ಕಾರಟಗಿಯ ಐತಿಹಾಸಿಕ ಪುಷ್ಕರಣಿ ಸ್ವಚ್ಛತೆಗೆ ಕೈಜೋಡಿಸಿದ ಕಾಲೇಜು ವಿದ್ಯಾರ್ಥಿನಿಯರು

| Published : Feb 24 2024, 02:33 AM IST

ಕಾರಟಗಿಯ ಐತಿಹಾಸಿಕ ಪುಷ್ಕರಣಿ ಸ್ವಚ್ಛತೆಗೆ ಕೈಜೋಡಿಸಿದ ಕಾಲೇಜು ವಿದ್ಯಾರ್ಥಿನಿಯರು
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಿಗ್ಗೆ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡು ಇಡೀ ದಿನ ಐತಿಹಾಸಿಕ ಬಾವಿಯ ಮೆಟ್ಟಿಲು, ಕಲ್ಲು ಕಂಬ, ಮೆಟ್ಟಿಲಲ್ಲಿನ ಕೆತ್ತನೆಯಾದ ಶಿಲ್ಪಗಳನ್ನು ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ವಚ್ಛಗೊಳಿಸುವ ಕೆಲಸ ನಡೆಸಿದರು.

ಕಾರಟಗಿ: ಇಲ್ಲಿನ ಪುರಸಭೆ ಮತ್ತು ಯುವ ಸಮೂಹದ ಸಹಯೋಗದಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿನ ಐತಿಹಾಸಿಕ ಸುಂಕ್ಲೀರಪ್ಪನ ಪುಷ್ಕರಣಿ ಜೀರ್ಣೋದ್ಧಾರ ನಡೆಯಿತು.ಸ್ವಚ್ಛತಾ ಕಾರ್ಯದಲ್ಲಿ ಇಲ್ಲಿನ ಕಸ್ತೂರಿಬಾ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಕಾರ್ಯ ಶುಕ್ರವಾರ ಪಾಲ್ಗೊಂಡಿದ್ದರು.ಬೆಳಿಗ್ಗೆ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡು ಇಡೀ ದಿನ ಐತಿಹಾಸಿಕ ಬಾವಿಯ ಮೆಟ್ಟಿಲು, ಕಲ್ಲು ಕಂಬ, ಮೆಟ್ಟಿಲಲ್ಲಿನ ಕೆತ್ತನೆಯಾದ ಶಿಲ್ಪಗಳನ್ನು ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ವಚ್ಛಗೊಳಿಸುವ ಕೆಲಸ ನಡೆಸಿದರು.ಕಲ್ಯಾಣ ಚಾಲುಕ್ಯರು ಈ ಬಾವಿಯನ್ನು ಇಲ್ಲಿನ ಐತಿಹಾಸಿಕ ಮಹದೇಶ್ವರ ದೇವಾಲಯ ಹಾಗೂ ಐತಿಹಾಸಿಕ ಶ್ರೀಲಕ್ಷೀ ವೆಂಕಟೇಶ್ವರ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗಾಗಿ ನಿರ್ಮಿಸಿದ್ದರು. ಪುಷ್ಕರಣಿ ವಿಶೇಷವಾಗಿ ಶಿಲ್ಪಕಲೆ ಕಲಾಕೃತಿಗಳನ್ನು ಹೊಂದಿದೆ. ಕಳೆದ 40 ವರ್ಷಗಳಿಂದ ನಿರ್ಲಕ್ಷ್ಯಕ್ಕೆ ತುತ್ತಾಗಿ ಕಸದ ಹೊಂಡವಾಗಿತ್ತು.ಕಳೆದ ೧೫ ದಿನಗಳಿಂದ ಪುರಸಭೆ ಹಾಗೂ ಸ್ಥಳೀಯ ಯುವಕರ ಪಡೆಯೊಂದು ಬಾವಿಯಲ್ಲಿನ ಸುಮಾರು ಸಾವಿರಕ್ಕೂ ಹೆಚ್ಚು ಟ್ರಿಪ್‌ನಷ್ಟು ತ್ಯಾಜ್ಯವನ್ನು ಹೊರಹಾಕಿ ಜೀರ್ಣೋದ್ಧಾರಕ್ಕೆ ಮುಂದಾಗಿದೆ. ಜತೆಗೆ ಕಸ್ತೂರಿ ಬಾ ಮಹಿಳಾ ಮಹಾವಿದ್ಯಾಲಯದ ನೂರಾರು ವಿದ್ಯಾರ್ಥಿನಿಯರು ಕೈಗೆ ಗ್ಲೌಸ್ ಹಾಕಿ ಸಲಿಕೆ, ಗುದ್ದಲಿ, ಪುಟ್ಟಿ, ಪೊರಕೆ ಹಿಡಿದು ಬೆಳಿಗ್ಗೆಯಿಂದ ಸಂಜೆವರೆಗೂ ಸಂಪೂರ್ಣ ಸ್ವಚ್ಛತಾ ಕಾರ್ಯ ಕೈಗೊಂಡು ಶ್ರಮದಾನ ಮಾಡಿದರು.ಗತಕಾಲದ ಪುಷ್ಕರಣಿಯ ಜೀರ್ಣೋದ್ಧಾರ ಈಗ ಆರಂಭವಾಗಿದ್ದು, ಪುನರ್ ನಿರ್ಮಾಣ ಕಾರ್ಯ ಕಾರ್ಯದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಬಂದು ಸೇವೆಯಲ್ಲಿ ತೊಡಗಿಸಿಕೊಂಡಿದ್ದು ನಮಗೆಲ್ಲ ಹೆಮ್ಮೆಯ ವಿಷಯ ಎಂದು ಮಹಾವಿದ್ಯಾಲಯದ ಕಾರ್ಯದರ್ಶಿ ಜಿ. ಅಮರೇಶ್ ಹೇಳಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲ ಅನ್ನಪೂರ್ಣ ಮಾಲಿಪಾಟೀಲ್, ಉಪನ್ಯಾಸಕಿ ಮಾಧವಿ, ವಿರುಪಾಕ್ಷೇಶ್ವರ ಕಾರಟಗಿ, ಲಿಂಗಪ್ಪ ಟಿ, ಲಕ್ಷ್ಮಣ, ಹನುಮಂತಪ್ಪ, ಶ್ರುತಿ, ಮೇಘಾ ಸೇರಿದಂತೆ ಪುಷ್ಕರಣಿ ಪುನರ್ ನಿರ್ಮಾಣದ ಉಸ್ತುವಾರಿಗಳಾದ ನ್ಯಾಯವಾದಿ ಗವಿಸಿದ್ದಪ್ಪ ಸಾಲೋಣಿ, ಶಿವಕುಮಾರ ಶೀಲವಂತರ, ಡಾ.ಶರಣಪ್ಪ ಮಾವಿನಮಡ್ಗು, ಪ್ರವೀಣ ಗದ್ದಿ, ಬಸವರಾಜ ಚಿನಿವಾಲ, ಹನುಮೇಶ ದಾಸಾಪುರ, ಕಲ್ಲನಗೌಡ, ನಾಗರಾಜ್ ಕುಂಬಾರ್, ಆನಂದ, ಹನುಮೇಶ್, ಅಲ್ಲಾಭಕ್ಷಿ ಇದ್ದರು.