ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ 19ರಂದು ಹೋರಾಟ

| Published : Apr 18 2025, 12:32 AM IST

ಸಾರಾಂಶ

ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದು ಬಲವಂತವಾಗಿ ಮುಸ್ಲಿಂ ಸಮಾಜದ ಮೇಲೆ ಈ ಕಾಯ್ದೆಯನ್ನು ಹೇರಲಾಗುತ್ತಿದೆ. ಇದನ್ನು ಖಂಡಿಸಿ ಏ. 19ರಂದು ಗದಗ ನಗರದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಜಮಿಯತ್-ಎ-ಉಲ್ಲಮಾ ಗದಗ ಜಿಲ್ಲಾ ಘಟಕದ ಕಾರ್ಯದರ್ಶಿ ಮೌಲಾನಾ ಮುಫ್ತಿಆರೀಫ ಕಾಶ್ಮಿ ಧಾರವಾಡ ಹೇಳಿದರು.

ಕನ್ನಡಪ್ರಭ ವಾರ್ತೆ ಗದಗ

ದೇಶದ ಕೋಟ್ಯಂತರ ಮುಸ್ಲಿಂ ಸಮುದಾಯದ ಜನರ ವಿರೋಧದ ನಡುವೆಯು ನಮ್ಮ ದೇಶದ ಸಂವಿಧಾನದ ವಿರುದ್ಧವಾಗಿ ಕರಾಳ ವಕ್ಫ್ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವುದನ್ನು ನಾವು ಖಂಡಿಸುತ್ತೇವೆ. ಒಂದು ಸಮುದಾಯವನ್ನು ಹತ್ತಿಕ್ಕುವ ಉದ್ದೇಶದಿಂದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದು ಬಲವಂತವಾಗಿ ಮುಸ್ಲಿಂ ಸಮಾಜದ ಮೇಲೆ ಈ ಕಾಯ್ದೆಯನ್ನು ಹೇರಲಾಗುತ್ತಿದೆ. ಇದನ್ನು ಖಂಡಿಸಿ ಏ. 19ರಂದು ಗದಗ ನಗರದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಜಮಿಯತ್-ಎ-ಉಲ್ಲಮಾ ಗದಗ ಜಿಲ್ಲಾ ಘಟಕದ ಕಾರ್ಯದರ್ಶಿ ಮೌಲಾನಾ ಮುಫ್ತಿಆರೀಫ ಕಾಶ್ಮಿ ಧಾರವಾಡ ಹೇಳಿದರು.

ಅವರು ಗುರುವಾರ ಗದಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಕ್ಫ್ ಆಸ್ತಿಯು ದೇಶದಲ್ಲಿರುವ ನಮ್ಮ ಪ್ರಾಥನಾ ಸ್ಥಳಗಳಿಗೆ, ಧಾರ್ಮಿಕ ಕ್ಷೇತ್ರಗಳಲ್ಲಿ ಧರ್ಮದ ಆಚರಣೆಗಳನ್ನು ಮಾಡಲು ದಾನಿಗಳು ತಮ್ಮ ಸ್ವಂತ ಆಸ್ತಿಯನ್ನು ದಾನ ಮಾಡಿರುವ ಆಸ್ತಿಗಳು ವಕ್ಫ್ ಆಗಿವೆ, ದಾನ ಮಾಡಿರುವ ವಕ್ಫ್ ಆಸ್ತಿಗಳನ್ನು ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಮಾಡುವ ಮೂಲಕ ನಮ್ಮ ಧಾರ್ಮಿಕ ಆಸ್ತಿಗಳನ್ನು ಕಿತ್ತು ಕೊಳ್ಳುವ ಕೇಂದ್ರ ಸರ್ಕಾರದ ಹುನ್ನಾರವಾಗಿದೆ. ಇಂತಹ ಜನವಿರೋಧಿ ಕರಾಳ ಕಾಯ್ದೆಯನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದರು.

ಅಂಜುಮನ್ ಸಂಸ್ಥೆ ಕಾರ್ಯದರ್ಶಿ ಇಮ್ತಿಯಾಜ ಮಾನ್ವಿ, ಅಂಜುಮನ್-ಎ-ಇಸ್ಲಾಂ ಸಂಸ್ಥೆ ಅಧ್ಯಕ್ಷ ಮಹ್ಮದಯುಸುಫ ನಮಾಜಿ, ಸಮಾಜದ ಮುಖಂಡರಾದ ಸೈಯದಖಾಲೀದ ಕೊಪ್ಪಳ, ಎಂ.ಬಿ. ನದಾಫ ಮುಂತಾದವರು ಮಾತನಾಡಿದರು. ಹೋರಾಟದಲ್ಲಿ ಸಮಾಜದ ಹಿರಿಯರು ಮತ್ತು ಯುವಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಅಂಜುಮನ್‌ ಸಂಸ್ಥೆ ಉಪಾಧ್ಯಕ್ಷ ಬಾಬಾಜಾನ ಬಳಗಾನೂರ, ಜೂನಸಾಬ ಉಮಚಗಿ, ಎಂ.ಎಂ.ಮಾಳೆಕೊಪ್ಪ, ರಫೀಕ ಜಮಾಲಖಾನವರ, ಉಮರಫಾರುಖ ಹುಬ್ಬಳ್ಳಿ, ಅನ್ವರ ಶಿರಹಟ್ಟಿ, ಮಹ್ಮಮದಹನೀಫ ಶಾಲಗಾರ, ನಿಜಾಮುದ್ದಿನ ಕಾಟಾಪೂರ ಮುಂತಾದವರು ಉಪಸ್ಥಿತರಿದ್ದರು.