂಡಿರುವ ಅಂದಿನ ಕಾಲದ ದುರ್ಗಮ ಮಾರ್ಗದಲ್ಲಿ ಈ ರಸ್ತೆಯ(ಮೆಟ್ಟಿಲು)ನ್ನು ನಿರ್ಮಿಸಿ ಗುಹೆ ಪ್ರವೇಶಿಸುತ್ತಿದ್ದರು ಎಂಬ ತರ್ಕ ಕೂಡ ಇದೆ. ಹೀಗಾಗಿಯೇ ಇಲ್ಲಿ ಇದೀಗ ಒಂಬತ್ತು ಬಂಡೆಗಲ್ಲಿನ ಮೆಟ್ಟಿಲುಗಳು, ಐದಾರು ಬಿಡಿಗಲ್ಲಿನ ಮೆಟ್ಟಿಲುಗಳು ಪತ್ತೆಯಾಗಿವೆ. ಇದು ಮುಂದೆ ಕಾಣುವ ಜೈನ ಬಸದಿಗೆ ಸಂಪರ್ಕ ಕಲ್ಪಿಸುವ ಮೆಟ್ಟಿಲುಗಳಾಗಿವೆ. ಇದು ಹೊಂಡದ ಕೋಡಿ ಹರಿಯುವ ಅಗಸಿ ಬಾಗಿಲಿನಿಂದ ಜೈನ ಬಸದಿಗೆ ಸಂಪರ್ಕದ ಮೆಟ್ಟಿಲುಗಳಾಗಿವೆ ಎಂಬುದು ಇತಿಹಾಸಕಾರರ ವಾದ.ರಾಜದಾರಿ ಪತ್ತೆ:

ಸ್ಮಾರಕಗಳಿಗೆ ಈಗಿರುವ ದಾರಿಯ ಜೊತೆಗೆ ರಾಜದಾರಿ ಇರುವ ಬಗ್ಗೆ ಮಾಹಿತಿ ಇದೆ. ಇದನ್ನು ಗುರುತಿಸಲು ಇಲಾಖೆಯಿಂದ ಅನುಮತಿ ಕೂಡ ದೊರೆತಿದೆ. ಹೀಗಾಗಿ ಬಸದಿ ಪರಿಸರದಲ್ಲಿ ಉತ್ಖನನ ಕಾರ್ಯಕ್ಕೆ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಉತ್ಖನನ ಕೈಗೊಂಡಾಗ ಜೈನ್ ಬಸದಿಯ ಕೆಳಗೆ ಈ ಪರ್ಯಾಯ (ರಾಜದಾರಿ) ಪತ್ತೆಯಾಗಿದೆ.ಮೇಣಬಸದಿ ಗುಹೆಗಳಿಗೆ ಒಂದೇ ಮುಖ್ಯ ಮಾರ್ಗ ಇರುವುದರಿಂದ ಪರ್ಯಾಯ ಮಾರ್ಗ ಕಂಡುಕೊಳ್ಳಲು ಈ ಉತ್ಖನನ ಕಾರ್ಯಕ್ಕೆ ಕೈ ಹಾಕಿದಾಗ ಜೈನ ಬಸದಿಗೆ ಸಂಪರ್ಕಿಸುವ ಮೆಟ್ಟಿಲುಗಳು ಕಂಡುಬಂದಿವೆ. ಇದೀಗ ಇದನ್ನು ಇನ್ನಷ್ಟು ಆಳವಾಗಿ ಅಧ್ಯಯನ ಮತ್ತು ಪರಿಶೀಲನೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.

- ರಮೇಶ ಮೂಲಿಮನಿ,

ಭಾ.ಪು.ಸ.ಇ.ಅಧಿಕಾರಿ.