ಬಿಜೆಪಿಯಲ್ಲಿ ಶೀತಲ ಸಮರ, ಕಾಂಗ್ರೆಸ್‌ಗೆ ಬಂಡಾಯದ ಕಾವು!

| Published : Mar 30 2024, 12:51 AM IST

ಸಾರಾಂಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎರಡು ಪಕ್ಷಗಳ ಅಭ್ಯರ್ಥಿಗಳಿಂದ ಮಠ, ಮಂದಿರಗಳ ದರ್ಶನ, ಮಠಾಧೀಶರಿಂದ ಆಶೀರ್ವಾದ ಸಾಂಗವಾಗಿದ್ದು, ಇನ್ನೊಂದೆಡೆ ಅತೃಪ್ತರ ಅಸಮಾಧಾನ ನಿವಾರಿಸಲು ಯತ್ನ ನಡೆದಿದ್ದು ಪಕ್ಷದ ಗೆಲುವೇ ಗುರಿ ಮಂತ್ರವಾಗಿದೆ.

ನಾಗರಾಜ ಎಸ್.ಬಡದಾಳ್‌

ಕನ್ನಡಪ್ರಭ ವಾರ್ತೆ, ದಾವಣಗೆರೆಇಬ್ಬರು ಬೀಗರ ಮನೆಗಳ ಹಿರಿಯ ಮತ್ತು ಕಿರಿಯ ಸೊಸೆಯಂದಿರು ಚುನಾವಣಾ ಸಮರಕ್ಕೆ ನಾಮಪತ್ರ ಸಲ್ಲಿಕೆಗೆ ಮುನ್ನವೇ ಪ್ರಚಾರದಲ್ಲಿ ಗಮನ ಸೆಳೆಯುತ್ತಿದ್ದರೆ, ಬಿಜೆಪಿ-ಕಾಂಗ್ರೆಸ್‌ ಪಕ್ಷಗಳಿಗೆ ಸಹಜವಾಗಿಯೇ ಅತೃಪ್ತರ ಆತಂಕವಂತೂ ಒಳಗೊಳಗೆ ಬಿಡದೇ ಕಾಡುತ್ತಿದೆ.

ಕಳೆದ 4 ಅವಧಿಗೆ ಸತತವಾಗಿ ಆಯ್ಕೆಯಾದ ಸಂಸದ ಜಿ.ಎಂ.ಸಿದ್ದೇಶ್ವರ ಬದಲಿಗೆ ಪತ್ನಿ ಗಾಯತ್ರಿ ಸಿದ್ದೇಶ್ವರಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಸಿದ್ದೇಶ್ವರ್‌ಗೆ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಜಿ.ಕರುಣಾಕರ ರೆಡ್ಡಿ ನೇತೃತ್ವದ 11 ಜನರ ಗುಂಪು ಸದ್ಯಕ್ಕಂತೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ರಾಧಾಮೋಹನ ಅಗರವಾಲ್‌, ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮಧ್ಯ ಪ್ರವೇಶದಿಂದ ಸಿಟ್ಟು ಶಮನವಾದಂತೆ ತೋರುತ್ತಿದೆ.

ಬಿಜೆಪಿ ನಾಯಕರ ಮನವೊಲಿಕೆಯಾದರೂ ಸಂಧಾನ ಸಭೆಯಲ್ಲಿ ಎರಡೂ ಗುಂಪಿನವರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಕಾಂಗ್ರೆಸ್ ಪಕ್ಷಕ್ಕೆ ಸದಾ ಸೆಡ್ಡು ಹೊಡೆದು ಬಂದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್‌ ವಿರುದ್ಧ ಶಿಸ್ತುಕ್ರಮಕ್ಕೆ ಪತ್ರ ಬರೆದ ಅತೃಪ್ತರ ಗುಂಪು ರಾಜ್ಯಾಧ್ಯಕ್ಷರಿಗೆ ನೀಡಿದೆ. ಈ ಪತ್ರ ಈಗ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದೆ. ಗಾಯತ್ರಿ ಸಿದ್ದೇಶ್ವರ್‌ ಟಿಕೆಟ್ ಘೋಷಿಸಿದ್ದು ಬದಲಿಸಲು ಸಾಧ್ಯವಿಲ್ಲವೆಂಬ ನಾಯಕರ ಹೇಳಿಕೆ ನಂತರ ಅತೃಪ್ತರ ಗುಂಪು ತಂಡ ಯಶವಂತರಾವ್ ವಿರುದ್ಧ ಕ್ರಮಕ್ಕೆ ಪತ್ರ ಬರೆದಿದೆ. ಯಶವಂತರಾವ್ ವಿರುದ್ಧ ಕ್ರಮವಾದರೆ, ಸಿದ್ದೇಶ್ವರ್‌ಗೆ ಪಾಠ ಕಲಿಸಿದಂತೆ ಎಂಬ ಲೆಕ್ಕಾಚಾರ ಇದರ ಹಿಂದೆ ಇದೆ ಎಂಬ ಮಾತು ಕಮಲ ಪಕ್ಷದ ಅಂಗಳದಲ್ಲೇ ಕೇಳಿ ಬರುತ್ತಿದೆ.

ದಿವಂಗತ ಜಿ.ಮಲ್ಲಿಕಾರ್ಜುನಪ್ಪ ದಾವಣಗೆರೆ ಕ್ಷೇತ್ರಕ್ಕೆ ಸ್ಪರ್ಧಿಸಿದಾಗಿನಿಂದಲೂ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಸಂಸದ ಜಿ.ಎಂ.ಸಿದ್ದೇಶ್ವರ ಜೋಡಿ ಎತ್ತಿನಂತೆ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ, ಭದ್ರ ನೆಲೆ ಒದಗಿ ಸಿದವರು. ಆಗಿನಿಂದಲೂ ಸಿದ್ದೇಶ್ವರ ಜೊತೆಗೆ ನೆರಳಿನಂತೆ ನಿಂತು ಕಾಂಗ್ರೆಸ್ಸಿಗೆ ಉತ್ತರ ನೀಡುತ್ತಿದ್ದ ಯಶವಂತರಾವ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿರುವ ಬಗ್ಗೆ ಅನೇಕರಿಂದ ತೀವ್ರ ಆಕ್ಷೇಪ, ವಿರೋಧ ವ್ಯಕ್ತವಾಗುತ್ತಿದೆ. ನರೇಂದ್ರ ಮೋದಿ ಪ್ರಧಾನಿ ಆಗಬೇಕೆನ್ನುವ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳಿಗೆ ಕಾರ್ಯಕರ್ತರೂ ರೋಸಿದ್ದಾರೆ. ತುಂಬಿದ ಮನೆಯಂತಿದ್ದ, ಬಿಜೆಪಿ ಅಧಿಕಾರ ಇದ್ದಾಗ ಜಿಲ್ಲೆಯಿಂದ ಆಯ್ಕೆಯಾಗಿದ್ದ ಪ್ರತಿ ಶಾಸಕರಿಗೂ ಸಚಿವ ಸ್ಥಾನ ಅಥವಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿತ್ತು. ಆ ಒಗ್ಗಟ್ಟು, ಶಿಸ್ತು ಏನಾಯ್ತು? ಅಂತಹ ಸುವರ್ಣ ದಿನಗಳನ್ನು ಕಂಡ ಬಿಜೆಪಿ ಈಗ ಮುದುಡಿದ ತಾವರೆ ಆಗದಿರಲಿ ಎಂಬುದು ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯವಾಗಿದೆ.ಅತೃಪ್ತ ನಾಯಕರ ಗುಂಪಿನ ಅಸಮಾಧಾನ ಉರಿಯುತ್ತಿದ್ದಾಗಲೇ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಮ್ಮ ಪಾಡಿಗೆ ತಾವೆಲ್ಲರಿಗೂ ಅಣ್ಣ ಅಂತಲೇ ಕರೆಯುತ್ತೇನೆ. ಎಲ್ಲರೂ ನನ್ನ ಪ್ರಚಾರಕ್ಕೆ ಬಂದೇ ಬರುತ್ತಾರೆಂಬ ವಿಶ್ವಾಸಇದೆ ಎನ್ನುತ್ತಾ, ದಾವಣಗೆರೆ, ಚಿತ್ರದುರ್ಗ ಅವಳಿ ಜಿಲ್ಲೆಗಳ ಮಠಗಳಿಗೆ ತೆರಳಿ, ಮಠಾಧೀಶರ ಆಶೀರ್ವಾದ ಪಡೆಯುತ್ತಾ, ತಮ್ಮ ಪಾಡಿಗೆ ಮುಖಂಡರು, ಕಾರ್ಯಕರ್ತರ ಜೊತೆಗೆ ಪ್ರಚಾರ ಕೈಗೊಂಡಿದ್ದಾರೆ. ಪುಣ್ಯಕ್ಷೇತ್ರ,ಧಾರ್ಮಿಕ ಸ್ಥಳಗಳಿಗೂ ಹೋಗಿ, ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನು, ಪಾಲಿಕೆಯ ಮೊದಲ ಅವದಿಯ 22 ಜನ ಮಾಜಿ ಸದಸ್ಯರ ಗುಂಪು ಪಕ್ಷ ತಮ್ಮನ್ನು ಕಡೆಗಣಿಸುತ್ತಿದೆಯೆಂದು ಹೊಟೆಲ್ ವೊಂದರಲ್ಲಿ ಮಧ್ಯಾಹ್ನ ಭೋಜನ ಕೂಟದ ಹೆಸರಲ್ಲಿ ಸಭೆ ನಡೆಸಿ, ಚರ್ಚಿಸಿದ್ದು ಬಿಜೆಪಿಗೆ ಮತ್ತಷ್ಟು ತಲೆ ನೋವಿಗೆ ಕಾರಣವಾಗಿದೆ.ಇತ್ತ ಡಾ.ಪ್ರಭಾ ಪ್ರಚಾರ, ಅತ್ತ ವಿನಯ್ ಪ್ರವಾಸ!

ದಾವಣಗೆರೆ: ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ತಮ್ಮ ಪಾಡಿಗೆ ತಾವು ಸಮಾಜಮುಖಿ ಕಾರ್ಯಗಳ ಜೊತೆಗೆ ದೇವಸ್ಥಾನ ಗಳು, ಮಠಮಾನ್ಯಗಳಿಗೆ ಭೇಟಿ ನೀಡುತ್ತಾ, ಜನರ ಬಳಿ ಹೋಗಿ ಮತಯಾಚನೆಯಲ್ಲಿ ತೊಡಗಿದ್ದಾರೆ.

ಯಾರನ್ನೂ ದೂಷಿಸುವುದು, ಟೀಕಿಸುವುದು, ಆರೋಪ ಮಾಡುವುದು ಬೇಡ. ಅಭಿವೃದ್ಧಿ ಕಾರ್ಯ, ಜನಪರ ವಿಚಾರ ಮುಂದಿಟ್ಟುಕೊಂಡು ಮತ ಕೇಳೋಣ ಎನ್ನುವ ಮೂಲಕ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ವಿವಿಧ ಪುಣ್ಯಕ್ಷೇತ್ರಗಳು, ದೇವಸ್ಥಾನಗಳು, ಮಠಗಳಿಗೆ ತೆರಳುತ್ತಿದ್ದಾರೆ. ವಿವಿಧ ಸಮುದಾಯಗಳ ಮಠಗಳಿಗೆ ಆಯಾ ಸಮಾಜದ ಮುಖಂಡರು, ಕಾರ್ಯಕರ್ತರೊಂದಿಗೆ ತೆರಳುತ್ತಿದ್ದಾರೆ.ಜಗಳೂರಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರ ಪುತ್ಥಳಿಗೆ ಶುಕ್ರವಾರ ಮಾಲಾರ್ಪಣೆ ಮಾಡಿ, ಭರ್ಜರಿ ರೋಡ್ ಶೋ ಮೂಲಕ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ ಭಾಗವಹಿಸಿದ್ದರು. 3-4 ದಿನದ ಹಿಂದೆಯಷ್ಟೇ ಕಾಂಗ್ರೆಸ್ ಪಕ್ಷದ ಮತ್ತೋರ್ವ ಟಿಕೆಟ್ ಆಕಾಂಕ್ಷಿಯಾಗಿದ್ದ ಬೆಂಗಳೂರಿನ ಇನ್‌ಸೈಟ್ಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ದಾವಣಗೆರೆಯವರಲ್ಲವೆಂದಿದ್ದರಿಂದ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ಟಿಕೆಟ್ ಸಿಕ್ಕಿತು ಎಂಬುದಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿಕೆ ನೀಡಿದ್ದರು. ಸಹಜವಾಗಿಯೇ ಇದು ವಿನಯಕುಮಾರ ಮತ್ತು ಬೆಂಬಲಿಗರ ಬೇಸರಕ್ಕೂ ಕಾರಣವಾಗಿದೆ.

ಬಿಜೆಪಿಯಂತೆ ಕಾಂಗ್ರೆಸ್ಸಿನಲ್ಲೂ ಅಸಮಾಧಾನ ಇದೆ. ಸ್ವತಃ ಜಿ.ಬಿ.ವಿನಯಕುಮಾರ ದಾವಣಗೆರೆ ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ತಾವು ಪ್ರವಾಸ ಮಾಡಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕೋ ಇಲ್ಲವೋ ಎಂಬ ನಿರ್ಧಾರ ಮಾಡುತ್ತೇನೆಂದು ಹೇಳಿದ್ದರು.ಇನ್ನು ದಾವಣಗೆರೆಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಸಹ ಸಚಿವರ ಹೇಳಿಕೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದರಲ್ಲದೇ, ಕಾಂಗ್ರೆಸ್ಸಿಗೆ ಬಂಡಾಯ ಏಳುವ ಸುಳಿವು ನೀಡಿದ್ದರು. ಬಿಜೆಪಿಗೆ ಇಲ್ಲಿ ಬಂಡಾಯದ ಬೇಗೆ ಇಲ್ಲವಾದರೂ, ಎಲ್ಲಿ ಒಳ ಹೊಡೆತ ಬೀಳುತ್ತೋ ಎಂಬ ಆತಂಕವಂತೂ ಸಹಜವಾಗಿದೆ. ಕಾಂಗ್ರೆಸ್ ಮಾತ್ರ ಬಂಡಾಯದ ಕಾವು ಎದುರಿಸುವ ಸಾಧ್ಯತೆಯೇ ಹೆಚ್ಚಾಗಿ ಈ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ.ಬಿಜೆಪಿಯಲ್ಲಿ 11 ಅತೃಪ್ತರದ್ದಾಯ್ದು, ಈಗ 22 ಮಾಜಿಗಳ ಪ್ರಹಸನ!

ದಾವಣಗೆರೆ:

ಬಿಜೆಪಿಯಲ್ಲಿ 11 ಜನನಾಯಕ ಅಸಮಾಧಾನ ಶಮನಗೊಂಡ ಬೆನ್ನಲ್ಲೇ ದಾವಣಗೆರೆ ಪಾಲಿಕೆಯ ಮೊದಲ ಅವದಿಗೆ ಆಯ್ಕೆಯಾಗಿದ್ದ ಸದಸ್ಯರ ಪೈಕಿ 22 ಜನರು ತಮ್ಮನ್ನು ಪಕ್ಷ ಕಡೆಗಣಿಸಿದೆಯೆಂದು ಹೊಟೆಲ್‌ವೊಂದರಲ್ಲಿ ಶುಕ್ರವಾರ ಮಧ್ಯಾಹ್ನ ಸಭೆ ನಡೆಸುವ ಮೂಲಕ ಕುತೂಹಲ ಹುಟ್ಟು ಹಾಕಿದ್ದಾರೆ.ನಗರದ ಖಾಸಗಿ ಹೊಟೆಲ್‌ವೊಂದರಲ್ಲಿ ದಾವಣಗೆರೆ ಮಹಾ ನಗರ ಪಾಲಿಕೆ ರಚನೆಯಾದ ನಂತರ ಮೊದಲ ಚುನಾವಣೆಯಲ್ಲೇ ಬಿಜೆಪಿ ಅಧಿಕಾರಕ್ಕೇರಲು ಕಾರಣರಾದ ಸದಸ್ಯರ ಪೈಕಿ 22 ಜನ ಪುರುಷ-ಮಹಿಳಾ ಮಾಜಿ ಸದಸ್ಯರು, ಅವರ ಪತಿಯಂದಿರು ಭೋಜನ ಕೂಟದಲ್ಲಿ ಸಭೆ ಮಾಡಿ, ಬಿಜೆಪಿ ಪಾಳೆಯದಲ್ಲಿ ಮತ್ತೆ ಕಂಪನ ಶುರುವಾಗಲು ಕಾರಣವಾಗಿದ್ದಾರೆ.

ಪಾಲಿಕೆ ಮಾಜಿ ಮೇಯರ್‌, ಮಾಜಿ ಉಪ ಮೇಯರ್‌, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಮಾಜಿ ಸದಸ್ಯೆಯರ ಪತಿಯಂದಿರು ಭೋಜನ ಕೂಟದ ಹೆಸರಿನಲ್ಲಿ ಜಿಲ್ಲಾ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆ, ತಮ್ಮನ್ನು ಅಲಕ್ಷಿಸುತ್ತಿರುವ ಪಕ್ಷದ ಬಗ್ಗೆ ಸಮಾಲೋಚನೆ ಮಾಡಿದರು.

ಯಾವೊಂದು ಗುಂಪಿನಲ್ಲೂ ಸೇರದೆ, ಪಕ್ಷ ನಿಷ್ಟೆಯ ಕೆಲವರು ಹಿರಿಯ ಮುಖಂಡರು, ಕಾರ್ಯಕರ್ತರು ಪಕ್ಷದೊಳಗಿನ ಗುಂಪುಗಾರಿಯಿಂದಾಗಿ ಪಕ್ಷಕ್ಕೆ ತೊಂದರೆ ಯಾಗುತ್ತಿರುವ ಬಗ್ಗೆ, ಸಾರ್ವಜನಿಕ ವಲಯದಲ್ಲಿ ಜನರು ಸಹ ಬಿಜೆಪಿಯಲ್ಲಿನ ಗುಂಪುಗಾರಿಕೆ ಬಗ್ಗೆ ಪ್ರಶ್ನಿಸುತ್ತಿರುವ ಬಗ್ಗೆ ಸುಧೀರ್ಘವಾಗಿ ಚರ್ಚಿಸಿದರು.ಪಾಲಿಕೆಯಲ್ಲಿ 2008ರಿಂದ 2013ರ ಅವದಿಗೆ ಪಾಲಿಕೆಯಲ್ಲಿ ಅಧಿಕಾರ ನಡೆಸಿದ್ದ 22 ಜನ ಬಿಜೆಪಿಯ ಪಾಲಿಕೆ ಮಾಜಿ ಸದಸ್ಯರು ಪಕ್ಷ ನಿಷ್ಟೆಯಿಂದ ತಾವು ದುಡಿಯಲು ಸಿದ್ಧರಿದ್ದರೂ, ಪಕ್ಷದಲ್ಲಿ ಕೆಲ ಮುಖಂಡರು ಗುಂಪುಗಾರಿಕೆ ಮಾಡುತ್ತಾ, ಸ್ವಜನ ಪಕ್ಷಪಾತ ಮಾಡುತ್ತಿರುವುದಕ್ಕೆ ಸಭೆಯಲ್ಲಿ ಮಾಜಿ ಸದಸ್ಯರುಗಳು, ಮಾಜಿ ಸದಸ್ಯೆಯರ ಪತಿಯಂದಿರವು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.