ಕನ್ನಡಪ್ರಭ ವಾರ್ತೆ ಬೆಂಗಳೂರು

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನ ಅದ್ದೂರಿಯಾಗಿ ನಡೆಯಲಿದ್ದು ಆ.6ರಿಂದ ಆರಂಭವಾಗಲಿದೆ. ಈ ಸಂಬಂಧ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ಆರ್. ಗಿರೀಶ್ ಅವರು ಮಾಹಿತಿ ನೀಡಿದರು. ಈ ಪ್ರದರ್ಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದ್ದು, ಭದ್ರತೆಗಾಗಿ ಫಲಪುಷ್ಪ ಪ್ರದರ್ಶನ ನಡೆಯುವ ಸ್ಥಳದ ಸುತ್ತಮುತ್ತ 136 ಕ್ಯಾಮರಾ ಅಳವಡಿಸಲಾಗಿದೆ. ಎಲ್ಲಾ ವಾಹನಗಳಿಗೂ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಆ.17ರವರೆಗೆ ನಡೆಯಲಿರುವ ಪ್ರದರ್ಶನದಲ್ಲಿ ಸ್ವದೇಶಿ ನೆಲದಲ್ಲಿಯೇ ಬೆಳೆದ ಹೂಗಳನ್ನು ಬಳಸಿ ಕರ್ನಾಟಕ ರಾಜ್ಯವನ್ನಾಳಿದ ತಲಕಾಡಿನ ಗಂಗರ ಆಡಳಿತ, ಕಲೆ, ವಾಸ್ತುಶಿಲ್ಪದ ವೈಭವವನ್ನು ಹೂವುಗಳಿಂದ ಮೂಡಿಸಲಾಗಿದೆ. ಪ್ರಮುಖವಾಗಿ ಈ ಬಾರಿ ಯುವ ಜನರ ಆಕರ್ಷಣೆಗಾಗಿ ಸೆಲ್ಫಿ ಪಾಯಿಂಟ್ ಹಾಗೂ ಜಲಪಾತ ನಿರ್ಮಿಸಲಾಗಿದೆ ಎಂದರು. 12 ದಿನಗಳವರೆಗೆ ನಡೆಯಲಿರುವ ಪ್ರದರ್ಶನಕ್ಕೆ ₹2.75 ಕೋಟಿ ರು. ಮೀಸಲಿರಿಸಲಾಗಿದೆ. ಈ ಬಾರಿಯೂ ಸಸ್ಯಕಾಶಿ ಕಲಾ ಲೋಕವಾಗಿ ಮರುಕಳಿಸಲು ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿವೆ. ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಕರುನಾಡಿನ ಹೆಮ್ಮೆಯ ಗಂಗ ಸಾಮ್ರಾಜ್ಯದ ಗತವೈಭವ ಹೂಗಳ ಮೂಲಕ ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದು ಎಂದು ವಿವರಿಸಿದರು.

ತೋಟಗಾರಿಕೆ ಇಲಾಖೆ ಆಯೋಜಿಸುವ 220ನೇ ಫಲಪುಷ್ಪ ಪ್ರದರ್ಶನವಾಗಿದ್ದು, ತಲಕಾಡಿನ ಐತಿಹಾಸಿಕ ದೇವಾಲಯಗಳ ವಾಸ್ತುಶಿಲ್ಪದ ಮಾದರಿಗಳು, ಕನ್ನಡ ಸಾಹಿತ್ಯ, ಶಿಕ್ಷಣ, ನೀರಾವರಿ ಹಾಗೂ ಶಿಲ್ಪಕಲೆಗೆ ಗಂಗ ರಾಜರು ನೀಡಿದ ಅಪಾರ ಕೊಡುಗೆಯನ್ನು ಹೂಗಳ ಮೂಲಕ ಹೊಸ ತಲೆಮಾರಿಗೆ ಪರಿಚಯಿಸುವ ವಿನೂತನ ಪ್ರಯತ್ನವನ್ನು ಇಲಾಖೆ ಮಾಡಿದೆ ಎಂದು ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಜಗದೀಶ್ ವಿವರಿಸಿದರು.