ಕುಸಿದ ಪಾಯ, ಶೀಥಿಲ ಛಾವಣಿ, ಜೀವಭಯದಲ್ಲೇ ನಿತ್ಯ ಪಾಠ

| Published : Jul 29 2024, 12:51 AM IST

ಸಾರಾಂಶ

ಅಫಜಲ್ಪುರ ತಾಲೂಕಿನ ಬಳೂರ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಳಪಾಯ ಕುಸಿದಿದ್ದು, ಶಾಲೆಯ ಬಹುತೇಕ ಕೋಣೆಗಳ ಮೇಲ್ಛಾವಣಿ ಶೀಥಿಲಾಗಿ ಉದುರಿ ಬಿಳುತ್ತಿದೆ. ನಿತ್ಯ ಜೀವ ಭಯದಲ್ಲೇ ಮಕ್ಕಳಿಗೆ ಪಾಠ ಬೋಧನೆ ಮಾಡಲಾಗುತ್ತಿದೆ.

ರಾಹುಲ್ ಜೀ ದೊಡ್ಮನಿ

ಕನ್ನಡಪ್ರಭ ವಾರ್ತೆ ಚವಡಾಪುರ

ಸರ್ಕಾರಿ ಶಾಲೆಗಳನ್ನು ಉಳಿಸುವ ಮತ್ತು ಅಭಿವೃದ್ಧಿಪಡಿಸುವ ಸಲುವಾಗಿ ಸರ್ಕಾರ ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಿದೆ. ಆದರೆ, ಹಣ ಖರ್ಚಾದರೂ ಶಾಲೆಗಳು ಮಾತ್ರ ಅಭಿವೃದ್ಧಿಯಾಗುತ್ತಿಲ್ಲ. ಅಫಜಲ್ಪುರ ತಾಲೂಕಿನ ಬಳೂರ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಳಪಾಯ ಕುಸಿದಿದ್ದು, ಶಾಲೆಯ ಬಹುತೇಕ ಕೋಣೆಗಳ ಮೇಲ್ಛಾವಣಿ ಶೀಥಿಲಾಗಿ ಉದುರಿ ಬಿಳುತ್ತಿದೆ. ನಿತ್ಯ ಜೀವ ಭಯದಲ್ಲೇ ಮಕ್ಕಳಿಗೆ ಪಾಠ ಬೋಧನೆ ಮಾಡಲಾಗುತ್ತಿದೆ.

ಬಳೂರ್ಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿ ವರೆಗೆ ಒಟ್ಟು 270ಕ್ಕೂ ಹೆಚ್ಚಿನ ಮಕ್ಕಳಿದ್ದಾರೆ. 8 ಜನ ಶಿಕ್ಷಕರಿದ್ದಾರೆ. ಒಟ್ಟು 14 ಕೋಣೆಗಳಿದ್ದು ಈ ಪೈಕಿ ಕೇವಲ 4 ಕೋಣೆಗಳು ಮಾತ್ರ ಸುಸಜ್ಜಿತವಾಗಿವೆ. 4 ಕೋಣೆಗಳ ಪೈಕಿ ಒಂದು ಕೋಣೆ ಕಾರ್ಯಾಲಯಕ್ಕಾಗಿ ಬಳಕೆ ಮಾಡಲಾಗುತ್ತಿದ್ದು ಉಳಿದ 3 ಕೋಣೆಗಳಲ್ಲಿ ಮಕ್ಕಳಿಗೆ ಪಾಠ ಬೋಧನೆ ಮಾಡಲಾಗುತ್ತಿದೆ. 3 ಕೋಣೆಗಳಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲಾಗದ್ದರಿಂದ ಶಾಲೆಯ ವರಾಂಡದಲ್ಲಿ ಕೂಡಿಸಿ ಪಾಠ ಬೋಧನೆ ಮಾಡಲಾಗುತ್ತಿದೆ. ಆಗಾಗ ಮೇಲ್ಛಾವಣಿಯಿಂದ ಸಿಮೆಂಟ್ ಉದುರಿ ಮಕ್ಕಳ ಮೇಲೆ ಬಿಳುತ್ತಿದ್ದು ಯಾವ ಸಂದರ್ಭದಲ್ಲಿ ಯಾರಿಗೆ ಏನು ಅವಗಢ ಸಂಭವಿಸುತ್ತದೋ ತಿಳಿಯದಂತಾಗಿದೆ.

ದಶಕಗಳ ಹಿಂದೆ ಕಟ್ಟಿದ 2 ಕೋಣೆ ಬಳಕೆಯಾಗುತ್ತಿಲ್ಲ:

ಕಳೆದ 10 ವರ್ಷಗಳ ಹಿಂದೆ ಶಾಲೆಯಲ್ಲಿ 2 ಕೋಣೆಗಳ ನಿರ್ಮಾಣ ಮಾಡಲಾಗಿದ್ದು ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ, ಇರುವ 14 ಕೋಣೆಗಳಲ್ಲಿ ಕೇವಲ 4 ಕೋಣೆಗಳನ್ನು ಬಳಕೆ ಮಾಡಲಾಗುತ್ತಿದೆ. ಭೂಸೇನಾ ನಿಗಮದಿಂದ ನಿರ್ಮಿಸಿದ 2 ಕೋಣೆಗಳ ಕಾಮಗಾರಿ ಯಾಕೆ ಅರ್ಧಕ್ಕೆ ನಿಂತಿದೆ ಎನ್ನುವ ಮಾಹಿತಿ ಶಾಲೆಯ ಶಿಕ್ಷಕರ ಬಳಿಯೂ ಇಲ್ಲ, ಸುಧಾರಣಾ ಸಮಿತಿಯವರಿಗೂ ಗೊತ್ತಿಲ್ಲ. ಭೂಸೇನಾ ನಿಗಮದ ಅಧಿಕಾರಿಗಳು ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದರ ಮಧ್ಯ ಬಳೂರ್ಗಿ ಗ್ರಾಮದ ಬಡ ಮಕ್ಕಳು ನಿತ್ಯ ಜೀವ ಭಯದಲ್ಲಿ ಪಾಠ ಆಲಿಸುವ ಪರಿಸ್ಥಿತಿ ಬಂದಿದೆ.

ಆಂಗ್ಲ ಮಾಧ್ಯಮದ ಮಕ್ಕಳಿಗೂ ಸ್ಥಳವಿಲ್ಲ:

ಸರ್ಕಾರ ಹೊಸದಾಗಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ 1 ನೇ ತರಗತಿಯಿಂದ ಆಂಗ್ಲ ಮಾಧ್ಯಮ ಕಲಿಕೆ ಪ್ರಾರಂಭಿಸಿದ್ದು ಬಳೂರ್ಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಆಂಗ್ಲ ಮಾಧ್ಯಮಕ್ಕೆ ಅವಕಾಶ ಕಲ್ಪಿಸಲಾಗಿದೆ. ಊರಿನ ಪಾಲಕರು ತಮ್ಮಮಕ್ಕಳಿಗೆ ಪ್ರವೇಶ ಕೊಡಿಸಿದ್ದಾರೆ. ಆದರೆ ಮಕ್ಕಳಿಗೆ ಕೂಡಿಸಿ ಪಾಠ ಬೋಧನೆ ಮಾಡಲು ಸ್ಥಳವೇ ಇಲ್ಲದಂತಾಗಿದೆ.

ಒಂದು ಕಡೆ ತಳಪಾಯ ಕುಸಿತ, ಇನ್ನೊಂದು ಕಡೆ ಕುಸಿದು ಬೀಳುತ್ತಿರುವ ಮೇಲ್ಛಾವಣಿ ಯಾವಾಗ ಗೋಡೆ, ಛಾವಣಿ ಬಿದ್ದು ಮಕ್ಕಳ ಜೀವಕ್ಕೆ ಕುತ್ತು ಬರುತ್ತದೋ ಗೊತ್ತಿಲ್ಲ. ಈ ಸಮಸ್ಯೆ ಒಂದು ಕಡೆಯಾದರೆ ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ವ್ಯವಸ್ಥೆಯೂ ಇಲ್ಲ. ಶಿಕ್ಷಕರು, ಶಿಕ್ಷಕಿಯರು ಹಾಗೂ ವಿದ್ಯಾರ್ಥಿನಿಯರಿಗೆ ಮೂತ್ರ ವಿಸರ್ಜನೆ ಮಾಡುವುದಕ್ಕೂ ಸ್ಥಳಾವಕಾಶವಿಲ್ಲದಂತಾಗಿದೆ. ಒಟ್ಟಾರೆ ಬಳೂರ್ಗಿ ಸರ್ಕಾರಿ ಶಾಲೆ ಹತ್ತಾರು ಸಮಸ್ಯೆಗಳ ನಡುವೆ ನಡೆಯುತ್ತಿದ್ದು ಸಂಬಂಧ ಪಟ್ಟವರು ಶಾಲೆಯ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ದೊಡ್ಡ ದುರಂತ ಸಂಭವಿಸುವುದರಲ್ಲಿ ಸಂಶಯವಿಲ್ಲ.

.

ಬಳೂರ್ಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಳಪಾಯ ಕುಸಿದಿರುವುದು ಮತ್ತು ಛಾವಣಿಯಿಂದ ನಿತ್ಯ ಸಿಮೆಂಟ್ ಉದುರಿ ಬೀಳುತ್ತಿರುವುದು ಆತಂಕ ಹುಟ್ಟಿಸಿದೆ. ನಮ್ಮೂರಿನ ಮಕ್ಕಳ ಜೀವಕ್ಕೆ ಯಾವಾಗ ಬೇಕಿದ್ದರೂ ಕುತ್ತು ಬರುವ ಸಾಧ್ಯತೆ ಇದೆ. ಸಂಬಂಧ ಪಟ್ಟವರಿಗೆ ಸಾಕಷ್ಟು ಬಾರಿ ಸಮಸ್ಯೆ ಕುರಿತು ಮನವರಿಕೆ ಮಾಡಿದರೂ ಯಾರೊಬ್ಬರೂ ಎಚ್ಚೆತ್ತುಕೊಂಡು ಸಮಸ್ಯೆ ನಿವಾರಿಸುವ ಕೆಲಸ ಮಾಡಿಲ್ಲ.

- ಸದ್ದಾಮ ಹುಸೇನ್ ನಾಕೇದಾರ, ಗಡಿನಾಡು ಕನ್ನಡ ಹೋರಾಟಗಾರ ಬಳೂರ್ಗಿಬಳೂರ್ಗಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಲು ಭಯವಾಗುತ್ತಿದೆ. ನಮ್ಮ ಮಕ್ಕಳಿಗೆ ಯಾವಾಗ ಏನಾಗಲಿದೆಯೋ ಎನ್ನುವ ಅಂಜಿಕೆ ನಮಗಿದೆ. ಶಾಲಾ ಕಟ್ಟಡ ಕಟ್ಟುವ ತನಕ ಬೇರೆ ಕಡೆ ಮಕ್ಕಳ ಕಲಿಕೆಗೆ ಅವಕಾಶ ಕಲ್ಪಿಸಲಿ. ಇಲ್ಲವಾದರೆ ನಮ್ಮ ಮಕ್ಕಳನ್ನು ನಾವು ಬೇರೆ ಶಾಲೆಗೆ ಕಳಿಸುತ್ತೇವೆ.

- ಮಕ್ಕಳ ಪಾಲಕರು