ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಾನೇ ಸ್ವತಃ ಬಾಗಲಕೋಟೆಗೆ ಬಂದು ನಿನ್ನ ಭಾಷೆಯಲ್ಲಿಯೇ ನಿನ್ನ ಸತ್ಯಾಂಶವನ್ನು ಬಿಚ್ಚಿಡುತ್ತೇನೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರು ಮಾಜಿ ಸಚಿವ ಮುರುಗೇಶ ನಿರಾಣಿಗೆ ಎಚ್ಚರಿಕೆ ರೂಪದ ಸಂದೇಶ ನೀಡಿದ್ದಾರೆ.ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ಮುರುಗೇಶ ನಿರಾಣಿ ಅವರು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದರು. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಎಂಬಿಪಾ ಅವರು, ಮಿ.ನಿರಾಣಿ ತಾನಾಗಿಯೇ ದನಕಾಯುವವ ಎಂದು ತಿಳಿದುಕೊಂಡು ನನ್ನ ಸಂಸ್ಥೆ ಮತ್ತು ನನ್ನ ಕುರಿತು ಏಕವಚನದಲ್ಲಿ ಕೆಟ್ಟ ಭಾಷೆ ಬಳಸಿದ್ದಾನೆ. ನಾನು ವಿಜಯಪುರ ಜಿಲ್ಲೆಯವ. ಇಂತಹ ಎಲ್ಲ ಭಾಷೆಗಳು ನನಗೂ ಬರುತ್ತವೆ. ಅನವಶ್ಯಕವಾಗಿ ನನ್ನ ತಂಟೆಗೆ ಬಂದವರಿಗೆ ಹಿಂದೆಯೂ ಬಿಟ್ಟಿಲ್ಲ. ಇಂದು ಮತ್ತು ಮುಂದೆಯೂ ಬಿಡುವುದಿಲ್ಲ. ಅದರ ಕಹಿ ಅನುಭವ ಈ ಹಿಂದೆ ನಿನಗೆ ಆಗಿದೆ ಎನ್ನುವುದನ್ನು ನೆನಪಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.
ಮಿ.ಮುರುಗೇಶ ನಿರಾಣಿ ಬಾಗಲಕೋಟೆಯಲ್ಲಿ ನೀನು ಮಾಡಿರುವ ಪತ್ರಿಕಾಗೋಷ್ಠಿಯನ್ನು ಗಮನಿಸಿದ್ದೇನೆ. ಸಿದ್ದಾರ್ಥ ಟ್ರಸ್ಟ್ಗೆ ಯಾವುದೇ ರಿಯಾಯಿತಿ ಇಲ್ಲದೆ ಸಿಎ ನಿವೇಶನ ನೀಡಿದ್ದರೂ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಅನವಶ್ಯಕವಾಗಿ ಎಳೆದು ತಂದು ಹಗರಣವಾಗಿದೆ ಎಂದು ಬಿಜೆಪಿಯವರು ಬಿಂಬಿಸುತ್ತಿರುವುದಕ್ಕೆ ಪ್ರತಿಯಾಗಿ ನಾನು ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ಅವಧಿಯಲ್ಲಿನ ಬಿಜೆಪಿ ನಾಯಕರು ಯಾರ್ಯಾರು ಎಷ್ಟೆಷ್ಟು ಲಾಭ ಪಡೆದಿದ್ದಾರೆ ಎಂಬುವುದು ತಿಳಿಸುವುದು ನನ್ನ ಉದ್ದೇಶವಾಗಿತ್ತು ಎಂದಿದ್ದಾರೆ.
ಈ ಸಂದರ್ಭದಲ್ಲಿ ಮಿ.ನಿರಾಣಿ ತನ್ನ ಶಿಕ್ಷಣ ಸಂಸ್ಥೆ ಮತ್ತು ಸಕ್ಕರೆ ಕಾರ್ಖಾನೆಗೆ ಪಡೆದಿರುವ ಲಾಭದ ಮಾಹಿತಿ ನೀಡಿದ್ದೇನೆ. ಆದರೆ, ದನಕಾಯುವವನು ಎಂಬ ಶಬ್ದವನ್ನು ನಾನು ಎಲ್ಲಿಯೂ ಬಳಸಿಲ್ಲ ಮತ್ತು ಏಕವಚನದಲ್ಲೂ ನಾನು ಮಾತನಾಡಿಲ್ಲ. ಅಷ್ಟಕ್ಕೂ, ದನಕಾಯುವುದು ಗೌರವದ ಸಂಕೇತ. ಕಾಯಕ ದನಕಾಯುವವರನ್ನು ನಾನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.