ಆದಿಚುಂಚನಗಿರಿ ಮಠಕ್ಕೆ ಬಂದರೆ ತವರು ಮನೆಗೆ ಬಂದಷ್ಟೇ ಸಂತೋಷ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

| Published : Jan 18 2024, 02:03 AM IST

ಆದಿಚುಂಚನಗಿರಿ ಮಠಕ್ಕೆ ಬಂದರೆ ತವರು ಮನೆಗೆ ಬಂದಷ್ಟೇ ಸಂತೋಷ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅಪಾರ. ಒಬ್ಬ ಗೃಹಿಣಿ ಮತ್ತು ಒಬ್ಬ ರೈತ ತಾವು ಮಾಡುವ ಕೆಲಸಗಳನ್ನು ಅತ್ಯಂತ ನಿಷ್ಠೆ, ಪರಿಶುದ್ಧ, ಪ್ರಾಮಾಣಿಕತೆಯಿಂದ ಮಾಡಿದರೆ 2047ಕ್ಕೆ ವಿಶ್ವದಲ್ಲಿಯೇ ಭಾರತ ದೇಶ ನಂಬರ್ ಒನ್ ರಾಷ್ಟ್ರವಾಗಿ ನಿಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಾತೃ ಪ್ರೀತಿ, ವಾತ್ಸಲ್ಯ ತೋರುವ ಆದಿಚುಂಚನಗಿರಿ ಮಠಕ್ಕೆ ಬಂದರೆ ತವರು ಮನೆಗೆ ಬಂದಷ್ಟೇ ಸಂತೋಷವಾಗುತ್ತದೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನಮಠದಲ್ಲಿ ನಡೆಯುತ್ತಿರುವ ಭೈರವೈಕ್ಯ ಬಾಲಗಂಗಾಧರನಾಥಶ್ರೀಗಳ 79ನೇ ಜಯಂತ್ಯುತ್ಸವ ಮತ್ತು 11ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಮಾತೃ ಸಂಗಮವನ್ನು ಉದ್ಘಾಟಿಸಿ ಮಾತನಾಡಿ, ಶ್ರೀಮಠ ಯಾವುದೇ ತಾರತಮ್ಯ ಮಾಡದೇ ಮಾತೃ ಪ್ರೀತಿಯನ್ನು ಎಲ್ಲ ಹೆಣ್ಣು ಮಕ್ಕಳಿಗೂ ತೋರಿಸುತ್ತಿದೆ ಎಂದರು.

ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅಪಾರ. ಒಬ್ಬ ಗೃಹಿಣಿ ಮತ್ತು ಒಬ್ಬ ರೈತ ತಾವು ಮಾಡುವ ಕೆಲಸಗಳನ್ನು ಅತ್ಯಂತ ನಿಷ್ಠೆ, ಪರಿಶುದ್ಧ, ಪ್ರಾಮಾಣಿಕತೆಯಿಂದ ಮಾಡಿದರೆ 2047ಕ್ಕೆ ವಿಶ್ವದಲ್ಲಿಯೇ ಭಾರತ ದೇಶ ನಂಬರ್ ಒನ್ ರಾಷ್ಟ್ರವಾಗಿ ನಿಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ 140 ಕೋಟಿ ಜನಸಂಖ್ಯೆಗೂ ಹೆಚ್ಚಾಗುವಷ್ಟು ಹಣ್ಣು, ತರಕಾರಿ, ಧಾನ್ಯ, ಹಾಲು ಇನ್ನಿತರೆ ಪದಾರ್ಥಗಳು ನಮ್ಮಲ್ಲಿ ಉತ್ಪಾದನೆಯಾಗುತ್ತಿವೆ. ನಮ್ಮ ದೇಶದ ತೆಂಗು ಉತ್ಪನ್ನಗಳಿಗೆ ಅಮೆರಿಕಾ, ಯುರೋಪ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಹೆಚ್ಚು ಬೇಡಿಕೆ ಇದೆ. ಇದಕ್ಕೆ ಪೂರಕವಾಗಿ ಮಹಿಳೆಯರಿಗೆ ವಿಶೇಷ ಸಾಲ ಸೌಲಭ್ಯ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಮತ್ತು ಆಹಾರ ಸಂಸ್ಕರಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ಸಿದ್ದವಿದೆ ಎಂದರು.

ದೇಶದ ಯಾವುದೇ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾಗಿದ್ದರೂ ಸಹ ಅವರ ಮೂಲ ರೈತಾಪಿ ಕೆಲಸದಲ್ಲಿ ಮತ್ತು ಹಳ್ಳಿಯಲ್ಲಿರುತ್ತದೆ. ಉದ್ಯೋಗ, ಒಕ್ಕಲುತನ ಎಂದ ತಕ್ಷಣ ನಮ್ಮ ಕರುಳಬಳ್ಳಿ ಜೋಡಣೆಯಾಗುವುದೂ ಕೂಡ ರೈತಾಪಿ ಕೆಲಸ ಮತ್ತು ಹಳ್ಳಿಯಿಂದ ಎಂದರು.

ದೇಶಕ್ಕೆ ಅನ್ನ ನೀಡುವ ಮತ್ತು ನಾಡನ್ನು ಸಮೃದ್ಧಿ ಮಾಡುವರು ರೈತರು. ಅದಕ್ಕಾಗಿಯೇ ಈ ಮಠವನ್ನು ಕಟ್ಟಿಬೆಳೆಸುವ ಸಂದರ್ಭದಲ್ಲಿ ರೈತರೇ ಆಧಾರ ಸ್ಥಂಭಗಳೆಂದು ಭಾವಿಸಿದ್ದ ಭೈರವೈಕ್ಯಶ್ರೀಗಳು ಶ್ರೀಮಠವನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ ಎಂದರು.

ಸಾನಿಧ್ಯ ವಹಿಸಿದ್ದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಮಾತನಾಡಿ, ಎಲ್ಲ ರೀತಿಯ ಸಮಸ್ಯೆಗಳಿಗೆ ನೆರೆಹೊರೆವರಿಂದ ಹುಟ್ಟುವ ಇತಿಮಿತಿಯಿಲ್ಲದ ಆಸೆ, ದುರಾಸೆಯೇ ಕಾರಣ. ಹಾಗಾಗಿ ಎಲ್ಲ ಹೆಣ್ಣು ಮಕ್ಕಳು ಆಸೆಗಳನ್ನು ಇತಿಮಿತಿಯಲ್ಲಿಟ್ಟುಕೊಂಡು ಸುಂದರ ಬದುಕು ನಡೆಸಬೇಕು ಎಂದರು.

ಹೆಣ್ಣು ಮಕ್ಕಳು ಎಲ್ಲಿಯೇ ಹೋದರೂ ಸಹ ತಮ್ಮ ತನವನ್ನು ಉಳಿಸಿಕೊಳ್ಳಬೇಕು. ಸಂಸ್ಕೃತಿ ಸಂಸ್ಕಾರ ಕಾಪಾಡಿಕೊಂಡಲ್ಲಿ ಎಷ್ಟು ಎತ್ತರಕ್ಕಾದರೂ ಬೆಳೆಯಬಹುದು. ಇದು ಭೈರವೈಕ್ಯ ಶ್ರೀಗಳ ಕನಸೂ ಕೂಡ ಆಗಿತ್ತು ಎಂದರು.

ನಮ್ಮ ಸಂಸ್ಕತಿ ಸಂಪ್ರದಾಯವನ್ನು ಬಿಟ್ಟು ಆಧುನಿಕ ಭಾಷೆಯನ್ನು ಕಲಿತು ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಚರ್ಚಿಸಲು ಹೋಗುವ ಅಗತ್ಯವಿಲ್ಲ. ನಮ್ಮ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿಯೂ ಪ್ರವಚನ ನೀಡಬಹುದು ಎಂದರು.

ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಪ್ರಾಸ್ತಾವಿಕ ನುಡಿ ನುಡಿದರು. ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿದರು. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಚುಂಚಾದ್ರಿ ಮಹಿಳಾ ವೇದಿಕೆಯ ಪದಾಧಿಕಾರಿಗಳು, ಸಹಸ್ರಾರು ಸಂಖ್ಯೆಯ ಸದಸ್ಯರು ಮತ್ತು ಭಕ್ತರು ಇದ್ದರು.