ರಾಸಾಯನಿಕ ಆಹಾರ ಪ್ರವೃತ್ತಿಯಿಂದ ಹೊರ ಬನ್ನಿ: ಪ್ರೊ.ಎಂ.ಬಿ.ಪುರಾಣಿಕ್‌

| Published : May 01 2024, 01:19 AM IST

ರಾಸಾಯನಿಕ ಆಹಾರ ಪ್ರವೃತ್ತಿಯಿಂದ ಹೊರ ಬನ್ನಿ: ಪ್ರೊ.ಎಂ.ಬಿ.ಪುರಾಣಿಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಳಗದ ಕಾರ್ಯದರ್ಶಿ ರತ್ನಾಕರ ಕುಳಾಯಿ ಮುಂದಿನ ಯೋಜನೆಗಳ ಬಗ್ಗೆ ವಿವರ ನೀಡಿದರು. ಬಳಗದಿಂದ ಲೋಕಾರ್ಪಣೆಗೊಂಡ ಅಂತರ್ಜಾಲ ಬಗ್ಗೆ ಗಿರೀಶ್ ಐತಾಳ್ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಾಂಪ್ರದಾಯಿಕ ಸಾವಯವ ಕೃಷಿ ವಿಷಮುಕ್ತ ಮಾತ್ರವಲ್ಲ, ಈ ಉತ್ಪನ್ನಗಳು ಔಷಧೀಯ ಗುಣಗಳನ್ನು ಕೊಡಬಲ್ಲದು. ಆರೋಗ್ಯಕರ ಆಹಾರವೂ ಹೌದು. ನಮ್ಮ ಈಗಿನ ಪೀಳಿಗೆ ಇದನ್ನು ಗಮನಿಸಿ ಈಗಿನ ಅಧಿಕ ಇಳುವರಿಗಾಗಿ ಪ್ರಸ್ತುತ ರೂಢಿ ಮಾಡಿಕೊಂಡಿರುವ ರಾಸಾಯನಿಕ ಆಹಾರ ಪ್ರವೃತ್ತಿಯಿಂದ ಹೊರಬರುವ ಅನಿವಾರ್ಯತೆ ಇದೆ ಎಂದು ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್ ಹೇಳಿದರು.

ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ವತಿಯಿಂದ ನಗರದ ಶಾರದಾ ವಿದ್ಯಾಲಯ ಸಭಾಂಗಣದಲ್ಲಿ ಭಾನುವಾರ ನಡೆದ ಬಳಗದ ವೆಬ್‌ಸೈಟ್‌ ಹಾಗೂ ವಿವಿಧ ಕಾರ್ಯಕ್ರಮಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾವಯವ ಬಳಗದ ಗೌರವ ಮಾರ್ಗದರ್ಶಕ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ನಮ್ಮ ಮಕ್ಕಳಿಗೆ ಕೃಷಿಯಲ್ಲಿ ಆಸಕ್ತಿ ಹುಟ್ಟಲು ಪ್ರಾಯೋಗಿಕ ಅನುಭವ ನೀಡಬೇಕು. ಕೇವಲ ಅಂತರ್ಜಾಲ ವೀಕ್ಷಣೆ ಅಥವಾ ಪುಸ್ತಕದ ಜ್ಞಾನ ಪ್ರಯೋಜನಕ್ಕೆ ಬಾರದು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಬಿ. ಕೆ. ದೇವರಾಯ ಮಾತನಾಡಿ, ತಾನು ಕಳೆದ ಐದು ದಶಕಗಳಿಂದ ಸಂರಕ್ಷಿಸಿ ಬೆಳೆಸಿದ ವಿವಿಧ ತಳಿಯ ಭತ್ತ , ಹಲಸು, ಮಾವು, ಚಿಕ್ಕು ಬಗ್ಗೆ ವಿವರಿಸಿದರು. ತನ್ನ ಈ ಶ್ರಮ, ಸಾಧನೆ ಯುವ ಜನತೆಗೆ ಆದರ್ಶವಾಗಿ ಇನ್ನಷ್ಟು ಮಂದಿ ಸಾವಯವ ಕೃಷಿ ಕಡೆ ಒಲಿಯಲು, ಇಳಿಯಲು ಅನುಕೂಲವಾಗಲಿ ಎಂದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಮಾತನಾಡಿ, ನನ್ನ ಪೋಷಕರೂ ಕೃಷಿ ಅವಲಂಬಿತರಾಗಿದ್ದರು ಎಂದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯನಾರಾಯಣ ಬೇಲೀರಿ ಮಾತನಾಡಿ, 600ಕ್ಕೂ ಮಿಕ್ಕಿ ಸ್ಥಳೀಯ ಭತ್ತದ ತಳಿಗಳನ್ನು ಸಂರಕ್ಷಿಸಿಕೊಂಡು ಬರುವ ಬಗ್ಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ಜಿ. ಆರ್. ಪ್ರಸಾದ್ ಅವರು ಬಳಗದ ರೈತ ಉತ್ಪಾದಕ ಸಂಸ್ಥೆಯ ಬಗ್ಗೆ ಹಾಗೂ ಬಿಡುಗಡೆಗೊಂಡ ಸಾವಯವ ಉತ್ಪನ್ನ ಪರೀಕ್ಷೆ ಉಪಕರಣ ಬಗ್ಗೆ ವಿವರಿಸಿದರು. ಬಳಗದ ಕಾರ್ಯದರ್ಶಿ ರತ್ನಾಕರ ಕುಳಾಯಿ ಮುಂದಿನ ಯೋಜನೆಗಳ ಬಗ್ಗೆ ವಿವರ ನೀಡಿದರು. ಬಳಗದಿಂದ ಲೋಕಾರ್ಪಣೆಗೊಂಡ ಅಂತರ್ಜಾಲ ಬಗ್ಗೆ ಗಿರೀಶ್ ಐತಾಳ್ ಮಾಹಿತಿ ನೀಡಿದರು. ಬಳಗದ ಗೌರವ ಅಧ್ಯಕ್ಷ ಅಡ್ಡೂರು ಕೃಷ್ಣ ರಾವ್ ಸ್ವಾಗತಿಸಿದರು. ನಿರ್ದೇಶಕ ರಾಮಚಂದ್ರ ಭಟ್ ವಂದಿಸಿದರು. ಸ್ನೇಹ ನಿರೂಪಿಸಿದರು.