ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ರೈತರ ಆರ್ಥಿಕ ಪ್ರಗತಿಗೆ ಅನುಪಮ ಕೊಡುಗೆ ನೀಡುತ್ತಿರುವ ಸಹಕಾರಿ ಸಂಸ್ಥೆಗಳ ಅಸ್ತಿತ್ವಕ್ಕೆ ಧಕ್ಕೆ ತರುವ ಹುನ್ನಾರ ನಡೆದಿದೆ. ರೈತರ ಜೀವಾಳ ಎನಿಸಿರುವ ಈ ಸಹಕಾರಿ ರಂಗವನ್ನು ಹತ್ತಿಕ್ಕುವ ಸಂಚು ನಡೆದಿದೆ ಎಂದು ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಕಳವಳ ವ್ಯಕ್ತಪಡಿಸಿದರು.ಪಟ್ಟಣದ ವಿಶ್ವರಾಜ ಸಭಾಭವನದಲ್ಲಿ ಶುಕ್ರವಾರ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯುನಿಯನ್ ಸಂಯುಕ್ತಾಶ್ರಯದಲ್ಲಿ ಹುಕ್ಕೇರಿ ತಾಲೂಕಿನ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕರಿಗೆ ಏರ್ಪಡಿಸಿದ ಒಂದು ದಿನದ ರಾಜ್ಯ ಮಟ್ಟದ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಖಾಸಗೀಕರಣ ನೀತಿಯಿಂದ ಸಹಕಾರಿ ಸಂಸ್ಥೆಗಳಿಗೆ ಬಲವಾದ ಪೆಟ್ಟು ಬೀಳುತ್ತಿದೆ. ಉತ್ತರ ಕರ್ನಾಟಕ ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಸದೃಢ ಮತ್ತು ಬಲಿಷ್ಠವಾಗಿರುವ ಸಹಕಾರಿ ಕ್ಷೇತ್ರವನ್ನು ದಮನಗೊಳಿಸುವ ಸಂಚು ರೂಪಿಸಲಾಗಿದೆ. ಸಹಕಾರ ರಂಗದಲ್ಲಿ ಸ್ವಾರ್ಥ ಮನೋಭಾವ ಸಲ್ಲದು. ಆಡಳಿತ ಮಂಡಳಿ ಮತ್ತು ರೈತರು ನಿಸ್ವಾರ್ಥ ಮನೋಭಾವ ಹೊಂದಿದರೆ ಮಾತ್ರ ಸಹಕಾರ ಕ್ಷೇತ್ರ ಉಳಿಯಬಲ್ಲದು ಎಂದು ಹೇಳಿದರು.ಸಹಕಾರ ಸಂಘದ ಮೂಲಕ ರಾಜ್ಯದ 30 ಲಕ್ಷ ಜನ ರೈತರು ಶೂನ್ಯ ಬಡ್ಡಿ ದರದ ಸಾಲ ಹಾಗೂ ಕೇಂದ್ರ, ರಾಜ್ಯ ಸರ್ಕಾರದ ಸಾಲಮನ್ನಾ ಸೌಲಭ್ಯ ಪಡೆದುಕೊಂಡಿದ್ದಾರೆ. ಕೃಷಿ ಪತ್ತಿನ ಸಹಕಾರಿ ಸಂಘಗಳು ಸಾಲಕ್ಕೆ ಸೀಮಿತವಾಗದೆ ಕೃಷಿ ಉತ್ಪನ್ನ, ವ್ಯಾಪಾರ, ಅಭಿವೃದ್ಧಿ ಯೋಜನೆಗೆ ಒತ್ತು ನೀಡಬೇಕು ಎಂದವರು ಹೇಳಿದರು.
ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಬಸಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಬಸವರಾಜ ಸುಲ್ತಾನಪುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಹಕಾರ ತರಬೇತಿ ಶಿಕ್ಷಕ ಶಂಕರ ಕರಬಸನ್ನವರ, ಶ್ರೀಶೈಲ ಯಡಹಳ್ಳಿ ಉಪನ್ಯಾಸ ನೀಡಿದರು.ಸಂಗಮ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ, ಟಿಎಪಿಸಿಎಂಎಸ್ ಅಧ್ಯಕ್ಷ ಮಹಾದೇವ ಜಿನರಾಳೆ, ಮುಖಂಡರಾದ ಸತ್ಯಪ್ಪ ನಾಯಿಕ, ಎ.ಕೆ. ಪಾಟೀಲ, ರಾಜು ಮುನ್ನೋಳಿ, ರಾಜು ಬಿರಾದಾರಪಾಟೀಲ, ಸಿಡಿಒ ಎಸ್.ಎಸ್.ಪಾಟೀಲ ಇತರರು ಇದ್ದರು.ಸಹಕಾರಿ ಸಂಸ್ಥೆಗಳು ರೈತ ಸಮೂಹದ ಒಡನಾಡಿಯಾಗಿವೆ. ರೈತರು ಮತ್ತು ಸಂಸ್ಥೆಗಳ ನಡುವೆ ಅವಿನಭಾವ ಸಂಬಂಧ ಬೆಸೆದಿದೆ. ಆದರೆ, ಕೆಲಪಟ್ಟಭದ್ರ ಹಿತಾಸಕ್ತಿಗಳಿಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ತೀವ್ರ ಪೈಪೋಟಿ ಒಡ್ಡುತ್ತಿರುವ ಸಹಕಾರಿ ಸಂಸ್ಥೆಗಳನ್ನು ಮುಗಿಸುವ ಹುನ್ನಾರ ನಡೆಸಿವೆ.
-ರಮೇಶ ಕತ್ತಿ ಮಾಜಿ ಸಂಸದ