ಕೇಂದ್ರ ಚುನಾವಣಾ ಆಯೋಗದ ಅಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಸೆ.30ರಿಂದ ‘ಭಾರತ ಜೋಡೋ ಯಾತ್ರೆ 2.0’ಕ್ಕೆ ಚಾಲನೆ ನೀಡಲಿದ್ದು, 84 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 84 ದಿನಗಳ ಕಾಲ ರಾಜ್ಯ ಕಾಂಗ್ರೆಸ್‌ನಿಂದ ಪಾದಯಾತ್ರೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಹೇಳಿದ್ದಾರೆ.

ಬೆಂಗಳೂರು : ಕೇಂದ್ರ ಚುನಾವಣಾ ಆಯೋಗದ ಅಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಸೆ.30ರಿಂದ ‘ಭಾರತ ಜೋಡೋ ಯಾತ್ರೆ 2.0’ಕ್ಕೆ ಚಾಲನೆ ನೀಡಲಿದ್ದು, 84 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 84 ದಿನಗಳ ಕಾಲ ರಾಜ್ಯ ಕಾಂಗ್ರೆಸ್‌ನಿಂದ ಪಾದಯಾತ್ರೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಿಂದ ಸೆ.30ರಂದು ಯಾತ್ರೆ ಆರಂಭವಾಗಲಿದೆ. ಈ ವೇಳೆ ಸಚಿವರಾದ ಮಧುಬಂಗಾರಪ್ಪ, ರುದ್ರಪ್ಪ ಲಮಾಣಿ, ಜಮೀರ್ ಅಹ್ಮದ್ ಖಾನ್, ಬಿ.ಎಲ್. ಶಂಕರ್ ಸೇರಿದಂತೆ ಪ್ರಮುಖ ನಾಯಕರು, ಜಿಲ್ಲೆಯ ಧುರೀಣರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಅಕ್ಟೋಬರ್‌ 4-5 ರಿಂದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರ ಕ್ಷೇತ್ರವಾಗಿರುವ ಶಿಕಾರಿಪುರದಿಂದಲೇ ಜನಜಾಗೃತಿ

ಬಿಜೆಪಿ ರಾಜ್ಯಾಧ್ಯಕ್ಷರ ಕ್ಷೇತ್ರವಾಗಿರುವ ಶಿಕಾರಿಪುರದಿಂದಲೇ ಬಿಜೆಪಿಯ ನ್ಯೂನತೆ ತಿಳಿಸಲು ಹಾಗೂ ಜ್ಞಾನೇಶ್ ಕುಮಾರ್ ಅವರು ಸಂವಿಧಾನಿಕ ಸಂಸ್ಥೆಯಾಗಿರುವ ಚುನಾವಣಾ ಆಯೋಗಕ್ಕೆ ಮಾಡುತ್ತಿರುವ ಧಕ್ಕೆ ಬಗ್ಗೆ ಜನಜಾಗೃತಿ ಮೂಡಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು 2022ರ ಸೆ.7ರಂದು ಕನ್ಯಾಕುಮಾರಿಯಿಂದ ಆರಂಭಿಸಿದ್ದ ಭಾರತ ಜೋಡೋ ಪಾದಯಾತ್ರೆ ಭಾಗವಾಗಿ ಗುಂಡ್ಲುಪೇಟೆ ಮೂಲಕ 2022ರ ಸೆ.30ರಂದು ರಾಜ್ಯ ಪ್ರವೇಶಿಸಿದ್ದರು. ಅಕ್ಟೋಬರ್ 21ರವರೆಗೆ 11 ಜಿಲ್ಲೆಗಳಲ್ಲಿ 600 ಕಿ.ಮೀ. ಪಾದಯಾತ್ರೆ ಮಾಡಿದ್ದರು. ಈ ಯಾತ್ರೆಯ ನೆನಪಿನಲ್ಲಿ ಇದೇ ಸೆ.30ರಂದು ಭಾರತ ಜೋಡೋ ಯಾತ್ರೆ 2.0 ರಾಜ್ಯದಲ್ಲಿ ಹಮ್ಮಿಕೊಂಡಿದ್ದೇವೆ ಎಂದು ವಿವರಿಸಿದರು.

ರಾಹುಲ್ ಗಾಂಧಿ ಅವರು ಯಾತ್ರೆ ಮಾಡಿದ ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಸೋತಿರುವ 84 ಕ್ಷೇತ್ರಗಳಲ್ಲಿ ಈ ಯಾತ್ರೆ ಮಾಡುತ್ತೇವೆ. ಯಾತ್ರೆಯಲ್ಲಿ ಮಧ್ಯಾಹ್ನ 1ರಿಂದ ಸಂಜೆವರೆಗೆ ಸಾರ್ವಜನಿಕ ಸಭೆ ಮಾಡುತ್ತೇವೆ ಎಂದು ಹರಿಪ್ರಸಾದ್ ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ, ಪರಿಷತ್‌ ಸದಸ್ಯ ರಮೇಶ್ ಬಾಬು, ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

- 2022ರ ಸೆ.7ರಂದು ಕನ್ಯಾಕುಮಾರಿಯಲ್ಲಿ ಭಾರತ್‌ ಜೋಡೋ ಆರಂಭಿಸಿದ್ದ ರಾಹುಲ್‌ ಗಾಂಧಿ

- 2022ರ ಸೆ.30ರಂದು ರಾಜ್ಯಕ್ಕೆ ಪ್ರವೇಶ. ಇದೀಗ ಅದೇ ಸೆ.30ರಂದು ಭಾರತ್‌ ಜೋಡೋ 2.0

- ರಾಹುಲ್‌ ಯಾತ್ರೆ ಮಾಡಿದ ವಿಧಾನಸಭಾ ಕ್ಷೇತ್ರ ಬಿಟ್ಟು ಸೋತಿರುವ 84 ಕ್ಷೇತ್ರಗಳಲ್ಲಿ ಯಾತ್ರೆ

- ಕೇಂದ್ರ ಚುನಾವಣಾ ಆಯೋಗದ ಅಕ್ರಮಗಳ ಬಗ್ಗೆ ಭಾರತ್‌ ಜೋಡೋ ವೇಳೆ ಜಾಗೃತಿ: ಬಿಕೆ