ಕಳೆದ ಕೆಲವು ವಾರಗಳಿಂದ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ನಿಂದ 22 ಡಿಗ್ರಿ ಸೆಲ್ಸಿಯಸ್‌ವರೆಗೆ ವರದಿಯಾಗುತ್ತಿದ್ದು, ಇದು ತೋಟಗಾರಿಕೆ ಬೆಳೆಗಳಿಗೆ ಅತ್ಯಂತ ಅನುಕೂಲಕರ ಪರಿಸ್ಥಿತಿಯಾಗಿದೆ.
ರಾಂ ಅಜೆಕಾರು ಕಾರ್ಕಳ: ಕಾರ್ಕಳ, ಹೆಬ್ರಿ ಪ್ರದೇಶದಲ್ಲಿ ಈ ಬಾರಿ ಕಂಡುಬರುತ್ತಿರುವ ಉತ್ತಮ ಚಳಿಗಾಲದ ವಾತಾವರಣ ರೈತರಿಗೆ ಹೊಸ ಭರವಸೆ ಮೂಡಿಸಿದೆ. ಕಳೆದ ಕೆಲವು ವಾರಗಳಿಂದ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ನಿಂದ 22 ಡಿಗ್ರಿ ಸೆಲ್ಸಿಯಸ್‌ವರೆಗೆ ವರದಿಯಾಗುತ್ತಿದ್ದು, ಇದು ತೋಟಗಾರಿಕೆ ಬೆಳೆಗಳಿಗೆ ಅತ್ಯಂತ ಅನುಕೂಲಕರ ಪರಿಸ್ಥಿತಿಯಾಗಿದೆ.ವಿಶೇಷವಾಗಿ ಮಾವು, ಗೇರು ಹಾಗೂ ಹಲಸು ಬೆಳೆಗಳಿಗೆ ಈ ರೀತಿಯ ಸಮತೋಲಿತ ತಾಪಮಾನವು ಉತ್ತಮ ಹೂವಿನ ಮೂಡಿಕೆ ಮತ್ತು ಫಲಧಾರಣೆಗೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ರೈತರಲ್ಲಿದೆ.
ರಾಜ್ಯದಲ್ಲಿ ಒಟ್ಟಾರೆ ಮಾವು, ಗೇರು ಮತ್ತು ಹಲಸು ಬೆಳೆಯ ಪ್ರದೇಶದಲ್ಲಿ ಉಡುಪಿ ಜಿಲ್ಲೆಯ ಪಾಲು ಇತರ ಜಿಲ್ಲೆಗಳೊಂದಿಗೆ ಹೋಲಿಸಿದರೆ ಕಡಿಮೆ ಇದ್ದರೂ, ಜಿಲ್ಲೆಯ ಉತ್ಪಾದನಾ ಗುಣಮಟ್ಟ ಗಮನಾರ್ಹವಾಗಿದೆ. ಉಡುಪಿ ಜಿಲ್ಲೆಯಲ್ಲಿ ವಾರ್ಷಿಕವಾಗಿ ಸುಮಾರು 440.49 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಅದರಿಂದ ಸುಮಾರು 4,900 ಮೆಟ್ರಿಕ್ ಟನ್ ಉತ್ಪಾದನೆ ಆಗುತ್ತಿದೆ. ಇದೇ ರೀತಿ, ಜಿಲ್ಲೆಯಲ್ಲಿ 17,386 ಹೆಕ್ಟೇರ್ ಪ್ರದೇಶದಲ್ಲಿ ಗೇರು ಬೆಳೆ ಬೆಳೆಯಲಾಗುತ್ತಿದ್ದು, ಇದರ ಮೂಲಕ ಸುಮಾರು 34,772 ಮೆಟ್ರಿಕ್ ಟನ್ ಗೇರು ಬೀಜ ಉತ್ಪಾದನೆಯಾಗುತ್ತಿದೆ.ಈ ಅಂಕಿ ಅಂಶಗಳಲ್ಲಿ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಕೊಡುಗೆ ಮಹತ್ವದ್ದಾಗಿದೆ. ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಲ್ಲಿ ಒಟ್ಟಾರೆ ಮಾವು ಸುಮಾರು 52 ಹೆಕ್ಟೇರ್ ಪ್ರದೇಶದಲ್ಲಿ, ಹಾಗೂ ಗೇರು ಸುಮಾರು 777 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ವಿಶೇಷವಾಗಿ ಹೆಬ್ರಿ ಭಾಗದಲ್ಲಿ ಮಾವು, ಗೇರು ಹಾಗೂ ಹಲಸು ಬೆಳೆಗಳು ಹೆಚ್ಚು ವ್ಯಾಪಕವಾಗಿ ಬೆಳೆಯುತ್ತಿದ್ದು, ಈ ಭಾಗವನ್ನು ತೋಟಗಾರಿಕೆ ಬೆಳೆಗಳ ಪ್ರಮುಖ ಕೇಂದ್ರವೆಂದೇ ಕರೆಯಲಾಗುತ್ತದೆ.ಈ ಬಾರಿ ಚಳಿಗಾಲದಲ್ಲಿ ತೀವ್ರ ಚಳಿ ಅಥವಾ ಅತಿಯಾದ ಮಳೆಯ ಅಡಚಣೆ ಇಲ್ಲದಿರುವುದರಿಂದ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಕಡಿಮೆಯಾಗಿದೆ. ಬೆಳಗ್ಗೆ ಮಂಜಿನ ವಾತಾವರಣ ಮತ್ತು ಮಧ್ಯಾಹ್ನದ ಸಮತೋಲಿತ ಉಷ್ಣತೆ ಬೆಳೆಗಳ ಬೆಳವಣಿಗೆಗೆ ಅನುಕೂಲವಾಗಿದ್ದು, ಹೂ ಬೀಳುವ ಹಂತದಲ್ಲಿರುವ ಮಾವು ಹಾಗೂ ಗೇರು ಮರಗಳಿಗೆ ಇದು ಅತ್ಯಂತ ಲಾಭದಾಯಕವಾಗಿದೆ. ರೈತರ ಪ್ರಕಾರ, ಇದೇ ವಾತಾವರಣ ಮುಂದುವರಿದರೆ ಈ ಬಾರಿ ಬಂಪರ್ ಬೆಳೆ ನಿರೀಕ್ಷಿಸಬಹುದು.
ಹಲಸು ಬೆಳೆಗೂ ಸಹ ಈ ವಾತಾವರಣ ಅನುಕೂಲಕರವಾಗಿದ್ದು, ಮರಗಳಲ್ಲಿ ಆರೋಗ್ಯಕರ ಹಣ್ಣುಗಳ ಬೆಳವಣಿಗೆ ಕಾಣುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿನ ಹವಾಮಾನ ಅಸ್ಥಿರತೆಯಿಂದ ಸಂಕಷ್ಟ ಅನುಭವಿಸಿದ್ದ ರೈತರಿಗೆ ಈ ವರ್ಷದ ಹವಾಮಾನ ಪರಿಸ್ಥಿತಿ ಆತ್ಮವಿಶ್ವಾಸ ಹೆಚ್ಚಿಸಿದೆ. ‘ಮಳೆ ಸಮಯಕ್ಕೆ ಬಂದಿದ್ದು, ಈಗ ಚಳಿ ಸಹ ಸಮತೋಲನದಲ್ಲಿದೆ. ರೋಗಬಾಧೆ ಕಡಿಮೆಯಾಗಿದೆ. ಹೀಗೆ ಮುಂದುವರಿದರೆ ಉತ್ತಮ ಆದಾಯದ ನಿರೀಕ್ಷೆ ಇದೆ’ ಎಂದು ರೈತರು ಹೇಳುತ್ತಾರೆ.ಒಟ್ಟಿನಲ್ಲಿ, ಕಾರ್ಕಳ-ಹೆಬ್ರಿ ಭಾಗದಲ್ಲಿ ಈ ಬಾರಿ ಕಂಡುಬರುತ್ತಿರುವ ಅನುಕೂಲಕರ ಹವಾಮಾನ, ಸಮರ್ಪಕ ತೇವಾಂಶ ಮತ್ತು ಸಮತೋಲಿತ ತಾಪಮಾನವು ತೋಟಗಾರಿಕೆ ಬೆಳೆಗಳಿಗೆ ವರದಾನವಾಗಿದ್ದು, ರೈತರು ಉತ್ತಮ ಬೆಳೆ ಮತ್ತು ಉತ್ತಮ ಬೆಲೆಯ ನಿರೀಕ್ಷೆಯೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಬಂಪರ್ ಉತ್ಪಾದನೆಯೊಂದಿಗೆ ರೈತರ ಬದುಕಿನಲ್ಲಿ ನವಚೈತನ್ಯ ಮೂಡಲಿದೆ ಎಂಬ ವಿಶ್ವಾಸ ಎಲ್ಲೆಡೆ ವ್ಯಕ್ತವಾಗುತ್ತಿದೆ.ಚಳಿ ಹೆಚ್ಚಾದಾಗ ಹೂವಿನ ಪ್ರೇರಣೆ ಉಂಟಾಗಿ ಅತಿಯಾದ ಸಸ್ಯವೃದ್ಧಿ ಕಡಿಮೆಯಾಗುತ್ತದೆ, ಕೀಟ, ರೋಗಗಳ ಪ್ರಮಾಣ ತಗ್ಗಿ ತೇವಾಂಶ ಸಮತೋಲನದಲ್ಲಿದ್ದು ಸಹಜ ಋತುಚಕ್ರಕ್ಕೆ ಹೊಂದಾಣಿಕೆಯಾಗುವುದರಿಂದ ಮಾವು, ಗೇರು ಹಾಗೂ ಹಲಸುಗಳಲ್ಲಿ ಉತ್ತಮ ಫಸಲು ದೊರಕುತ್ತದೆ.-ಶ್ರೀನಿವಾಸ್ ಸಹಾಯಕ ನಿರ್ದೇಶಕರು ತೋಟಗಾರಿಕಾ ಇಲಾಖೆ ಕಾರ್ಕಳ.