ಸಾರಾಂಶ
ಶಿರಸಿ: ಅಡಿಕೆ ತೋಟಕ್ಕೆ ಮಾರಕವಾದ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಈಗಾಗಲೇ ಅನೇಕ ಸಂಸ್ಥೆಗಳು ಪ್ರಯತ್ನ ಮಾಡಿದ್ದು, ಸಂಘ-ಸಂಸ್ಥೆಗಳೆಲ್ಲ ಸೇರಿ ಸಾಮೂಹಿಕ ಪ್ರಯತ್ನ ಮಾಡುವುದು ಅವಶ್ಯವಿದೆ ಎಂದು ಸೊಂದಾ ಸ್ವರ್ಣವಲ್ಲೀಯ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ಮಂಗಳವಾರ ಟಿಎಸ್‌ಎಸ್ ಸಭಾಂಗಣದಲ್ಲಿ ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ, ಟಿಎಸ್‌ಎಸ್, ಟಿಎಂಎಸ್, ಗ್ರಾಮಾಭ್ಯುದಯ ಮತ್ತು ಜಾಗೃತ ವೇದಿಕೆ ಸೋಂದಾ ಸಹಯೋಗದಲ್ಲಿ ಕೃಷಿ ಜಯಂತಿಯ ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಮಾರಕ ಎಲೆ ಚುಕ್ಕೆ ರೋಗದ ನಿರ್ಮೂಲನೆ ಕುರಿತು ಚಿಂತನಾ ಸಂವಾದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕೆ ಸಾಮೂಹಿಕವಾಗಿ ಪ್ರಯತ್ನ ಮಾಡಿದಾಗ ಮಾತ್ರ ಯಶಸ್ಸು ಲಭಿಸುತ್ತದೆ. ಈಗಾಗಲೇ ತಜ್ಞರು ವೈಜ್ಞಾನಿಕ ಮಾರ್ಗದರ್ಶನ ರೈತರಿಗೆ ನೀಡಿದ್ದಾರೆ. ಧಾರ್ಮಿಕ ದೈವಿಕ ನೆಲೆಯಿಂದಲೂ ಪ್ರಯತ್ನ ಮಾಡಬೇಕು. ಮಠದಿಂದ ಈಗಾಗಲೇ ತಿಳಿಸಲಾಗಿದೆ. ಸುಮಾರು ೪೦ ವರ್ಷದ ಹಿಂದೆ ಕಾಳುಮೆಣಸಿನ ಬಳ್ಳಿಗೆ ವಿಚಿತ್ರ ರೋಗ ಕಾಣಿಸಿಕೊಂಡಿತ್ತು. ಆಗ ಧಾರ್ಮಿಕ ದೈವಿಕ ನೆಲೆಯಿಂದ ರೋಗದಿಂದ ಮುಕ್ತಿ ಪಡೆಯಲಾಗಿತ್ತು. ದೇವರು, ಗೋಶಾಲೆ, ತೋಟ, ಗದ್ದೆ ಇವು ಜೀವನದ ಪ್ರಮುಖ ಕೇಂದ್ರವಾಗಿತ್ತು. ಇದೀಗ ಈ ಜೀವನ ಕ್ರಮ ಬದಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಗತ್ಯ ಪೋಷಕಾಂಶಗಳ ಕೊರತೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದ್ದು, ಇದರಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಹಾಗಾಗಿ ರೈತರು ಮಣ್ಣಿನ ಪೋಷಕಾಂಶ ಕಾಪಾಡಿಕೊಳ್ಳಬೇಕು. ಅವೈಜ್ಞಾನಿಕವಾಗಿ ರಾಸಾಯನಿಕ ಬಳಸುತ್ತಿರುವುದರಿಂದ ಅನೇಕ ಸಮಸ್ಯೆಗಳು ಉದ್ಭವವಾಗುತ್ತದೆ ಎಂದರು.ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಎಲೆ ಚುಕ್ಕೆ ಎಂಬ ಮಾರಕ ರೋಗ ತಾಂಡವವಾಡುತ್ತಿದೆ. ಸಿದ್ದಾಪುರ ತಾಲೂಕಿನಲ್ಲಿ ಈ ರೋಗವು ಅತೀ ಹೆಚ್ಚಾಗಿ ವ್ಯಾಪಿಸಿದೆ. ಎಲೆ ಚುಕ್ಕೆ ರೋಗದಿಂದ ಅಡಿಕೆ ಬೆಳೆಗಾರರು ತತ್ತರಿಸಿ ಹೋಗುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ರೈತರಿಗೆ ರೋಗದ ನಿರ್ಮೂಲನೆ ಕುರಿತು ಮಾಹಿತಿ ನೀಡಲಾಗುತ್ತಿದೆ. ೨೪ ಸಾವಿರ ಎಕರೆ ಪ್ರದೇಶದಲ್ಲಿ ಸುಮಾರು ೧೨ ಸಾವಿರ ಪ್ರದೇಶದ ಅಡಿಕೆ ತೋಟವು ಎಲೆ ಚುಕ್ಕೆ ರೋಗದಿಂದ ಬಳಲುತ್ತಿದೆ. ಎಲೆ ಚುಕ್ಕೆ ರೋಗದ ಬಗ್ಗೆ ರೈತರಿಗೆ ಮಾಹಿತಿ ನೀಡಲು ಸಂಸ್ಥೆಯ ವತಿಯಿಂದ ತಜ್ಞರನ್ನು ಕಳುಹಿಸಲು ಸಿದ್ದರಿದ್ದೇವೆ ಎಂದರು.
ಮಾರಕ ಎಲೆ ಚುಕ್ಕಿ ರೋಗದ ನಿರ್ಮೂಲನೆ ಹೇಗೆ ಎಂಬ ಬಗ್ಗೆ ಹಿರಿಯ ವಿಜ್ಞಾನಿ ಡಾ. ರಾಜೇಂದ್ರ ಹೆಗಡೆ ಮಾತನಾಡಿ, ಮಣ್ಣಿನ ಆರೋಗ್ಯ ಸರಿಯಿಲ್ಲದ ಪ್ರದೇಶಗಳಲ್ಲಿ ಎಲೆ ಚುಕ್ಕೆ ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ. ಅಡಿಕೆ ಗಿಡ ಹಾಗೂ ಮರಗಳಿಗೆ ಬೇಕಾಗುವಷ್ಟು ಪೋಷಕಾಂಶ ಒದಗಿಸಬೇಕು. ರೈತರು ಮಣ್ಣಿನ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದರು.ಪ್ರಾಧ್ಯಾಪಕ ಡಾ. ಗಂಗಾಧರ ನಾಯ್ಕ ಮಾತನಾಡಿ, ೨೦೨೦ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಅಡಿಕೆ ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿದೆ. ಎಲೆ ಚುಕ್ಕೆ ರೋಗದ ಬಗ್ಗೆ ಈಗಾಗಲೇ ಸಾಕಷ್ಟು ಸಂಶೋಧನೆ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕ, ಟಿ.ಎಂ.ಎಸ್ ಅಧ್ಯಕ್ಷ ಜಿ.ಟಿ ಹೆಗಡೆ ತಟ್ಟಿಸರ, ಟಿಎಸ್‌ಎಸ್ ಉಪಾಧ್ಯಕ್ಷ ಮಹಾಬಲೇಶ್ವರ ಭಟ್ಟ, ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ ಮತ್ತಿತರರು ಉಪಸ್ಥಿತರಿದ್ದರು.ಉದಯ ಹೆಗಡೆ ಕಲ್ಲುಸರಿಗೆ ಪ್ರಾರ್ಥಿಸಿದರು, ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್.ಎನ್. ಹೆಗಡೆ ಉಳ್ಳಿಕೊಪ್ಪ ಸ್ವಾಗತಿಸಿದರು. ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಕಾರ್ಯದರ್ಶಿ ಸುರೇಶ ಹಕ್ಕಿಮನೆ ನಿರೂಪಿಸಿದರು.
ಪಾರಂಪರಿಕ ಕೃಷಿಗೆ ಹೆಚ್ಚಿನ ಉತ್ತೇಜನ ಸಿಗಬೇಕು. ಸಾವಯವ ಕೃಷಿಯನ್ನು ಮಾಡಿದರೆ ಒಳಿತು. ಇದರಿಂದ ಮಣ್ಣಿನ ಆರೋಗ್ಯ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ರೈತರ ಪ್ರಯತ್ನ ನಡೆಯಬೇಕಿದೆ ಎಂದು ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.ಅಡಿಕೆ ಬೆಳೆಯುವ ಪ್ರದೇಶಗಳು ಇತ್ತೀಚೆಗೆ ಗಣನೀಯವಾಗಿ ಏರಿಕೆ ಕಾಣುತ್ತಿರುವುದರಿಂದ ರಾಜ್ಯದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಅಡಿಕೆ ಬೆಳೆ ಬೆಳಲಾಗುತ್ತಿದೆ. ಅಡಿಕೆ ತೋಟಗಳಿಗೆ ಬಸಿಗಾಲಿವೆ ಅತಿ ಅವಶ್ಯಕ. ಬಸಿಗಾಲಿವೆ ನಿರ್ವಹಣೆಯಲ್ಲಿ ಏರುಪೇರಾದರೆ ತೋಟದಲ್ಲಿ ರೋಗಗಳು ಕಾಣಿಸಿಕೊಳ್ಳುತ್ತದೆ ಎಂದು ಹಿರಿಯ ವಿಜ್ಞಾನಿ ಡಾ. ರಾಜೇಂದ್ರ ಹೆಗಡೆ ಹೇಳಿದ್ದಾರೆ.