ವೀರಶೈವ ಪೀಠಾಚಾರ್ಯರು, ಶಿವಾಚಾರ್ಯರ ಶೃಂಗಕ್ಕೆ ಬನ್ನಿ

| Published : Jul 20 2025, 01:15 AM IST

ವೀರಶೈವ ಪೀಠಾಚಾರ್ಯರು, ಶಿವಾಚಾರ್ಯರ ಶೃಂಗಕ್ಕೆ ಬನ್ನಿ
Share this Article
  • FB
  • TW
  • Linkdin
  • Email

ಸಾರಾಂಶ

ದಶಕಗಳ ನಂತರ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯ ಶೃಂಗ ಸಮ್ಮೇಳನ ಜು.21 ಮತ್ತು 22ರಂದು ನಡೆಯಲಿದೆ. ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ ಹಾಗೂ ಕಾಶಿ ಪೀಠಗಳ ಜಗದ್ಗುರು ಪಾಲ್ಗೊಳ್ಳುವರು ಎಂದು ವೀರಶೈವ ಲಿಂಗಾಯತ ಸಮಾಜದ ನಾಯಕ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದ್ದಾರೆ.

- ವೀರಶೈವ ಲಿಂಗಾಯತ ಪರ ನಿರ್ಣಯ: ಸಚಿವ ಎಸ್‌ಎಸ್‌ಎಂ । ನಾಳೆ ಪಂಚ ಪೀಠಾಧೀಶರು, ಶಿವಾಚಾರ್ಯರ ಪಾದಯಾತ್ರೆ

- ಸಮಾಜದ ಅಖಂಡತೆ ಪ್ರದರ್ಶನಕ್ಕೆ ವೇದಿಕೆ ಸಜ್ಜು । ಡಾ.ಶಿವಶಂಕರಪ್ಪ ಮುಂದಾಳತ್ವ, ಎಸ್‌ಎಸ್ಎಂ ಉಸ್ತುವಾರಿಯಲ್ಲಿ ಸರ್ವಸಿದ್ಧತೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಶಕಗಳ ನಂತರ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯ ಶೃಂಗ ಸಮ್ಮೇಳನ ಜು.21 ಮತ್ತು 22ರಂದು ನಡೆಯಲಿದೆ. ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ ಹಾಗೂ ಕಾಶಿ ಪೀಠಗಳ ಜಗದ್ಗುರು ಪಾಲ್ಗೊಳ್ಳುವರು ಎಂದು ವೀರಶೈವ ಲಿಂಗಾಯತ ಸಮಾಜದ ನಾಯಕ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.

ನಗರದ ಗೃಹ ಕಚೇರಿ ಶಿವ ಪಾರ್ವತಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಾವೀಮ ರಾಷ್ಟ್ರೀಯ ಅಧ್ಯಕ್ಷ, ಸಮಾಜದ ಹಿರಿಯ ನಾಯಕರಾದ ಡಾ.ಶಾಮನೂರು ಶಿವಶಂಕರಪ್ಪ ಅವರ ಒತ್ತಾಸೆಯಂತೆ, ಇಡೀ ಸಮಾಜ ಬಾಂಧವರ ನಿರೀಕ್ಷೆಯಂತೆ ಪಂಚ ಪೀಠಾಧೀಶರು ದಾವಣಗೆರೆಯಲ್ಲಿ ಒಂದಾಗಲ್ಲಿದ್ದಾರೆ. 2 ದಿನಗಳ ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಭಾಗವಹಿಸುವರು ಎಂದರು.

ಜು.21ರಂದು ಬೆಳಗ್ಗೆ 11 ಗಂಟೆಗೆ ಪಂಚ ಪೀಠಾಧೀಶರ ಸಾನ್ನಿಧ್ಯದಲ್ಲಿ ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಸಮ್ಮೇಳನ ಉದ್ಘಾಟಿಸಿ ಮಾತನಾಡುವರು. ಎಡೆಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಎಮ್ಮಿಗನೂರು ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೃದಯದ ಹಂಬಲದ ನುಡಿಗಳನ್ನಾಡುವರು ಎಂದು ಹೇಳಿದರು.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ, ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕರಾದ ಬಿ.ವೈ. ವಿಜಯೇಂದ್ರ, ವಿಜಯಾನಂದ ಕಾಶೆಪ್ಪನವರ್ ಭಾಗವಹಿಸುವರು. ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಸಂಕಲ್ಪ ನುಡಿಗಳನ್ನಾಡುವರು. ಅಥಣಿ ವೀರಣ್ಣ, ಎಂ.ಪಿ. ರೇಣುಕಾಚಾರ್ಯ, ಡಾ. ಎ.ಎಚ್. ಶಿವಯೋಗಿಸ್ವಾಮಿ, ಎಸ್.ಜಿ.ಉಳುವಯ್ಯ, ಬಿ.ಎಂ. ವಾಗೀಶ ಸ್ವಾಮಿ, ಆರ್.ಟಿ.ಪ್ರಶಾಂತ ಭಾಗವಹಿಸುವರು. ಸಂಜೆ 7 ಗಂಟೆಗೆ ಸಂಗೀತ ಸೌರಭ ಗದಗಿನ ಪಂಡಿತ ಡಾ.ರಾಜಗುರು ಗುರುಸ್ವಾಮಿ ಕಲಿಕೇರಿ ಹಾಗೂ ಬೆಂಗಳೂರಿನ ವೇ.ಶಿವಶಂಕರ ಶಾಸ್ತ್ರಿಗಳಿಂದ ಸಂಗೀತ ಸೌರಭ ನಡೆಯಲಿದೆ ಎಂದರು.

ಜು.22ರಂದು ಬೆಳಗ್ಗೆ 11 ಗಂಟೆಗೆ ಪಂಚ ಪೀಠಾಧೀಶರ ಸಾನ್ನಿಧ್ಯದಲ್ಲಿ ಮುಕ್ತಿ ಮಂದಿರ ಕ್ಷೇತ್ರದ ಶ್ರೀ ವಿಮಲ ರೇಣುಕ ವೀರ ಮುಕ್ತಿಮುನಿ ಸ್ವಾಮೀಜಿ ನೇತೃತ್ವದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಸಮ್ಮೇಳನ ಉದ್ಘಾಟಿಸುವರು. ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಪ್ರಾಸ್ತಾವಿಕ ನುಡಿಗಳನ್ನಾಡುವರು. ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಂಸದರಾದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿ.ವೈ. ರಾಘವೇಂದ್ರ, ಡಾ.ವಿಜಯ ಸಂಕೇಶ್ವರ, ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಸಿ.ಸಿ.ಪಾಟೀಲ, ಶಾಸಕ ಬಿ.ಪಿ.ಹರೀಶ, ಎಚ್.ಎಸ್. ಶಿವಶಂಕರ, ಮಹಿಮಾ ಜೆ.ಪಟೇಲ್, ಸಂಶೋಧಕ ಡಾ.ಎ.ಸಿ.ವಾಲಿ, ಅಣಬೇರು ರಾಜಣ್ಣ, ದೇವರಮನೆ ಶಿವಕುಮಾರ, ಕೆ.ಎಸ್.ನವೀನ, ಗಂಗಾಧರ ಗುರುಮಠ, ವೀಣಾ ಕಾಶೆಪ್ಪನವರ, ಹರೀಶ ಕೂಡ್ಲಿಗೆರೆ, ಅಕ್ಕಿ ರಾಜಶೇಖರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮಂಗಳವಾರ ಸಂಜೆ 4 ಗಂಟೆಗೆ ಹಳೇ ಪಿ.ಬಿ. ರಸ್ತೆಯ ಕೋರ್ಟ್ ವೃತ್ತ ಬಳಿಯಿಂದ ಶ್ರೀ ಅಭಿನವ ರೇಣುಕಾ ಮಂದಿರದವರೆಗೆ ಸಂಸ್ಕೃತಿ ಸಂವರ್ಧನೆಗಾಗಿ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಪಾದಯಾತ್ರೆ ನಡೆಯಲಿದೆ. ಎರಡು ದಿನಗಳ ಧರ್ಮ ಸಮ್ಮೇಳನದಲ್ಲಿ ನಾಡಿನ ವಿವಿಧ ಭಾಗಗಳ ಭಕ್ತರು, ಧರ್ಮಾಭಿಮಾನಿಗಳು ಪಾಲ್ಗೊಳ್ಳಬೇಕು. ಶಿವಾಚಾರ್ಯರಿಗೆ ವಸತಿ, ಪ್ರಸಾದ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಎಡೆಯೂರು ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮೇ 2ರಂದು ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ತಮ್ಮ ನಿವಾಸದಲ್ಲಿ ರಂಭಾಪುರಿ ಜಗದ್ಗುರು ಅವರಿಗೆ ಪಂಚ ಪೀಠಾಧೀಶರು, ಗುರು ವಿರಕ್ತರು ಒಂದಾಗಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರು. ಅದಕ್ಕೆ ಸ್ಪಂದಿಸಿ, ಮೇ 7ರಂದು ಮುಕ್ತಿ ಮಂದಿರದಲ್ಲಿ ನಾಲ್ಕೂ ಪೀಠಾಧೀಶರು ಸಭೆ ಮಾಡಿದ್ದರ ಫಲವೇ ಜು.21ರಿಂದ ಎರಡು ದಿನಗಳ ಶೃಂಗ ಸಮ್ಮೇಳನವಾಗಿದೆ. ಇದೀಗ ಪಂಚ ಪೀಠಾಧೀಶರು ತಪ್ಪದೇ ಎರಡೂ ದಿನಗಳ ಸಮಾವೇಶದಲ್ಲಿ ಪಾಲ್ಗೊಳ್ಳುವುದು ಇಂದಷ್ಟೇ ಸ್ಪಷ್ಟವಾಗಿದೆ ಎಂದರು.

ಸಮ್ಮೇಳನದಲ್ಲಿ ಪಂಚಪೀಠಗಳು, ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಕೆಲವೊಂದು ನಿರ್ಣಯ ಅಂಗೀಕರಿಸಲಾಗುವುದು. ಏಕಕಾಲಕ್ಕೆಮಹಾಚಾರ್ಯರು, ಶಿವಾಚಾರ್ಯರು, ಅಖಿಲ ಭಾರತ ವೀರಶೈವ ಮಹಾಸಭಾ ಸೇರಿ ನಿರ್ಣಯ ಕೈಗೊಳ್ಳಲಿವೆ. ಪಂಚ ಪೀಠಾಧೀಶರು, ಶಿವಾಚಾರ್ಯರನ್ನು ಒಗ್ಗೂಡಿಸುವ ಕೆಲಸ ದಾವಣಗೆರೆ ಭಕ್ತರಿಂದ ಆಗುತ್ತಿದೆ. ಹಿಂದಿನಿಂದಲೂ ಶಾಮನೂರು ಶಿವಶಂಕರಪ್ಪ ಇದನ್ನು ಹೇಳುತ್ತಾ ಬಂದಿದ್ದು, ಇದೀಗ ಎಸ್‌.ಎಸ್‌. ಮಲ್ಲಿಕಾರ್ಜುನ ನೇತೃತ್ವದಲ್ಲಿ ಸಾಕಾರಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಮುಕ್ತಿ ಮಂದಿರ ಕ್ಷೇತ್ರದ ಶ್ರೀ ವಿಮಲ ರೇಣುಕಾ ವೀರಮುಕ್ತಿ ಮುನಿ ಶಿವಾಚಾರ್ಯ ಸ್ವಾಮೀಜಿ, ಮುಖಂಡರಾದ ಬಿ.ಎಂ.ವಾಗೀಶ ಸ್ವಾಮಿ, ಆರ್.ಟಿ.ಪ್ರಶಾಂತ, ಉಳುವಯ್ಯ, ನಾಗಭೂಷಣ, ಕಡೇಕೊಪ್ಪ, ಅಕ್ಕಿ ರಾಜು, ಎನ್.ಎಂ.ಹರೀಶ, ಎಚ್.ಎಂ.ರುದ್ರ ಮುನಿಸ್ವಾಮಿ, ತ್ಯಾವಣಿಗೆ ವೀರಭದ್ರಸ್ವಾಮಿ, ಕುರುಡಿ ಗಿರೀಶ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಶಂಭು ಉರೇಕೊಂಡಿ, ಮಾಗಾನಹಳ್ಳಿ ಬಿ.ಕೆ.ಪರಶುರಾಮ, ಮಂಜುನಾಥ ತಕ್ಕಡಿ ಇತರರು ಇದ್ದರು.

- - -

(ಬಾಕ್ಸ್‌)

* ಪಂಚಪೀಠಾಧೀಶರೂ ಭಾಗಿ ಪಂಚ ಪೀಠಾಧೀಶರನ್ನು ಒಗ್ಗೂಡಿಸುವುದು ಮೊದಲ ಹಂತ. 2ನೇ ಹಂತದಲ್ಲಿ ಗುರು-ವಿರಕ್ತರನ್ನು ಒಂದೇ ವೇದಿಕೆಗೆ ತರುವ ಸಂಕಲ್ಪ ಶಾಮನೂರು ಶಿವಶಂಕರಪ್ಪ ಹಾಗೂ ಅ.ಭಾ.ವೀ. ಮಹಾಸಭಾದಾಗಿದೆ. ಇದೀಗ ಶಾಮನೂರು ಪ್ರಯತ್ನಕ್ಕೆ ಪುತ್ರ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸಹ ಕೈಜೋಡಿಸಿದ್ದಾರೆ. ಎರಡು ದಿನದ ಸಮ್ಮೇಳನದ ನೇತೃತ್ವ ವಹಿಸಿದ್ದಾರೆ. ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ, ಕಾಶಿ ಪೀಠಾಧೀಶರು ಭಾಗವಹಿಸುವರು. ಇಂದು ಮಧ್ಯಾಹ್ನವಷ್ಟೇ ಕೇದಾರ ಜಗದ್ದುರು ಸಹ ಪಾಲ್ಗೊಳ್ಳುವ ಸಂದೇಶ ನೀಡಿದ್ದು, ಸ್ವತಃ ಎಸ್‌.ಎಸ್‌. ಮಲ್ಲಿಕಾರ್ಜುನ ಸಹ ಮಾತನಾಡಿದ್ದಾರೆ.

- ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಎಡೆಯೂರು ಕ್ಷೇತ್ರ

- - -

* ಮನೆ, ಮನಸ್ಸಿಗೆ ಮುಟ್ಟಿಸುವ ಕಾರ್ಯಕ್ರಮ ಸಮ್ಮೇಳನಕ್ಕಾಗಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ನೇತೃತ್ವದಲ್ಲಿ ಎಲ್ಲ ಜಾತಿ, ಧರ್ಮೀಯರನ್ನು ಒಳಗೊಂಡ 8-10 ಸಮಿತಿ ರಚಿಸಲಾಗಿದೆ. ದಾವಣಗೆರೆಯಲ್ಲಿ ಮನೆ ಮನಸ್ಸಿಗೆ ಮುಟ್ಟಿಸುವ ಕೆಲಸ ಶೃಂಗ ಸಮ್ಮೇಳನದ ಮೂಲಕ ಆಗಲಿದೆ. ಶಾಮನೂರು ಶಿವಶಂಕರಪ್ಪ ಅವರ ದೊಡ್ಡ ಸಂಕಲ್ಪದಿಂದ ಇಂತಹದ್ದೊಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಇಲ್ಲಿ ಕ್ಷಣಗಣನೆ ಶುರುವಾಗಿದೆ. ಶಾಮನೂರು ಇಚ್ಛಾಶಕ್ತಿಯಿಂದ ಪಂಚ ಪೀಠಾಧೀಶರು, ಶಿವಾಚಾರ್ಯರು ವೀರಶೈವ ಲಿಂಗಾಯತ ಸಮಾಜದ ಅಖಂಡತೆ ತೋರಿಸುವ ಕಾರ್ಯಕ್ರಮ ಇಲ್ಲಿ ನಡೆಯುತ್ತಿದೆ. ಸಮಾಜದ ಭವಿಷ್ಯದ ನಾಯಕ ಎಸ್‌.ಎಸ್‌. ಮಲ್ಲಿಕಾರ್ಜುನ ಇಡೀ ಸಮ್ಮೇಳನದ ಉಸ್ತುವಾರಿ ವಹಿಸಿದ್ದಾರೆ.

- ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಮಠ

- - -

-19ಕೆಡಿವಿಜಿ3, 4.ಜೆಪಿಜಿ:

ದಾವಣಗೆರೆಯಲ್ಲಿ ಶನಿವಾರ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಮುಕ್ತಿ ಮಂದಿರ ಕ್ಷೇತ್ರದ ಶ್ರೀ ವಿಮಲ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.