ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೇಲುಕೋಟೆ ಶತಮಾನದ ಶಾಲೆ ಅಂದ ಹೆಚ್ಚಿಸಲು ಅನು ಅಕ್ಕ ತಂಡಕ್ಕೆ ಹಿರಿಯ ವಿದ್ಯಾರ್ಥಿಗಳು, ದಾನಿಗಳು ಸಹಕಾರ ನೀಡುತ್ತಿರುವುದು ಖುಷಿಯ ಸಂಗತಿ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.ಮೇಲುಕೋಟೆ ಶತಮಾನದ ಸರ್ಕಾರಿ ಶಾಲೆ ಅಂದ ಹೆಚ್ಚಿಸಲು ಆಗಮಿಸಿದ್ದ ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಬಂದಿರುವ ಮಾಹಿತಿ ತಿಳಿದು ದಿಢೀರ್ ಶಾಲೆಗೆ ಭೇಟಿ ನೀಡಿ ಚರ್ಚೆ ನಡೆಸಿದರು.
ಸರ್ಕಾರಿ ಶಾಲೆಗಳ ಬಲವರ್ಧನೆಗೊಳ್ಳಬೇಕು. ಇದರಿಂದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲು ಸಾಧ್ಯ. ಹೀಗಾಗಿ ಸರ್ಕಾರಿ ಶಾಲೆಗಳ ಬಲವರ್ಧನೆ ಶ್ರಮಿಸಲಾಗುತ್ತಿದೆ ಎಂದರು.ಅನು ಅಕ್ಕ ಸರ್ಕಾರಿ ಶಾಲಾ ಬಲವರ್ಧನೆ ಅಂಗವಾಗಿ ಪೈಂಟ್ ಮಾಡಿ, ಆಕರ್ಷಕ ಚಿತ್ರಗಳನ್ನು ಬಿಡಿಸಿ ಅಂದ ಹೆಚ್ಚಿಸುವ ಮೂಲಕ ಸೇವೆ ಮಾಡುತ್ತಿದ್ದಾರೆ. ಕ್ಷೇತ್ರಕ್ಕೆ ಆಗಮಿಸಿ ಕವಿ ಪುತಿನ ವ್ಯಾಸಂಗ ಮಾಡಿದ ಶತಮಾನದ ಶಾಲೆಯಲ್ಲಿ ಸೇವೆ ಮಾಡುತ್ತಿರುವುದಕ್ಕೆ ಅಭಾರಿಯಾಗಿದ್ದೇನೆ. ನಿಸ್ವಾರ್ಥವಾದ ತಮ್ಮ ಸೇವೆ ಮುಂದುವರೆಯಲಿ ಎಂದರು.
ಮೇಲುಕೋಟೆಯ ಪಕ್ಷಬೇಧವಿಲ್ಲದೆ ಶಾಲಾಭಿವೃದ್ಧಿಗೆ ಕೈಜೋಡಿಸುವ ಮೂಲಕ ಐತಿಹಾಸಿಕ ಮಹತ್ವದ ಶತಮಾನದ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಿ ಎಂದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಸರಳತೆ ಪ್ರಶಂಸಿಸಿದ ಅನು ಅಕ್ಕ, ಮುಖ್ಯಶಿಕ್ಷಕ ಸಂತಾನರಾಮನ್ ಮನವಿ ಮೇರೆಗೆ ಪುತಿನ ವ್ಯಾಸಂಗ ಮಾಡಿದ ಶಾಲೆಯಲ್ಲಿ ಸೇವೆ ಮಾಡಲು ಬಂದಿದ್ದೇವೆ. ಇನ್ನೂ 10 ದಿನಗಳ ಕಾಲ ಇಲ್ಲೇ ಉಳಿದು ಶಾಲಾವರಣಕ್ಕೆ ಸಂಪೂರ್ಣ ಪೈಂಟಿಂಗ್ ಮಾಡುವ ಜೊತೆಗೆ ಶೈಕ್ಷಣಿಕ ವಿಚಾರಗಳಿಗೆ ಪೂರಕವಾದ ಚಿತ್ರಗಳನ್ನು ನುರಿತ ಕಲಾವಿದರಿಂದ ಬಿಡಿಸಿ ಶಾಲೆಗೆ ಹೊಸ ಆಕರ್ಷಣೆ ನೀಡಲಾಗುತ್ತಿದೆ. ಪೈಂಟಿಂಗ್ ಕೆಲಸಕ್ಕೆ ಸರಿಸುಮಾರು 1 ಲಕ್ಷರೂ ವೆಚ್ಚವಾಗಲಿದೆ ಎಂದರು.
ಈ ವೇಳೆ ರೈತಸಂಘದ ಮುಖಂಡ ದೀಲೀಪ್, ವಕೀಲ ಕಾಡೇನಹಳ್ಳಿ ಸತೀಶ್, ಕಾಡೇನಹಳ್ಳಿ ಜಯಚಂದ್ರ, ಬಳಿಘಟ್ಟ ಗ್ರಾಪಂ ಅಧ್ಯಕ್ಷೆ ಜ್ಯೋತಿ ಮಹೇಶ್, ಅಮೃತಿ ರವಿ ಸಮಾಜ ಸೇವಕ ಕನಗೋನಹಳ್ಳಿ ಪರಮೇಶ್‌ಗೌಡ, ಮುಖ್ಯಶಿಕ್ಷಕ ಸಂತಾನರಾಮನ್ ಸಹಶಿಕ್ಷಕರಾದ ಮಹಾಲಕ್ಷ್ಮಿ, ಬಿ.ಜಯಂತಿ ಇದ್ದರು.