10 ದಿನದೊಳಗೆ ವೇತನ ನೀಡದಿದ್ದರೆ ಸಾಮೂಹಿಕ ರಜೆ: 108 ಆಂಬ್ಯುಲೆನ್ಸ್‌ ಸಿಬ್ಬಂದಿ

| Published : Mar 24 2024, 01:31 AM IST

10 ದಿನದೊಳಗೆ ವೇತನ ನೀಡದಿದ್ದರೆ ಸಾಮೂಹಿಕ ರಜೆ: 108 ಆಂಬ್ಯುಲೆನ್ಸ್‌ ಸಿಬ್ಬಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯ ಕವಚ-108 ಆಂಬ್ಯುಲೆನ್ಸ್‌ ಸಿಬ್ಬಂದಿಗೆ ಕಳೆದ 5 ವರ್ಷಗಳಿಂದಲೂ 3-4 ತಿಂಗಳಿಗೊಮ್ಮೆ ವೇತನ ನೀಡುತ್ತಿದ್ದು, ಕಳೆದ ಡಿಸೆಂಬರ್ 2023ರಿಂದ ಈವರೆಗೆ ವೇತನವೇ ನೀಡಿಲ್ಲ. ಇದರಿಂದ ಸಿಬ್ಬಂದಿ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಸುವರ್ಣ ಕರ್ನಾಟಕ ಆರೋಗ್ಯ ರಕ್ಷಾ ಕವಚ-108 ನೌಕರರ ಸಂಘದ ಜಿಲ್ಲಾ ಘಟಕ ದಾವಣಗೆರೆಯಲ್ಲಿ ದೂರಿದೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಆರೋಗ್ಯ ಕವಚ-108 ಆಂಬ್ಯುಲೆನ್ಸ್‌ ಸಿಬ್ಬಂದಿಗೆ ಕಳೆದ 5 ವರ್ಷಗಳಿಂದಲೂ 3-4 ತಿಂಗಳಿಗೊಮ್ಮೆ ವೇತನ ನೀಡುತ್ತಿದ್ದು, ಕಳೆದ ಡಿಸೆಂಬರ್ 2023ರಿಂದ ಈವರೆಗೆ ವೇತನವೇ ನೀಡಿಲ್ಲ. ಇದರಿಂದ ಸಿಬ್ಬಂದಿ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಸುವರ್ಣ ಕರ್ನಾಟಕ ಆರೋಗ್ಯ ರಕ್ಷಾ ಕವಚ-108 ನೌಕರರ ಸಂಘದ ಜಿಲ್ಲಾ ಘಟಕ ದೂರಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಮಂಜುನಾಥ ಅವರು, ಕಳೆದ ಡಿಸೆಂಬರ್‌ನಿಂದ ಬಾಕಿ ಇರುವ ವೇತನ ಬಿಡುಗಡೆಗೆ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿ, ಅಳಲು ತೋಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ 10 ದಿನಗಳ ಒಳಗಾಗಿ ಸಮಸ್ಯೆಗೆ ಪರಿಹಾರ ಕಲ್ಪಿಸಿ, ವೇತನವನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಆರೋಗ್ಯ ಕವಚದ ಎಲ್ಲ ಸಿಬ್ಬಂದಿ ಸಾಮೂಹಿಕ ರಜೆ ಪಡೆಯುವ ಮೂಲಕ ಸೇವೆ ಸ್ಥಗಿತಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ಜಿಲ್ಲಾದ್ಯಂತ ಆರೋಗ್ಯ ಕವಚ-108ನ 19 ಆಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಿವೆ. ಈ ಸೇವೆಯಲ್ಲಿ ಇಎಂಟಿ (ಸ್ಟಾಫ್ ನರ್ಸ್), ಪೈಲಟ್‌ (ಚಾಲಕ) ಸೇರಿ ಸುಮಾರು 107 ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಕಳೆದ ಡಿಸೆಂಬರ್‌ನಿಂದ ಈ ಮಾರ್ಚ್‌ವರೆಗೆ ವೇತನ ಪಾವತಿಯಾಗಿಲ್ಲ. ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರವನ್ನೇ ಒದಗಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರೋಗ್ಯ ಸಚಿವರು, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಇಎಂಆರ್‌ಟಿ ಉಪ ನಿರ್ದೇಶಕರು, ಸಂಸ್ಥೆಯ ಮುಖ್ಯಸ್ಥರು, ನಮ್ಮ ಸಂಘದ ರಾಜ್ಯ ಪದಾಧಿಕಾರಿಗಳನ್ನು ಒಳಗೊಂಡ ಸಭೆ ಆಯೋಜಿಸಿ, ಎಲ್ಲ ಗೊಂದಲಗಳಿಗೆ ಇತಿಶ್ರೀ ಹಾಡಬೇಕು. ಮುಂದಿನ ದಿನಗಳಲ್ಲಿ ಹೆಚ್ಚುವರಿ ವೇತನ, ಕಡಿತವಾದ ವೇತನ ಸಮೇತ, ವೇತನ ಪಾವತಿಸಬೇಕು. ಇನ್ನು ಮುಂದೆ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ಪಾವತಿ ಆಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಗಡುವಿನೊಳಗೆ ಸ್ಪಂದಿಸಬೇಕು. ಇಲ್ಲದಿದ್ದರೆ, ಸಾರ್ವಜನಿಕರಿಗೆ ಈ ಅವಧಿಯಲ್ಲಿ ಯಾವುದೇ ತೊಂದರೆಯಾಗದಲ್ಲಿ ಸಂಸ್ಥೆ ಅಧಿಕಾರಿಗಳೇ ನೇರ ಹೊಣೆ ಎಂದು ಎಸ್.ಮಂಜುನಾಥ ಎಚ್ಚರಿಸಿದರು.

ಸಂಘದ ಜಿಲ್ಲಾಧ್ಯಕ್ಷ ರಮೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ನಟರಾಜ, ತಿಪ್ಪಣ್ಣ, ರಾಜ ನಾಯ್ಕ ಇತರರು ಇದ್ದರು.

- - -

ಬಾಕ್ಸ್‌ ವೇತನದಲ್ಲಿ ಏಕಾಏಕಿ ಕಡಿತ ಏಕೆ?

ಆಗಸ್ಟ್ 2022ರವರೆಗೆ ಇಎಂಟಿಗೆ ₹15509, ಪೈಲಟ್‌ಗಳಿಗೆ ₹15731 ವೇತನ ರೂಪದಲ್ಲಿ ನೀಡಲಾಗುತ್ತಿತ್ತು. ಅನಂತರ ಸೆಪ್ಟಂಬರ್ 2022ರ ನಂತರ ಬಾಕಿ ಇದ್ದ 3 ವರ್ಷಗಳ ಹೆಚ್ಚುವರಿ ವೇತನ ಶೇ.45 ಸೇರಿ, ಇಎಂಟಿಗೆ ₹36608, ಪೈಲಟ್‌ಗಳಿಗೆ ₹35603 ವೇತನ ರೂಪದಲ್ಲಿ ಸಿಗುತ್ತಿತ್ತು. ಈ ಹೆಚ್ಚುವರಿ ಹೊಸ ವೇತನವನ್ನು ಕೇವಲ 6 ತಿಂಗಳ ಕಾಲ ಮಾತ್ರ ನೀಡಿ, ಏಕಾಏಕಿ ಕಡಿತ ಮಾಡಲಾಗಿದೆ. ಸೆಪ್ಟಂಬರ್ 2022ರಿಂದ ಫೆಬ್ರವರಿ 2023 ರವರೆಗೆ ನೀಡಿ, ಯಾವುದೇ ಕಾರಣ ನೀಡದೇ, ಇಎಂಟಿಗೆ ₹4 ಸಾವಿರ, ಪೈಲಟ್‌ಗೆ ₹6 ಸಾವಿರ ಕಡಿತಗೊಳಿಸಿ, ಮಾರ್ಚ್ 2023ರಿಂದ ಇಎಂಟಿಗೆ ₹32774, ಪೈಲಟ್‌ಗೆ ₹29221 ಮಾತ್ರ ನೀಡಲಾಗುತ್ತಿದೆ ಎಂದರು.

- - -

-23ಕೆಜಿವಿಜಿ2:

ದಾವಣಗೆರೆಯಲ್ಲಿ ಶನಿವಾರ ಸುವರ್ಣ ಕರ್ನಾಟಕ ಆರೋಗ್ಯ ರಕ್ಷಾ ಕವಚ(108) ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಮಂಜುನಾಥ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.