ಹಚ್ಚ ಬನ್ನಿ ಮಸಬಹಂಚಿನಾಳ ಮಾರುತೇಶ್ವರನಿಗೆ ದೀಪವ

| Published : Nov 10 2025, 01:45 AM IST

ಸಾರಾಂಶ

ಪಠಾಣರ ನಾಯಕ ದೇವಸ್ಥಾನ ಮೆಟ್ಟಿಲೇರಲು ತೆರಳಿ ಅಸುನೀಗಿದ ಎಂಬ ಪ್ರತೀತಿ ಸಹ ಇದೆ

ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು

ತಾಲೂಕಿನ ಮಸಬಹಂಚಿನಾಳ ಗ್ರಾಮದ ಪುರಾತನ ಶ್ರೀ ಮಾರುತೇಶ್ವರ ಕಾರ್ತಿಕ ಮಹೋತ್ಸವ ನ. 10ರಂದು ಅಪಾರ ಭಕ್ತ ಸಮೂಹ ಮಧ್ಯೆ ಜರುಗಲಿದೆ.

ಈಗಾಗಲೇ ಗ್ರಾಮದಲ್ಲಿ ನಾನಾ ಧಾರ್ಮಿಕ ಕಾರ್ಯಗಳು ಸಹ ಜರುಗಿವೆ. ಮಾರುತೇಶ್ವರ ಕಾರ್ತಿಕ ಮಹೋತ್ಸವ ಅಂದರೆ ಇದೊಂದು ಈ ಭಾಗದ ಜನರ ಸಂತಸದ ಹಬ್ಬ. ಇದೊಂದು ಭಕ್ತಿಯ ತಾಣ. ಕಾರ್ತಿಕ ಹಚ್ಚಿ ಜನ ಪುನೀತರಾಗುತ್ತಾರೆ. ಅಲ್ಲದೆ ಅಪಾರ ಪ್ರಮಾಣದಲ್ಲಿ ಆಗಮಿಸುವ ಲಕ್ಷ ಲಕ್ಷ ಭಕ್ತರಿಗೆ ಸಂಜೆಯಿಂದ ರಾತ್ರಿ ಹಾಗೂ ಬೆಳಗಿನ ಜಾವದವರೆಗೂ ಪ್ರಸಾದ ಸೇವೆ ಇರುತ್ತದೆ. 25 ಕ್ವಿಂಟಲ್‌ ಗೋದಿ ಹುಗ್ಗಿ, 25 ಕ್ವಿಂಟಲ್ ಅನ್ನಸಂತರ್ಪಣೆ ಜರುಗುತ್ತದೆ.

ಐಹಿತ್ಯ: ಹಿಂದೆ ತಾಲೂಕಿನ ಇಟಗಿ ಗ್ರಾಮಕ್ಕೆ ಸದ್ಯ ಮಸಬಹಂಚಿನಾಳದಲ್ಲಿರುವ ಮಾರುತೇಶ್ವರ ಮೂರ್ತಿಯನ್ನು ಇಟಗಿ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಪ್ರತಿಷ್ಠಾಪಿಸಲು ತೆಗೆದುಕೊಂಡು ಹೋಗುತ್ತಿದ್ದರು. ಮಸಬಹಂಚಿನಾಳ ಗ್ರಾಮಕ್ಕೆ ಮೂರ್ತಿ ಬಂದಾಗ ಅದು ಎಲ್ಲೂ ಕದಲದೆ ಈಗಿನ ಸ್ಥಳದಲ್ಲಿಯೇ ಉಳಿದು ಬಿಟ್ಟಿತು. ಇಟಗಿ ಗ್ರಾಮಸ್ಥರು ಹಗ್ಗ ಹಾಕಿ ಮೂರ್ತಿ ಜಗ್ಗಿದರು, ಅದು ಬರಲೇ ಇಲ್ಲ. ಅಂದಿನಿಂದ ಮಸಬಹಂಚಿನಾಳ ಗ್ರಾಮದಲ್ಲಿಯೇ ಶ್ರೀ ಮಾರುತೇಶ್ವರ ಸ್ವಾಮಿ ಪ್ರತಿಷ್ಠಾಪನೆ ಆದ. ನಂತರ ಮಸಬಹಂಚಿನಾಳ ಗ್ರಾಮಸ್ಥರು ಮಾರುತೇಶ್ವರ ದೇವರಿಗೆ ದೇವಸ್ಥಾನ ನಿರ್ಮಿಸಿ ಪೂಜೆ ಮಾಡುತ್ತಾ ಬಂದಿದ್ದಾರೆ. ವಿಶೇಷವೆಂಬಂತೆ ಎಲ್ಲ ಗ್ರಾಮದಲ್ಲಿ ಮಾರುತೇಶ್ವರ ದೇವರು ದಕ್ಷಿಣಾಭಿಮುಖವಾಗಿದ್ದರೆ ಮಸಬಹಂಚಿನಾಳ ಗ್ರಾಮದಲ್ಲಿ ಪಶ್ಚಿಮಾಭಿಮುಖಿಯಾಗಿದ್ದಾನೆ.

ಅಪಾರ ಮಹಿಮೆ:

ಹಿಂದೆ ನಿಜಾಮರು ಕಾಲವಾಧಿಯಲ್ಲಿ ಅವರ ಸೈನಿಕರಾಗಿದ್ದ ಪಠಾಣರು ಮಸಬಹಂಚಿನಾಳ ಗ್ರಾಮದ ಮಾರುತೇಶ್ವರ ದೇವಸ್ಥಾನದ ಮೇಲೆ ದಾಳಿ ಮಾಡಬೇಕು ಎಂದು ನಿರ್ಧರಿಸಿ ಬರುತ್ತಿದ್ದಾಗ ಅವರು ಕಣ್ಣುಗಳು ಕತ್ತಲೆಯಿಂದ ಆವರಿಸಿತು. ಅಲ್ಲದೆ ಪಠಾಣರ ನಾಯಕ ದೇವಸ್ಥಾನ ಮೆಟ್ಟಿಲೇರಲು ತೆರಳಿ ಅಸುನೀಗಿದ ಎಂಬ ಪ್ರತೀತಿ ಸಹ ಇದೆ. ಆನಂತರ ಪಠಾಣರು ತಮ್ಮ ತಪ್ಪಿನ ಅರಿವಾಗಿ ಸ್ವಾಮಿಗೆ ಬೇಡಿಕೊಂಡು ಬೆಳ್ಳಿಯ ಸರ್ವಾನಿ ಮಾಡಿಸಿಕೊಟ್ಟಿದ್ದರು. ಅದು ಹಳೆಯಾದದ್ದರಿಂದ ಇತ್ತೀಚೆಗೆ ನೂತನ ಬೆಳ್ಳಿ ಸರ್ವಾನಿ ಮಾಡಿಸಲಾಗಿದೆ.

ಶಿಲಾದೇವಸ್ಥಾನ ನಿರ್ಮಾಣ: ಶ್ರೀಗ್ರಾಮದ ಹಿರಿಯರು, ಗ್ರಾಮಸ್ಥರು, ಭಕ್ತರು ಹಾಗೂ ಗ್ರಾಮದ ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ದೇವಸ್ಥಾನ ಹಳೆಯದಾಗಿರುವುದನ್ನು ಮನಗಂಡರು. ಕಟ್ಟಿಗೆ ಕಂಬಗಳಿಂದ ಇದ್ದ ದೇವಸ್ಥಾನವನ್ನು ನೂತನವಾಗಿ ನಿರ್ಮಿಸಲು ತೀರ್ಮಾನಿಸಿದರು. ಜನರ ಸಂಕಲ್ಪದಂತೆ ದೇವಸ್ಥಾನ ನಿರ್ಮಾಣ ಮಾದರಿ ತಯಾರಿಸಿ ಕಳೆದ ಮೂರು ವರ್ಷದ ಹಿಂದೆ ಹಳೆ ದೇವಸ್ಥಾನ ಕೆಡವಿ, ಕಲಾಕಾರರನ್ನು ಗುರುತಿಸಿ ತೀರ್ಮಾನ ಕಾರ್ಯಕೈಗೊಂಡರು. ಮೂರು ವರ್ಷಗಳ ಹಿಂದೆ ದೇವಸ್ಥಾನ ನೂತನವಾಗಿ ನಿರ್ಮಿಸಲು ಗ್ರಾಮಸ್ಥರು ಸಂಕಲ್ಪಿಸಿದರು. ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ದೇವಸ್ಥಾನವನ್ನು ಶಿಲೆಯಲ್ಲಿ ನಿರ್ಮಿಸಲು ತೀರ್ಮಾನಿಸಿದರು. ಅದರಂತೆ ಮಾರುತೇಶ್ವರ ದೇವಸ್ಥಾನವನ್ನು ಹಂಪಿಯಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ ಕಲ್ಲುಗಳಿಂದ ನಿರ್ಮಾಣ ಮಾಡಲಾಗುತ್ತಿದೆ.

ಈಗಾಗಲೇ ಗರ್ಭಗುಡಿ, ದೇವಸ್ಥಾನ ಹಾಗೂ ಗೋಪುರ ನಿರ್ಮಾಣ ಮಾಡಲಾಗಿದೆ. ಶಿಲಾ ದೇವಸ್ಥಾನ ಜನಾಕರ್ಷಣೆ ಆಗಿದ್ದು, ಮಾದರಿ ರೀತಿಯಲ್ಲಿ ನಿರ್ಮಾಣವಾಗಿದೆ. ಇನ್ನೂ ನಾನಾ ಕಾರ್ಯ ಪ್ರಗತಿಯಲ್ಲಿವೆ.

ನಂಬಿದ ಭಕ್ತರ ಸನ್ಮಂಗಲದಾತ: ಯಾರೇ ಭಕ್ತಾದಿಗಳಾಗಿರಲಿ ಮಾರುತೇಶ್ವರನಿಗೆ ಭಕ್ತಿ-ಭಾವದಿಂದ ಹರಕೆ ಕಟ್ಟಿಕೊಂಡು ದೇವಸ್ಥಾನದಲ್ಲಿ ಒಂದು ರಾತ್ರಿ ತಂಗಿದರೆ, ಸಮಸ್ಯೆಗಳು ಪರಿಹಾರ ಆಗುತ್ತವೆ. ಸದ್ಯ ಸಹ ಭಕ್ತರು ಆ ನಿಯಮ ಪಾಲಿಸುತ್ತಿದ್ದಾರೆ. ಅಲ್ಲದೆ ದೇವಸ್ಥಾನದಿಂದ ಅನತಿ ದೂರದಲ್ಲಿರುವ ಮಜ್ಜಲಬಾವಿಯಲ್ಲಿ ಸ್ನಾನ ಮಾಡಿಬಂದು ಬಂದು ಪೂಜಿಸಿದರೆ ಸಂಕಲ್ಪ ಈಡೇರುತ್ತದೆ. ಕಾರ್ತಿಕದ ದಿನದಂದು ಮಾರುತೇಶ್ವರ ದೇವರ ಅರ್ಚಕರಾದ ದಾಸಯ್ಯಜ್ಜ ಗ್ರಾಮದ ಪ್ರತಿ ಮನೆಗೆ ಹೋಗಿ ಗೋವಿಂದ ಎಂದ ಮೇಲಿಯೇ ಗ್ರಾಮಸ್ಥರು ಪ್ರಸಾದ ಸೇವೆ ಮಾಡುವ ಸಂಪ್ರದಾಯ ಸಹ ಇದೆ.

ನನ್ನ ತವರೂರಾದ ಮಸಬಹಂಚಿನಾಳ ಗ್ರಾಮದ ಮಾರುತೇಶ್ವರ ದೇವರು ಭಕ್ತರ ಪಾಲಿನ ಆರಾಧ್ಯ ದೈವ. ಇಷ್ಠಾರ್ಥ ಕಲ್ಪಿಸುವ ಕರುಣಾಮಯಿ ಸ್ವಾಮಿಯಾಗಿದ್ದಾನೆ. ಗ್ರಾಮಸ್ಥರ ಹಾಗೂ ಭಕ್ತರ ಸಹಕಾರದಿಂದ ನೂತನ ಶಿಲಾ ದೇವಸ್ಥಾನ ನಿರ್ಮಾಣ ಆಗಿದೆ. ಇನ್ನೂ ಕೆಲವು ಕಾರ್ಯ ಪ್ರಗತಿಯಲ್ಲಿದೆ. ಮಾರುತೇಶ್ವರ ಕಾರ್ತೀಕಕ್ಕೆ ರಾಜ್ಯದ ಹಲವೆಡೆಯಿಂದ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ತಿಳಿಸಿದ್ದಾರೆ.