ಬೆಂಗಳೂರು : ಸಂಪುಟ ವಿಸ್ತರಣೆ ಬಗ್ಗೆ ಅಸಮಾಧಾನ ಶಮನಗೊಳ್ಳದ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಕೆಲ ಬದಲಾವಣೆ ಹಾಗೂ ಖಾತೆ ಹಂಚಿಕೆ, ಖಾತೆ ಬದಲಾವಣೆ ಮಾಡುವ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಶನಿವಾರ ಸಂಜೆ ಅಥವಾ ಭಾನುವಾರ ದೆಹಲಿಗೆ ತೆರಳುವ ಸಾಧ್ಯತೆಯಿದೆ.

ಹೀಗಾಗಿ ಸೋಮವಾರದ ವೇಳೆಗೆ ಸಂಪುಟ ಸದಸ್ಯರಲ್ಲಿನ ಕೆಲ ಬದಲಾವಣೆ ಹಾಗೂ ಖಾತೆ ಹಂಚಿಕೆ ಬಗ್ಗೆ ಸ್ಪಷ್ಟತೆ ಸಿಗಲಿದೆ.

ದೆಹಲಿಗೆ ತೆರಳುವ ಮೊದಲು ಶುಕ್ರವಾರ ಸಂಜೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಶಿವಕುಮಾರ್‌ ಅವರು, ಸಂಪುಟದಲ್ಲಿ ಆಗಬೇಕಿರುವ ಬದಲಾವಣೆ ಹಾಗೂ ಖಾತೆ ಹಂಚಿಕೆ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿದರು.


ಶಿವಕುಮಾರ್‌ ಅವರು ಶನಿವಾರ ಬೆಳಗ್ಗೆಯೇ ದೆಹಲಿಗೆ ತೆರಳಬೇಕಾಗಿತ್ತಾದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ಲಭ್ಯವಿರುವುದಿಲ್ಲ. ಹೀಗಾಗಿ ಶನಿವಾರ ಸಂಜೆ ಅಥವಾ ಭಾನುವಾರ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

ಬಸವರಾಜ ಶಿವಣ್ಣವರ ಹೆಸರು ಸಂಪುಟದಲ್ಲಿ ಸೇರ್ಪಡೆಯಾಗುವ ಸಾಧ್ಯತೆ

ವರಿಷ್ಠರು ಸಂಪುಟದಲ್ಲಿನ ಬದಲಾವಣೆಗೆ ಒಪ್ಪಿದರೆ ಕುರುಬ ಕೋಟಾದಡಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಹೆಸರು ಸಂಪುಟದಲ್ಲಿ ಸೇರ್ಪಡೆಯಾಗುವ ಸಾಧ್ಯತೆಯಿದೆ. ಜತೆಗೆ ಎಂ.ಕೃಷ್ಣಪ್ಪ ಅವರು ತಮಗಾಗಲಿ ಅಥವಾ ಪುತ್ರ ಪ್ರಿಯಕೃಷ್ಣ ಅವರಿಗಾಗಲಿ ಕಡ್ಡಾಯವಾಗಿ ಸಚಿವ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಹೀಗಾಗಿ ಎಂ.ಕೃಷ್ಣಪ್ಪ ಅಥವಾ ಪ್ರಿಯಕೃಷ್ಣ ಅವರಿಗೆ ಅವಕಾಶ ನೀಡಲು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಲು ಒಪ್ಪಿರುವ ಒಬ್ಬರು ಸಚಿವರು ರಾಜೀನಾಮೆ ನೀಡುವ ನಿರೀಕ್ಷೆಯಿದೆ.

ಮಹಿಳಾ ಕೋಟಾ ಭರ್ತಿಗೆ ಚರ್ಚೆ:

ಮಹಿಳಾ ಕೋಟಾ ಭರ್ತಿ ಮಾಡುವ ಬಗ್ಗೆ ವರಿಷ್ಠರ ಮಟ್ಟದಲ್ಲಿ ತೀವ್ರ ಚರ್ಚೆ ನಡೆಯಲಿದೆ.

ಸಚಿವ ಕೆ.ಎಚ್. ಮುನಿಯಪ್ಪ ಅವರು ತಮ್ಮ ಮಗಳಿಗೆ ಸಚಿವ ಸ್ಥಾನ ಬಿಟ್ಟುಕೊಡಲು ಸುತಾರಾಂ ಒಪ್ಪಿಲ್ಲ. ಹೀಗಾಗಿ ಆ ಆಯ್ಕೆ ಕೈಬಿಡಲಾಗಿದೆ.

ಬಳ್ಳಾರಿ ಮೂಲದ ಸಚಿವರ ರಾಜೀನಾಮೆ ಕೊಡಿಸಿ ಬಳ್ಳಾರಿ ಮೂಲದ ಸಂಸದರ ಪತ್ನಿ ಹಾಗೂ ಶಾಸಕರಾಗಿರುವ ಮಹಿಳೆಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ಮಹಿಳಾ ಸಚಿವ ಸ್ಥಾನಕ್ಕೆ ಪರಿಷತ್‌ನಿಂದಲೂ ಪೈಪೋಟಿಯಿದ್ದು, ವಿಧಾನಸಭೆಯಿಂದ ಆಯ್ಕೆಯಾದವರು ಮಹಿಳಾ ಸಚಿವರಾಗುತ್ತಾರೋ ಅಥವಾ ವಿಧಾನಪರಿಷತ್‌ನಿಂದ ಆಗುತ್ತಾರೋ ಎಂಬುದು ಸಹ ತೀರ್ಮಾನವಾಗಲಿದೆ.