ಸಾರಾಂಶ
ಡೆಂಘೀ ಹರಡುವಿಕೆಯ ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಮಂಡಳಿಗಳು ಅಗತ್ಯ ಕ್ರಮಕ್ಕೆ ಮುಂದಾಗಿದ್ದು, ಸಾರ್ವಜನಿಕರೂ ಕೂಡ ಸಹಕಾರ ನೀಡಬೇಕಿದೆ. ಸುತ್ತಲಿನ ಪರಿಸರದ ಶುಚಿತ್ವಕ್ಕೆ ಆದ್ಯತೆ ಕೊಡಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಹಾನಗಲ್ಲ: ಡೆಂಘೀ ಹರಡುವಿಕೆಯ ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಮಂಡಳಿಗಳು ಅಗತ್ಯ ಕ್ರಮಕ್ಕೆ ಮುಂದಾಗಿದ್ದು, ಸಾರ್ವಜನಿಕರೂ ಕೂಡ ಸಹಕಾರ ನೀಡಬೇಕಿದೆ. ಸುತ್ತಲಿನ ಪರಿಸರದ ಶುಚಿತ್ವಕ್ಕೆ ಆದ್ಯತೆ ಕೊಡಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ತಾಲೂಕಿನ ನೆಲ್ಲಿಕೊಪ್ಪ ಸೇರಿದಂತೆ ಹಲವೆಡೆಗಳಲ್ಲಿ ಗ್ರಾಮ ಸಂಚಾರ ಕೈಗೊಂಡು ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿ ಅವರು ಮಾತನಾಡಿದರು.
ಡೆಂಘೀ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರೊಂದಿಗೆ ನಿರಂತರ ಸಭೆ ನಡೆಸಲಾಗುತ್ತಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕ ಸಮುದಾಯ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಗ್ರಾಪಂಗಳೂ ಸಹ ಫಾಗಿಂಗ್, ಕೀಟನಾಶ ಸಿಂಪಡಣೆಗೆ ಮುಂದಾಗಿವೆ. ಸಾರ್ವಜನಿಕರ ಸಹಕಾರವೂ ಬೇಕಿದೆ. ಸಮುದಾಯದಲ್ಲಿ ಜಾಗೃತಿ ಮೂಡಿ, ಅಗತ್ಯ ಮುನ್ನೆಚ್ಚರಿಕೆ ವಹಿಸಿದರೆ ಡೆಂಘೀ ನಿಯಂತ್ರಣಕ್ಕೆ ಬರಲಿದೆ. ಎಲ್ಲವನ್ನೂ ಸರ್ಕಾರವೇ ಮಾಡಲಿ ಎನ್ನುವ ಭಾವನೆ ಬದಲಾಗಬೇಕಿದೆ. ವೈಯಕ್ತಿಕವಾಗಿ ಪ್ರತಿಯೊಬ್ಬರೂ ಎಚ್ಚೆತ್ತುಕೊಂಡು ಜವಾಬ್ದಾರಿ ವಹಿಸಬೇಕಿದೆ ಎಂದು ಹೇಳಿದ ಅವರು ಡೆಂಘೀ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ವಹಿಸದೇ ಕೂಡಲೇ ಚಿಕಿತ್ಸೆ ಪಡೆದುಕೊಳ್ಳುವಂತೆ ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಹೊಸ ಪಡಿತರ ಚೀಟಿ, ಆಶ್ರಯ ಮನೆ ಬಿಲ್ ಬಾಕಿ, ರಸ್ತೆ, ಗಟಾರ ನಿರ್ಮಾಣ, ನಿವೇಶನ ಸೇರಿದಂತೆ ನಾನಾ ಸಮಸ್ಯೆಗಳ ಬಗೆಗೆ ಸಾರ್ವಜನಿಕರು ಗಮನ ಸೆಳೆದಾಗ ಶಾಸಕ ಮಾನೆ ಸ್ಪಂದಿಸಿದರು. ಮುಖಂಡರಾದ ಗೋಪಾಲ ವಡ್ಡರ, ನಾಗರಾಜ ಮಲ್ಲಮ್ಮನವರ, ಹನೀಫ್ ಬಂಕಾಪೂರ, ಪ್ರವೀಣ ಹಿರೇಮಠ, ಎಂ.ಎಸ್.ಪಾಟೀಲ ಈ ಸಂದರ್ಭದಲ್ಲಿದ್ದರು.