ವೀರಶೈವ ಮುಕ್ತಿಧಾಮಕ್ಕೆ ಶೀತಲ ಶವಪೆಟ್ಟಿಗೆ ಕೊಡುಗೆ

| Published : Oct 19 2025, 01:01 AM IST / Updated: Oct 19 2025, 01:02 AM IST

ಸಾರಾಂಶ

ಪಟ್ಟಣದ ಹಿಂದೂಸ್ಥಾನ ಟ್ರಾನ್ಸಪೋರ್ಟ್ ಕಂಪನಿ ಮಾಲೀಕರು ಸ್ಥಳೀಯ ವೀರಶೈವ ಮುಕ್ತಿಧಾಮಕ್ಕೆ ಮೃತದೇವವಿಡುವ ಶೀತಲ ಶವಪೆಟ್ಟಿಗೆ (ಡೆಡ್ ಬಾಡಿ ಫ್ರೀಜರ್) ಯನ್ನು ಉಚಿತವಾಗಿ ಹಸ್ತಾಂತರಿಸಿದರು.

ಬ್ಯಾಡಗಿ: ಪಟ್ಟಣದ ಹಿಂದೂಸ್ಥಾನ ಟ್ರಾನ್ಸಪೋರ್ಟ್ ಕಂಪನಿ ಮಾಲೀಕರು ಸ್ಥಳೀಯ ವೀರಶೈವ ಮುಕ್ತಿಧಾಮಕ್ಕೆ ಮೃತದೇವವಿಡುವ ಶೀತಲ ಶವಪೆಟ್ಟಿಗೆ (ಡೆಡ್ ಬಾಡಿ ಫ್ರೀಜರ್) ಯನ್ನು ಉಚಿತವಾಗಿ ಹಸ್ತಾಂತರಿಸಿದರು.

ಇಲ್ಲಿನ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಹಸ್ತಾಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವರ್ತಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ, ವಿವಿಧ ಧರ್ಮ ಭಾಷೆ ಹಾಗೂ ಸಂಸ್ಕೃತಿಯ ಜನರು ಒಂದೇ ದೇಶದಲ್ಲಿ ಸಹೋದರತೆಯಿಂದ ಬಾಳಿದಂತಹ ಭಾರತದಲ್ಲಿ ಇತ್ತೀಚೆಗೆ ಧರ್ಮದ ಆಧಾರದ ಮೇಲೆ ಪರಸ್ಪರ ಕೆಸರೆರಚಾಟ ನಡೆಸಿದ್ದು ನಮಗರಿವಿಲ್ಲದಂತೆ ಸಮಾಜ ವಿಘಟನೆಯತ್ತ ಸಾಗಿದ್ದು ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದೇವೆ. ಇದರಿಂದ ನಷ್ಟವೇ ಹೊರತು ಯಾರಿಗೂ ಲಾಭವಿಲ್ಲ ಎಂದರು.

ಮಾದರಿಯಾದ ಯುವಕರು: ಪ್ರಸ್ತುತ ದಿನಮಾನಗಳಲ್ಲಿ ಹಿಂದು-ಮುಸ್ಲಿಂ ಎಂಬ ಬೇಧ ಭಾವ ಹೆಚ್ಚಾಗುತ್ತಿದೆ. ಯುವಕರು ದಾರಿಯನ್ನು ತಪ್ಪುತ್ತಿದ್ದಾರೆ, ಆದರೆ ಇಲ್ಲಿರುವ ಹಿಂದೂಸ್ಥಾನ ಟ್ರಾನ್ಸಪೋರ್ಟ ಕಂಪನಿ ಮಹಮ್ಮದ ಅಲಿ ಹಾಗೂ ಸಂತೋಷ ಗುರೇಮಟ್ಟಿ ಎಂಬವರು 25 ವರ್ಷಗಳಿಂದ ಟ್ರ್ರಾನ್ಸಪೋರ್ಟ ಕಂಪನಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುವ ಮೂಲಕ ಜಾತಿಯ ಭಿನ್ನಾಭಿಪ್ರಾಯ ತೊಡೆದು ಹಾಕಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮಲ್ಲೂರ ರಸ್ತೆಯಲ್ಲಿ ನಿರ್ಮಿಸಿರುವ ವೀರಶೈವ ಮುಕ್ತಿಧಾಮ ರಾಜ್ಯದಲ್ಲಿಯೇ ಭಿನ್ನವಾಗಿದ್ದು ಇಂತಹ ಮುಕ್ತಿಧಾಮಕ್ಕೆ ಡೆಡ್ ಬಾಡಿ ಫ್ರಿಜರ್ ವಿತರಿಸಿ ಮಾನವೀಯತೆ ಮರೆದಿದ್ದಾರೆ ಎಂದರು.ಮೃತದೇಹ ಸಂರಕ್ಷಣೆಗೆ ಸಹಕಾರಿ: ವರ್ತಕರ ಸಂಘದ ಕಾರ್ಯದರ್ಶಿ ರಾಜು ಮೋರಗೇರಿ ಮಾತನಾಡಿ, ಪಟ್ಟಣದಲ್ಲಿನ ಮುಕ್ತಿಧಾಮ ರಾಜ್ಯದಲ್ಲಿಯೇ ವಿಶೇಷ ಎನಿಸಿದೆ, ಇದಕ್ಕೆ ಎಲ್ಲ ವರ್ತಕರ ಹಾಗೂ ಬ್ಯಾಡಗಿ ಜನತೆ ಕೊಡುಗೆ ಸಾಕಷ್ಟಿದೆ ಇಂತಹ ಮುಕ್ತಿಧಾಮಕ್ಕೆ ಹಿಂದೂಸ್ಥಾನ ಟ್ರಾನ್ಸಪೋರ್ಟ ಕಂಪನಿ ಮಾಲೀಕರು ಶೀತಲ ಶವಪೆಟ್ಟಿಗೆ ನೀಡಿದ್ದು, ಕೆಲವು ವಿಶೇಷ ಸಂದರ್ಭಗಳಲ್ಲಿ ಸಂಬಂಧಿಕರು ವಿದೇಶಗಳಿಂದ ಬರುವ ಸಮಯದಲ್ಲಿ ಮೃತದೇಹವನ್ನಿಟ್ಟು ಅಂತಿಮ ದರ್ಶನ ಪಡೆಯಲು ಸಹಕಾರಿಯಾಗಲಿದೆ ಎಂದರು.

ಇದೇ ವೇಳೆ ವರ್ತಕರ ಸಂಘದ ವತಿಯಿಂದ ಮಹಮ್ಮದ ಅಲಿ ಹಾಗೂ ಸಂತೋಷ ಗುರೇಮಟ್ಟಿ ಅವರನ್ನ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ವರ್ತಕರಾದ ಶಂಕರಲಿಂಗಪ್ಪ ಸುಂಕಾಪುರ, ಎಂ.ಬಿ. ಹುಚಗೊಂಡರ, ಎಂ.ಎನ್. ಆಲದಗೇರಿ, ಎಸ್.ಜಿ. ಚಂದ್ರಾಪಟ್ಟಣ, ಜೆ.ವಿ. ರೋಣದ, ಚಂದ್ರಶೇಖರ ಅಂಗಡಿ, ಎ.ಎಂ. ಹಿರೇಮಠ, ಎಂ.ಟಿ. ಹಾವೇರಿ, ರಾಮಣ್ಣ ಉಕ್ಕುಂದ, ಅರುಣಕುಮಾರ ಪಾಟೀಲ, ಪಾಂಡುರಂಗ ಸುತಾರ ಸೇರಿದಂತೆ ಹಲವರು ಭಾಗವಹಿಸಿದ್ದರು.