ಕನ್ನಡಪ್ರಭ ವಾರ್ತೆ ಮಂಡ್ಯ

ಜನರ ಅಮೂಲ್ಯ ಜೀವ ಉಳಿಸುವ ನಿಟ್ಟಿನಲ್ಲಿ ಕಳೆದ 25 ವರ್ಷಗಳಿಂದ ರಕ್ತ ಸಂಗ್ರಹದಲ್ಲಿ ದಾಖಲೆ ಮಾಡಿರುವ ಜೀವಧಾರೆ ಟ್ರಸ್ಟ್‌ನ ಸೇವೆ ಇತರೆ ಯುವ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಶ್ಲಾಘಿಸಿದರು.

ನೆಹರು ನಗರದ ಶಂಕರಮಠದಲ್ಲಿ ಜೀವಧಾರೆ ಟ್ರಸ್ಟ್‌ನ 25ನೇ ವರ್ಷದ ಬೆಳ್ಳಿ ಹಬ್ಬದ ಅಂಗವಾಗಿ ಜೀವಧಾರೆ ಕುಟುಂಬದ ಹೆಣ್ಣು ಮಕ್ಕಳಿಗೆ ಕುಂಕುಮ ನೀಡಿ ಮಡಿಲು ತುಂಬುವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಟ್ರಸ್ಟ್ ಇದುವರೆಗೂ ಸುಮಾರು 50 ಸಾವಿರ ಯೂನಿಟ್ ರಕ್ತ ಸಂಗ್ರಹಿಸಿರುವುದು ಸಾಮಾನ್ಯ ವಿಚಾರವಲ್ಲ. ಸುಮಾರು 371 ಶಿಬಿರಗಳನ್ನು ರಾಜ್ಯದ 16 ಜಿಲ್ಲೆಗಳಲ್ಲಿ ಮಾತ್ರವಲ್ಲ, ದೆಹಲಿ, ಕಾಶ್ಮೀರ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ಆಯೋಜಿಸಿ ದಾಖಲೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೀವಧಾರೆ ಟ್ರಸ್ಟ್‌ನ ಹಿಂದೆ ಅನೇಕ ಯುವಕರು ಶ್ರಮಿಸಿದ್ದಾರೆ. ಇವರ ಪರಿಶ್ರಮವನ್ನು ನೋಡಿ ನಾನು ಕೂಡ ರಕ್ತದಾನ ಮಾಡಿದ್ದೇನೆ. ಟ್ರಸ್ಟ್‌ನ ನಟರಾಜು ಅವರು ಹೆಣ್ಣು ಮಕ್ಕಳ ಪಡೆಯನ್ನು ರಚಿಸಿ ಜೊತೆ ಜೊತೆಗೆ ಹೆಣ್ಣು ಮಕ್ಕಳ ಸಮಸ್ಯೆ ನಿವಾರಣೆಗೂ ಸೂಕ್ತ ವೇದಿಕೆ ರಚಿಸುವಂತೆ ಸಲಹೆ ನೀಡಿದರು.


ಸಾನಿಧ್ಯ ವಹಿಸಿದ್ದ ವರ್ಚಸ್ವಿ ಸಿದ್ದಲಿಂಗರಾಜ ಅರಸ್ ಮಾತನಾಡಿ, ಇತ್ತೀಚೆಗೆ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಹೆಲ್ಮೆಟ್ ಧರಿಸದೆ ಅಜಾಗರೂಕತೆಯಿಂದ ಚಾಲನೆ ಮಾಡುವುದು ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸದಿರುವುದೇ ಪ್ರಮುಖ ಕಾರಣ ಎಂದರು.

ಕುಟುಂಬಗಳಿಗೆ ಆಧಾರವಾಗಿರುವವರು ಅಪಘಾತದಲ್ಲಿ ಮೃತರಾದರೆ ಆ ಕುಟುಂಬದವರನ್ನು ಸಂಕಷ್ಟಕ್ಕೆ ಸಿಲುಕಿಸಿ ತಾವು ಇಹಲೋಕದಿಂದ ನಿರ್ಗಮಿಸುತ್ತಾರೆ. ಈ ಪರಿಸ್ಥಿತಿಯನ್ನು ತಪ್ಪಿಸಲು ನಟರಾಜು ಅವರು ಜಾಗೃತಿ ಕಾರ್ಯಕ್ರಮ ನಡೆಸುವುದು ಸೂಕ್ತ ಎಂದರು.

ಬಹುತೇಕ ವಾಹನ ಚಾಲಕರು ಪೊಲೀಸರ ದಂಡಕ್ಕೆ ಹೆದರಿ ಹೆಲ್ಮೆಟ್ ಧರಿಸುತ್ತಾರೆ. ಆದರೆ, ತಮ್ಮ ಅಮೂಲ್ಯ ಜೀವ ಉಳಿಸಿಕೊಳ್ಳಬೇಕೆಂದು ಅವರು ಹೆಲ್ಮೆಟ್ ಧರಿಸುವುದಿಲ್ಲ. ಅಪಘಾತದಿಂದ ತುರ್ತು ಪರಿಸ್ಥಿತಿಯಲ್ಲಿರುವವರ ಜೀವ ರಕ್ಷಣೆಗೆ ಅತ್ಯಂತ ಅಮೂಲ್ಯವಾದ ರಕ್ತ ಸಂಗ್ರಹಿಸಿ ಕೊಡುತ್ತಿರುವ ಜೀವಧಾರೆ ಟ್ರಸ್ಟ್‌ನ ಚಾಲನಾ ಶಕ್ತಿಯಾದ ನಟರಾಜ್ ಮತ್ತು ಅವರ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಈ ವೇಳೆ ಜೀವಧಾರೆ ತಂಡದ ನಟರಾಜು, ಪ್ರಶಾಂತ್, ಶಶಿಧರ್, ಚಂದ್ರ, ಬೆಟ್ಟಪ್ಪ, ಮಧು, ಸಂತೋಷ್, ನವೀನ್, ವಿನಯ್, ಎಂ.ಬಿ.ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.