ಸಾರಾಂಶ
ಶನಿವಾರ ಸುರಿದ ಭಾರಿ ಮಳೆಗೆ ಈ ರಸ್ತೆಯಲ್ಲಿರುವ ಪೈಪ್‌ಗಳು ಸಂಪೂರ್ಣವಾಗಿ ಮಣ್ಣು, ಕಸ ಮತ್ತು ಕಲ್ಲುಗಳಿಂದ ಮುಚ್ಚಿಹೋಗಿದೆ. ನೀರು ಸರಾಗವಾಗಿ ಹರಿಯದೆ ರಸ್ತೆಯ ಮೇಲೆ ತುಂಬಿಕೊಂಡು ರಸ್ತೆ ಕುಸಿದಿದ್ದು, ವಾಹನ ಸಂಚಾರಕ್ಕೆ ದೊಡ್ಡ ಅಡಚಣೆಯಾಗಿದೆ.
ಕುಂದಗೋಳ: ತಾಲೂಕಿನ ಸಂಶಿ-ಚಾಕಲಬ್ಬಿ ಮಾರ್ಗ ಮಧ್ಯದಲ್ಲಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ರಾಜ್ಯ ಹೆದ್ದಾರಿ ಕುಸಿದಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಶನಿವಾರ ಸುರಿದ ಭಾರಿ ಮಳೆಗೆ ಈ ರಸ್ತೆಯಲ್ಲಿರುವ ಪೈಪ್‌ಗಳು ಸಂಪೂರ್ಣವಾಗಿ ಮಣ್ಣು, ಕಸ ಮತ್ತು ಕಲ್ಲುಗಳಿಂದ ಮುಚ್ಚಿಹೋಗಿದೆ. ನೀರು ಸರಾಗವಾಗಿ ಹರಿಯದೆ ರಸ್ತೆಯ ಮೇಲೆ ತುಂಬಿಕೊಂಡು ರಸ್ತೆ ಕುಸಿದಿದ್ದು, ವಾಹನ ಸಂಚಾರಕ್ಕೆ ದೊಡ್ಡ ಅಡಚಣೆಯಾಗಿದೆ.ದೊಡ್ಡ ಡೊಡ್ಡ ಗುಂಡಿಗಳಲ್ಲಿ ನೀರು ತುಂಬಿದ್ದು ದ್ವಿಚಕ್ರ ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಈಗಾಗಲೇ ಹಲವು ದ್ವಿಚಕ್ರ ವಾಹನಗಳು ಜಾರಿ ಬಿದ್ದಿದ್ದು, ಸವಾರರು ಗಾಯಗೊಂಡಿದ್ದಾರೆ. ಇತರ ದೊಡ್ಡ ವಾಹನಗಳು ಸರಾಗವಾಗಿ ಸಂಚರಿಸದಂತಾಗಿದೆ. ವಿದ್ಯಾರ್ಥಿಗಳು ಮತ್ತು ಪ್ರತಿನಿತ್ಯ ಕೆಲಸಕ್ಕೆ ಹೋಗುವವರು ಇದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಈ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಪೈಪ್‌ಗಳನ್ನು ಸ್ವಚ್ಛಗೊಳಿಸಿ, ಅವಶ್ಯಕತೆಯಿದ್ದರೆ ಹೊಸ ಪೈಪ್‌ಗಳನ್ನು ಅಳವಡಿಸಿ ನೀರು ಸರಾಗವಾಗಿ ಹರಿಯಲು ಶಾಶ್ವತ ಕ್ರಮ ಕೈಗೊಳ್ಳಬೇಕು. ರಸ್ತೆಯಲ್ಲಿರುವ ತಗ್ಗುಗಳನ್ನು ಮುಚ್ಚಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.