ಭತ್ತ, ಶೇಂಗಾ ಖರೀದಿ ಕೇಂದ್ರ ಆರಂಭಕ್ಕೆ ಜಿಲ್ಲಾಧಿಕಾರಿ ಸೂಚನೆ

| Published : Nov 16 2024, 12:35 AM IST

ಭತ್ತ, ಶೇಂಗಾ ಖರೀದಿ ಕೇಂದ್ರ ಆರಂಭಕ್ಕೆ ಜಿಲ್ಲಾಧಿಕಾರಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಶೇಂಗಾ, ಭತ್ತ, ಬಿಳಿಜೋಳ ಹಾಗೂ ರಾಗಿ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ವಿವಿಧ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣಗಳಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.

ಹಾವೇರಿ: ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಶೇಂಗಾ, ಭತ್ತ, ಬಿಳಿಜೋಳ ಹಾಗೂ ರಾಗಿ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ವಿವಿಧ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣಗಳಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಟಾಸ್ಕಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಂಬಲ ಬೆಲೆಯಡಿ ಸರ್ಕಾರದ ಮಾರ್ಗಸೂಚಿಯಂತೆ ಶೇಂಗಾ, ಭತ್ತ, ಜೋಳ ಹಾಗೂ ರಾಗಿ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.ಬೆಂಬಲ ಬೆಲೆ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಪ್ರತಿ ಕ್ವಿಂಟಲ್‌ಗೆ ₹ ೬,೭೮೩, ಭತ್ತ-ಸಾಮಾನ್ಯ ಪ್ರತಿ ಕ್ವಿಂಟಲ್‌ಗೆ ₹ ೨,೩೦೦, ಭತ್ತ –ಗ್ರೇಡ್ ಎ ಪ್ರತಿ ಕ್ವಿಂಟಾಲ್‌ಗೆ ₹ ೨,೩೨೦, ರಾಗಿ ಪ್ರತಿ ಕ್ವಿಂಟಲ್‌ಗೆ ₹ ೪,೨೯೦ ಹಾಗೂ ಬಿಳಿಜೋಳ(ಮಾಲ್ದಂಡಿ) ಪ್ರತಿ ಕ್ವಿಂಟಾಲ್‌ಗೆ ₹ ೩,೪೨೧ ಮತ್ತು ಜೋಳ (ಹೈಬ್ರೀಡ್) ಪ್ರತಿ ಕ್ವಿಂಟಲ್‌ಗೆ ₹ ೩,೩೭೧ ಗಳಂತೆ ಸರ್ಕಾರ ಆದೇಶ ಹೊರಡಿಸಿದೆ. ಭತ್ತ ಖರೀದಿಗೆ ನ.೧೫ರಿಂದ ಡಿಸೆಂಬರ್ ೩೧ರ ವರೆಗೆ ರೈತರ ನೋಂದಣಿ ಪ್ರಕ್ರಿಯೆ ಕೈಗೊಳ್ಳಲು ಹಾಗೂ ೨೦೨೫ ಜ.೧ರಿಂದ ಮಾ.೩೧ರವರೆಗೆ ನೋಂದಾಯಿತ ರೈತರಿಂದ ಭತ್ತವನ್ನು ಖರೀದಿಸಿ ಮಿಲ್‌ಗಳಲ್ಲಿ ಶೇಖರಿಸುವ ಮತ್ತು ಪರಿವರ್ತಿಸುವ ಕಾರ್ಯ ಕೈಗೊಳ್ಳಲು ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಂಡಳಿ ನಿಯಮಿತ ಸಂಸ್ಥೆಯ ಮೂಲಕ ಖರೀದಿಸಲು ಆದೇಶಿಸಲಾಗಿದೆ.ಜೋಳ ಮತ್ತು ರಾಗಿ ಖರೀದಿಗೆ ಡಿಸೆಂಬರ್ ೧ರಿಂದ ರೈತರ ನೋಂದಣಿ ಆರಂಭಕ್ಕೆ ಹಾಗೂ ೨೦೨೫ ಜ.೧ರಿಂದ ಮಾ.೩೧ರವರೆಗೆ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಂಡಳಿ ನಿಯಮಿತ ಸಂಸ್ಥೆಯ ಮೂಲಕ ಖರೀದಿಸಲು ಆದೇಶಿಸಲಾಗಿದೆ.ಖರೀದಿ ಕೇಂದ್ರಗಳ ವಿವರ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿ ಕೇಂದ್ರಗಳನ್ನು ರಾಣಿಬೆನ್ನೂರು, ಸವಣೂರು ಹಾಗೂ ಹಾವೇರಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಪ್ರಾಂಗಣದಲ್ಲಿ, ಶಿಗ್ಗಾಂವಿಯಲ್ಲಿ ಶ್ರೀ ಮಹಾನಂದಿ ಗ್ರೀನ್ ರೈತ ಉತ್ಪಾದಕ ಕಂಪನಿ ಮತ್ತು ಹುಲಗೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ತೆರೆಯಲು ಸೂಚನೆ ನೀಡಿದರು. ಭತ್ತ ಖರೀದಿ ಕೇಂದ್ರಗಳನ್ನು ಹಾನಗಲ್ಲ, ರಾಣಿಬೆನ್ನೂರು ಹಾಗೂ ಶಿಗ್ಗಾಂವಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಪ್ರಾಂಗಣದಲ್ಲಿ ತೆರೆಯಲು ಸೂಚನೆ ನೀಡಿದರು.ಬಿಳಿಜೋಳ ಖರೀದಿ ಕೇಂದ್ರಗಳನ್ನು ಹಾವೇರಿ, ರಾಣಿಬೆನ್ನೂರು ಹಾಗೂ ಶಿಗ್ಗಾಂವಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಪ್ರಾಂಗಣದಲ್ಲಿ ಹಾಗೂ ರಾಗಿ ಕೇಂದ್ರಗಳನ್ನು ಹಿರೇಕೆರೂರು ಹಾಗೂ ರಾಣಿಬೆನ್ನೂರು ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಪ್ರಾಂಗಣದಲ್ಲಿ ಆರಂಭಿಸಲು ಸೂಚನೆ ನೀಡಿದರು.ನೋಡಲ್ ಅಧಿಕಾರಿಗಳ ನೇಮಕ: ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳ ಪ್ರಕ್ರಿಯೆ ಮೇಲೆ ನಿಗಾ ವಹಿಸಲು ಹಾಗೂ ವ್ಯವಸ್ಥಿತವಾಗಿ ಸುಗಮವಾಗಿ ನಡೆಸಲು ಆಯಾ ತಾಲೂಕು ತಹಸೀಲ್ದಾರ್, ಕಂದಾಯ ಇಲಾಖೆ ಹಾಗೂ ಸಂಬಂಧಪಟ್ಟ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ತಾಲೂಕು ನೋಡಲ್ ಅಧಿಕಾರಿಗಳಾಗಿ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರನ್ನು ಜಿಲ್ಲಾ ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ.ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತೋಟಗಾರಿಕೆ, ಸಹಕಾರಿ ಸಂಘಗಳ ಉಪನಿಬಂಧಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕರು, ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಇದ್ದರು.