ಸಾರಾಂಶ
ಮರುಳಶಂಕರ ದೇವರ ಜಯಂತಿ ಕಾರ್ಯಕ್ರಮದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
12ನೇ ಶತಮಾನದ ಅನುಭವ ಮಂಟಪ ಈ ದೇಶದ ನೆಲದಲ್ಲಿ ಸ್ಥಾಪನೆಯಾಗದೇ ಹೋಗಿದ್ದರೆ ಬಹುಶಃ ಶೋಷಿತ ಮತ್ತು ನಿಮ್ನ ವರ್ಗದವರಿಗೆ ನೆಲೆ ಕಾಣಸಿಗುತ್ತಿರಲಿಲ್ಲ ಎಂದು ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಆವರಣದಲ್ಲಿ ಏರ್ಪಡಿಸಿದ್ದ ಮರುಳಶಂಕರ ದೇವರ ಜಯಂತಿ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದರು.
ಬಸವಣ್ಣನವರ ನೇತೃತ್ವದಲ್ಲಿ ಸಮಾನತೆಯ ತತ್ವಾ ಆದರ್ಶಗಳು ನಿಜಾಚರಣೆಗೆ ಬಂದ ಹಿನ್ನೆಲೆಯಲ್ಲಿ ದೂರದ ಅಪಘಾನಿಸ್ತಾನದಿಂದ ಮರುಳಶಂಕರ ದೇವರಾದಿಯಾಗಿ ಅನೇಕ ಶರಣರು ಕಲ್ಯಾಣಕ್ಕೆ ಬರುವಂತಾಯಿತು. ಅದರ ಪುನಾರವರ್ತನೆ ಎಂಬಂತೆಚಿತ್ರದುರ್ಗದ ಬೃಹನ್ಮಠ ತನ್ನ ಶೂನ್ಯಪೀಠ ಪರಂಪರೆಯನ್ನು ಯಥೋಚಿತವಾಗಿ ಸಮ ಸಮಾನತೆಯ ತತ್ವದಡಿ ಸಾಗಿ ಬಂದ ಕಾರಣ ಇದೀಗ ಅನುಭವ ಮಂಟಪದ ಬಸವಾದಿ ಅಲ್ಲಮರ ಆಶಯದಂತೆ ಶೋಷಿತ ಸಮುದಾಯಗಳ ಶರಣ ಶರಣೆಯರ ಜಯಂತಿ ಆಚರಣೆಯ ಮೂಲಕ ಅವರನ್ನು ಅವರ ಕೊಡುಗೆಯನ್ನು ಸ್ಮರಿಸುವ ಕೆಲಸ ಮುರುಘಾಮಠದಿಂದ ನಡೆದಿದೆ ಎಂದರು.
ಜಯಂತಿ ಮಹೋತ್ಸವದ ಸಾನ್ನಿಧ್ಯ ವಹಿಸಿದ್ದ ಮುರುಘರಾಜೇಂದ್ರ ಬೃಹನ್ಮಠ ಮತ್ತು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಲಿಂಗವಂತ ಸಮಾಜ ಎಲ್ಲರನ್ನು ಎಲ್ಲವನ್ನು ಹೊಂದಿರುವಂತಹ ಸಮಾಜ. ಸಮ ಸಮಾಜದ ಕಲ್ಪನೆ ಮತ್ತು ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಹೋರಾಡಿದ ಸಮಾಜವಾಗಿದೆ. ಈ ಸಮಾಜ ನಿಜವಾಗಲೂ ಗ್ಲೋಬಲ್ ಆಗಬೇಕಿತ್ತು. ದುರಾದೃಷ್ಟ ಅದು ಲೋಕಲ್ ಆಗಿದೆ. ಇಂದು ಯಾವುದು ಲೋಕಲ್ ಆಗಬೇಕಿತ್ತೋ ಅದು ಗ್ಲೋಬಲ್ ಆಗಿದೆ ಎಂದರು.ಬಸವಣ್ಣನವರ ಅನುಭವ ಮಂಟಪದ ಕೀರ್ತಿವಾರ್ತೆಯನ್ನು ಕೇಳಿ ಅಗಣಿತ ಸಮೂಹವೇ ಧಾವಿಸುತ್ತದೆ. ಅದರಲ್ಲಿ ಮರುಳಶಂಕರರು ಒಬ್ಬರು. ಇವರು ಗುಪ್ತವಾಗಿದ್ದುಕೊಂಡೇ ಅಲ್ಲಿ ಕೆಳಹಂತದ ಕಾಯಕ ಮಾಡುತ್ತ ಬಸವಣ್ಣನವರಿಗೆ ಭೇಟಿಯಾಗದೇ ಎಷ್ಟೋ ವರ್ಷಗಳ ಕಾಲ ಸೇವೆಯಲ್ಲಿ ನಿರತರಾಗಿದ್ದರು. ದೇಹವನ್ನು ವಿನಯದಿಂದ ಭಾಗಿಸಬೇಕು. ಅಹಂನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವುದಾದರೆ ಮರಳಶಂಕರ ದೇವರ ಗುಪ್ತಭಕ್ತಿಯನ್ನು ಅನುಸರಿಸಿದರೆ ನಮ್ಮಲ್ಲಿರುವ ಅಹಂ ಕಡಿಮೆಯಾಗುತ್ತದೆ. ಈಗೀಗ ಸಣ್ಣ ಕೆಲಸ ಮಾಡಿ ದೊಡ್ಡದಾದ ನಿರೀಕ್ಷೆ ಇಟ್ಟುಕೊಳ್ಳುವ ಪದ್ಧತಿ ಇದೆ. ಬೆಳೆಯಬೇಕಾದವರು ಶೂನ್ಯದಿಂದ ಬೆಳೆಯಬೇಕು. ಸಮಾಜದಲ್ಲಿ ನಾನು ಏನೂ ಅಲ್ಲ ನನ್ನ ಕೆಲಸ ದೊಡ್ಡದಲ್ಲ ಅನ್ನುವವರು ಹೀರೋ ಆಗುತ್ತಾರೆ. ಅಂತಹ ಪ್ರಯತ್ನದತ್ತ ನಾವು ಸಾಗಬೇಕಿದೆ ಎಂದರು.
ಈ ವೇಳೆ ಸಾದರಹಳ್ಳಿಯ ಸಿದ್ಧಲಿಂಗ ಸ್ವಾಮಿಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವರಾಜ ಕಟ್ಟಿ, ನಿವೃತ್ತ ಪ್ರಾಚಾರ್ಯ ಟಿ.ಪಿ.ಜ್ಞಾನಮೂರ್ತಿ, ಜಿಲ್ಲಾ ತರಬೇತಿ ಕೇಂದ್ರದ ನಿವೃತ್ತ ಪ್ರಾಚಾರ್ಯ ಸಿ.ಮಲ್ಲಿಕಾರ್ಜುನಪ್ಪ, ಪಾಲಿಟೆಕ್ನಿಕ್‌ನ ಸಿಬ್ಬಂದಿಗಳಾದ ಪ್ರೊ.ಪಿ.ಎ.ರಘು, ಎಸ್.ಮೋಹನ್‌ಕುಮಾರ್, ಗಂಗಾಧರ್, ಪ್ರತಿಮಾ ಜೆ.ಸುಧಾ, ಕೆ.ಸುರೇಶ್, ಡಾ.ಆನಂದ್, ಡಾ.ನವೀನ್ ಮಸ್ಕಲ್ ಸೇರಿ ಅನೇಕರು ಉಪಸ್ಥಿತರಿದ್ದರು.