ಸೋಮರಡ್ಡಿ ಅಳವಂಡಿ ಕೊಪ್ಪಳ

ಇಲ್ಲಿಯ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ತಿಮ್ಮಾರಡ್ಡಿ ಮೇಟಿ ಅವರಿಗೆ ಕೋಕ್ ನೀಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.

ಸರ್ಕಾರದ ಅಧೀನ ಕಾರ್ಯದರ್ಶಿ ಶಶಿಕಲಾ ಈ ಕುರಿತು ಆದೇಶ ಹೊರಡಿಸಿದ್ದು, ಸ್ಥಳೀಯವಾಗಿಯೇ ಆಡಳಿತಾಧಿಕಾರಿ ನೇಮಕ ಮಾಡಿಕೊಳ್ಳುವುದಕ್ಕೆ ಅವಕಾಶ ಇಲ್ಲ.ಸರ್ಕಾರದ ಮಂಜೂರಾತಿ ಇಲ್ಲದೆ ನೇಮಕ ಮಾಡಿಕೊಳ್ಳುವಂತೆ ಇಲ್ಲ. ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಮಂಜೂರಾದ ಹುದ್ದೆಗಳಲ್ಲಿ ಆಡಳಿತಾಧಿಕಾರಿ ಹುದ್ದೆ ಇರುವುದಿಲ್ಲ.ಹೀಗಾಗಿ ಕೊಪ್ಪಳ ವಿವಿಯಲ್ಲಿ ಇದುವರೆಗೂ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ತಿಮ್ಮಾರಡ್ಡಿ ಮೇಟಿ ಅವರನ್ನುಈ ಕೂಡಲೇ ಬಿಡುಗಡೆ ಮಾಡಿ ಸರ್ಕಾರಕ್ಕೆ ವರದಿ ಮಾಡುವಂತೆ ಆದೇಶಿಸಲಾಗಿದೆ. ಈ ಕುರಿತು ಅಧಿಕೃತ ಪತ್ರವೇ ಕೊಪ್ಪಳ ವಿವಿ ಕುಲಪತಿಗಳಿಗೆ ಬಂದಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಾನುಸಾರ ತಿಮ್ಮಾರಡ್ಡಿ ಮೇಟಿ ಅವರನ್ನು ಬಿಡುಗಡೆ ಮಾಡಲಾಗಿದೆ.

ಆದೇಶದ ವಿವಾದ: ಸರ್ಕಾರದ ಅಧೀನ ಕಾರ್ಯದರ್ಶಿ ಶಶಿಕಲಾ ಸಿ.ಅವರು ತಮ್ಮ ಆದೇಶ ಪ್ರತಿಯಲ್ಲಿ ಹಿರಿಯ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ ಪೂಜಾರ ನೀಡಿದ ದೂರಿನ ಆಧಾರದ ಮೇಲೆ ಕ್ರಮ ವಹಿಸಿರುವ ಕುರಿತು ಉಲ್ಲೇಖ ಮಾಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಡಾ.ಬಸವರಾಜ ಪೂಜಾರ ಕನ್ನಡಪ್ರಭದೊಂದಿಗೆ ಮಾತನಾಡಿ, ನಾನು ಯಾವುದೇ ದೂರು ನೀಡಿಲ್ಲ. ಆದರೂ ಕೂಡಾ ಸರ್ಕಾರದ ಮುಖ್ಯಕಾರ್ಯದರ್ಶಿ ಶಶಿಕಲಾ ಸಿ. ಆಡಳಿತಾಧಿಕಾರಿ ಬಿಡುಗಡೆ ಮಾಡುವ ಆದೇಶದಲ್ಲಿ ನಾನು ದೂರು ಸಲ್ಲಿಸಿದ್ದು, ಅದರ ಆಧಾರದಲ್ಲಿಯೇ ಕ್ರಮಕೈಗೊಂಡಂತೆ ಆದೇಶ ಪತ್ರದಲ್ಲಿ ಹೇಳಿದ್ದಾರೆ.


ಅಚ್ಚರಿ ಎಂದರೆ ನಾನು ಕೊಪ್ಪಳ ವಿವಿ ಆಡಳಿತಾಧಿಕಾರಿ ತಿಮ್ಮಾರಡ್ಡಿ ಮೇಟಿ ಅವರನ್ನು ಬಿಡುಗಡೆ ಮಾಡುವಂತೆ ಅಥವಾ ಈ ಹುದ್ದೆ ನೇಮಕ ಅನಧಿಕೃತ ಸೇರಿದಂತೆ ಯಾವುದೇ ದೂರು ಸಲ್ಲಿಸಿಲ್ಲ. ಆದರೂ ನನ್ನ ಹೆಸರಿನಲ್ಲಿ ದೂರು ಸಲ್ಲಿಸಲಾಗಿದ್ದು ಯಾರು ಎನ್ನುವುದು ನನಗೂ ಗೊತ್ತಾಗುತ್ತಿಲ್ಲ. ಇದುವರೆಗೂ ಸರ್ಕಾರದ ಅಧೀನ ಕಾರ್ಯದರ್ಶಿಗಳಾಗಲಿ ಅಥವಾ ಕೊಪ್ಪಳ ವಿವಿಯಾಗಲಿ ಈ ಕುರಿತು ನನ್ನೊಂದಿಗೆ ಯಾವುದೇ ಪತ್ರ ವ್ಯವಹಾರ ಮಾಡಿಲ್ಲ. ನಾನು ದೂರು ಸಲ್ಲಿಸದೆ ಇರುವುದರಿಂದ ಈ ಪ್ರಶ್ನೆಯೇ ಬರುವುದಿಲ್ಲ. ಆದರೆ, ಕ್ರಮ ಕೈಗೊಂಡು ಮಾಡಿರುವ ಆದೇಶ ಪ್ರತಿಯಲ್ಲಿ ನನ್ನ ಹೆಸಲು ಉಲ್ಲೇಖ ಮಾಡಿದ್ದು ಹೇಗೆ ಎನ್ನುವುದು ನನಗೆ ತಿಳಿಯದಾಗಿದೆ ಎಂದು ಡಾ.ಬಸವರಾಜ ಪೂಜಾರ ಹೇಳಿದ್ದಾರೆ.

ದೂರು ಕೊಟ್ಟವರ ಪತ್ತೆಯಾಗಲಿ: ಕೊಪ್ಪಳ ವಿವಿ ಆಡಳಿತಾಧಿಕಾರಿ ತೆಗೆದು ಹಾಕುವಂತೆ ದೂರು ಕೊಟ್ಟಿದ್ದು ಯಾರು ಎನ್ನುವುದು ಈಗ ಪತ್ತೆಯಾಗಬೇಕಾಗಿದೆ.ಸರ್ಕಾರದ ಅಧೀನ ಕಾರ್ಯದರ್ಶಿಗಳಿಗೆ ದೂರದಾರನ ಹೆಸರನ್ನೇ ತಪ್ಪಾಗಿ ನೀಡಿ ದೂರು ಕೊಟ್ಟಿದ್ದು ಯಾರು ಎನ್ನುವುದು ಗೊತ್ತಾಗಬೇಕಾಗಿದೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

ಯಾರದ್ದೋ ಹೆಸರಿನಲ್ಲಿ ಮತ್ಯಾರೋ ದೂರು ಕೊಡುವುದಾದರೆ ಹೇಗೆ ಎನ್ನುವುದು ಈಗ ಕೊಪ್ಪಳ ವಿವಿ ವ್ಯಾಪ್ತಿಯಲ್ಲಿ ಭಾರಿ ಚರ್ಚೆಯಾಗುತ್ತಿರುವ ವಿಷಯವಾಗಿದೆ.

ಕೋಟ್

ಸರ್ಕಾರದ ಆದೇಶವಾಗಿರುವ ಹಿನ್ನೆಲೆಯಲ್ಲಿ ನಾನು ಕೊಪ್ಪಳ ವಿವಿ ಆಡಳಿತಾಧಿಕಾರಿ ಹುದ್ದೆಯಿಂದ ಬಿಡುಗಡೆಯಾಗಿದ್ದೇನೆ, ಉಳಿದಂತೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಆಡಳಿತಾಧಿಕಾರಿ ತಿಮ್ಮಾರಡ್ಡಿ ಮೇಟಿ ತಿಳಿಸಿದ್ದಾರೆ.

ನಾನು ಯಾರ ವಿರುದ್ಧವೂ ದೂರು ನೀಡಿಲ್ಲ. ಆದರೆ, ಸರ್ಕಾರದ ಆದೇಶದಲ್ಲಿ ನನ್ನ ಹೆಸರು ಉಲ್ಲೇಖವಾಗಿರುವುದು ನನಗೆ ಅಚ್ಚರಿಯಾಗಿದೆ. ಇದುವರೆಗೂ ನನಗೆ ಯಾವುದೇ ಮಾಹಿತಿಯೂ ಬಂದಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ ಪೂಜಾರ ತಿಳಿಸಿದ್ದಾರೆ.