ವಿಜ್ಞಾನ ವಿಭಾಗದಲ್ಲಿ ನಾಲ್ಕು ನೂರು ಮಕ್ಕಳು, ಕಲಾ ವಿಭಾಗದಲ್ಲಿ ಎರಡುನೂರು ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ. ಐಎಎಸ್, ಐಪಿಎಸ್ ಕೋಚಿಂಗ್ ನೀಡಲಾಗುತ್ತದೆ

ಕೊಪ್ಪಳ: ಐಐಟಿ ಮಾದರಿಯಲ್ಲಿ ನಿರ್ಮಾಣವಾಗಿರುವ ಹೈಟೆಕ್ ಕಟ್ಟಡದಲ್ಲಿ ಕೋಳೂರು ಗ್ರಾಮದ ಬಳಿ ವಿದ್ಯಾರ್ಥಿನಿಯರಿಗಾಗಿ ಪಿಯು ವಸತಿ ಕಾಲೇಜು ನಿರ್ಮಾಣ ಪೂರ್ಣಗೊಂಡಿದ್ದು, ಜೂನ್ ತಿಂಗಳಲ್ಲಿ ಆರಂಭವಾಗಲಿದೆ ಎಂದು ಶ್ರೀಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಘೋಷಣೆ ಮಾಡಿದ್ದಾರೆ.

ಶ್ರೀಗವಿಸಿದ್ಧೇಶ್ವರ ಮಹಾರಥೋತ್ಸವದ ಎರಡನೇ ದಿನದ ಭಕ್ತ ಹಿತಚಿಂತನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ಸಿದ್ದಗಂಗಾ ಶ್ರೀಗಳು, ಶಿವಶಾಂತವೀರ ಮಹಾಸ್ವಾಮೀಜಿಗಳು ಹಾಗೂ ಸಿದ್ಧೇಶ್ವರ ಶ್ರೀಗಳು ಆದರ್ಶವಾಗಿದ್ದಾರೆ. ಅವರ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತೇನೆ. ಈ ಹಿಂದೆ ಗವಿಮಠದ ಆವರಣದಲ್ಲಿ 5 ಸಾವಿರ ವಿದ್ಯಾರ್ಥಿಗಳಿಗಾಗಿ ಉಚಿತ ಪ್ರಸಾದ ನಿಲಯಕ್ಕೆ ತುಮಕೂರಿನ ಶಿವಕುಮಾರ ಸ್ವಾಮೀಜಿಗಳು ಅಡಿಗಲ್ಲು ಹಾಕಿದ್ದರು, ನಂತರ ಅವರೇ ಅದರ ಉದ್ಘಾಟನೆ ಮಾಡಿದ್ದರು.

ಈಗ ಈ ಭಾಗದ ವಿದ್ಯಾರ್ಥಿನಿಯರಿಗಾಗಿ ಉಚಿತ ವಸತಿ ಕಾಲೇಜು ಪ್ರಾರಂಭಿಸಲಾಗುವುದು. ಬೀದಿ ಬದಿ ವ್ಯಾಪಾರಿಗಳು, ತಂದೆ, ತಾಯಿ ಇಲ್ಲದ ತಬ್ಬಲಿಗಳು ಇರುತ್ತಾರೆ. ರೈತರು, ಆಟೋದವರು ಮಕ್ಕಳು ಸೇರಿದಂತೆ ಓದಿಸಲು ಆಗದ ಸ್ಥಿತಿಯಲ್ಲಿ ಇರುತ್ತಾರೆ. ಅಂಥವರಿಗಾಗಿ ಈ ಕಾಲೇಜು ಇದೆ. ₹60 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ₹2,3 ಲಕ್ಷ ವೆಚ್ಚ ಮಾಡಿ, ಬಡವರು ಪಿಯುಸಿ ಓದಿಸಲು ಆಗುವುದಿಲ್ಲ. ಅಂಥವರಿಗಾಗಿಯೇ ಈ ಕಾಲೇಜು ನಿರ್ಮಾಣ ಮಾಡಲಾಗಿದೆ. ಅತ್ಯುತ್ತಮವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು.

ವಿಜ್ಞಾನ ವಿಭಾಗದಲ್ಲಿ ನಾಲ್ಕು ನೂರು ಮಕ್ಕಳು, ಕಲಾ ವಿಭಾಗದಲ್ಲಿ ಎರಡುನೂರು ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ. ಐಎಎಸ್‌, ಐಪಿಎಸ್ ಕೋಚಿಂಗ್ ನೀಡಲಾಗುತ್ತದೆ. ನೀಟು, ಸಿಇಟಿ ಕೋಚಿಂಗ್ ನೀಡಲಾಗುತ್ತದೆ. ಈ ವರ್ಷ ಆರು ನೂರು ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ. ಹದಿನೈದುನೂರು ಮಕ್ಕಳಿಗೆ ಈಗ ಕಾಲೇಜು ಕಟ್ಟಡ ಸಿದ್ಧವಾಗಿದೆ. ಏಳುನೂರು ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್ ಕಟ್ಟಡ ನಿರ್ಮಾಣವಾಗಿದೆ. ಉಳಿದ ಮಕ್ಕಳಿಗೂ ಹಾಸ್ಟೆಲ್ ನಿರ್ಮಾಣ ಗವಿಸಿದ್ಧ ಶಕ್ತಿ ಕೊಟ್ಟರೇ ಅದನ್ನು ಪೂರ್ಣಗೊಳಿಸಲಾಗುವುದು. ಕರ್ನಾಟಕದ ಯಾವ ಮೂಲೆಯಿಂದಾದರೂ ಈ ಮಕ್ಕಳು ಬರಬಹುದು. ಹೈಸ್ಕೂಲ್ ಶಿಕ್ಷಕರು ಇದನ್ನು ಹೆಚ್ಚು ಹೆಚ್ಚು ಪ್ರಚಾರ ನಡೆಸಬೇಕು. ಇದೆಲ್ಲವನ್ನು ಉಚಿತವಾಗಿ ನಡೆಸುವುದು ಕಷ್ಟವಾಗುತ್ತದೆ. ಕೋಚಿಂಗ್, ಶಿಕ್ಷಣ ಉಚಿತವಾಗಿ ನೀಡಲಾಗುತ್ತದೆ. ಪ್ರಸಾದದ ವೆಚ್ಚವನ್ನು ಡಿವೈಡ್ ಲೆಕ್ಕಾಚಾರದಲ್ಲಿ ಪಾವತಿ ಮಾಡಬೇಕಾಗುತ್ತದೆ.

ಭಾವುಕರಾದ ಶ್ರೀಗಳು:ಇದೆಲ್ಲವೂ ಮಕ್ಕಳಿಗೆ ತಲುಪಲಿ ಎಂದು ನೀವೆಲ್ಲ ಆರ್ಶೀವಾದ ಮಾಡಬೇಕು. ನೀವು ಹೃದಯ ತುಂಬಿ ಆರ್ಶಿವಾದ ಮಾಡಬೇಕು ಎಂದು ಭಾವುಕರಾದರು. ನನ್ನ ಹುಟ್ಟೆ ಜೋಳಗಿಯಲ್ಲಿದೆ. ಜೋಳಿಗೆ ಹಿಡಿದುಕೊಂಡೆ ಹುಟ್ಟಿದ್ದೇನೆ, ಈಗಲೂ ಜೋಳಿಗೆ ಹಿಡಿದುಕೊಂಡಿದ್ದೇನೆ, ಅರಿವೆಯ ಜೋಳಿಗೆ ಹೋಗಿ, ಅರಿವಿನ ಜೋಳಿಗೆ ಬಂದಿದೆ. ಈ ಜೋಳಿಗೆ ಹಿಡಿದುಕೊಂಡು ಕೊಂಡು ತಿರುಗಿದಾಗ ನಾನು ಕೇಳಿದ್ದನ್ನು ಕೇಳದ್ದನ್ನು ನೀಡಿದರು. ಈ ಜೋಳಿಗೆಗೆ ತೂತು ಬಿದ್ದಿದೆ ಎನ್ನುವುದು ನೋಡಿದಾಗ ಗೊತ್ತಾಯಿತು. ಹೀಗಾಗಿ ಲೆಕ್ಕಾಚಾರ ಮಾಡಲು ಆಗುವುದಿಲ್ಲ. ಜೋಳಿಗೆಗೆ ಆಡಿಟ್ ಇರುವುದಿಲ್ಲ ಎಂದು ಹೇಳಿದರು.