ಸಾರಾಂಶ
ಅಳ್ನಾವರ:
ಕನ್ನಡ ನಾಡಿನ ಏಕೀಕರಣದ ರೂವಾರಿಗಳನ್ನು ಸ್ಮರಿಸಿಕೊಳ್ಳುವ ಮೂಲಕ ನಮ್ಮಲ್ಲಿ ಕನ್ನಡದ ಮನೋಭಾವನೆ ಗಟ್ಟಿಗೊಳ್ಳಬೇಕಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಂಗಮನಾಥ ಲೋಕಾಪೂರ ಹೇಳಿದರು.ಅಳ್ನಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕನಾಟಕ ಜಾನಪದ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕರ್ನಾಟಕ ಏಕೀಕರಣದ ಹೋರಾಟಗಾರ ಅದರಗುಂಚಿ ಶಂಕರಗೌಡರ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮ ಗಾಂಧಿಜೀ ಅವರ ವ್ಯಕ್ತಿತ್ವ ರೂಪಿಸಿಕೊಂಡು, ಹೋರಾಟವನ್ನೇ ಜೀವನವನ್ನಾಗಿಸಿಕೊಂಡು ಕರ್ನಾಟಕ ಏಕೀಕರಣಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದ ಅದರಗುಂಚಿ ಶಂಕರಗೌಡರ ಇತಿಹಾಸವನ್ನು ಅರಿತುಕೊಳ್ಳಬೇಕಿದೆ. ಜತೆಗೆ ಅವರ ಭಾವಚಿತ್ರ ವಿಧಾನಸೌಧದಲ್ಲಿ ಅನಾವರಣಗೊಳ್ಳಲು ಮತ್ತು ಪುತ್ಥಳಿ ಸ್ಥಾಪನೆಯಂತಹ ಕಾರ್ಯಕ್ಕೆ ಸರ್ಕಾರ ಕ್ರಮಕೈಗೊಳ್ಳಬೇಕು. ಇದಕ್ಕೆ ಕನ್ನಡಾಭಿಮಾನಿಗಳು ಹೋರಾಟವನ್ನೇ ಮಾಡುವ ಪ್ರಸಂಗ ನಿರ್ಮಾಣವಾದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಹೇಳಿದರು.ಕನ್ನಡ ನಾಡು ಒಗ್ಗೂಡಿಸುವಲ್ಲಿ ಶಂಕರಗೌಡರ ಪಾತ್ರ ಅತ್ಯಂತ ಹಿರಿದಾಗಿದ್ದು ನಮ್ಮೆಲ್ಲರಿಗೂ ಅವರು ಆದರ್ಶಪ್ರಾಯರಾಗಿದ್ದಾರೆ. ಸಾಧನೆ ಮತ್ತು ಸಿದ್ಧಿಯ ಮೂಲಕ ಅದರಗುಂಚಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿರುವ ಕೀರ್ತಿ ಶಂಕರಗೌಡರಿಗೆ ಸಲ್ಲುತ್ತದೆ. ಅವರ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು. ಜತೆಗೆ ಕನ್ನಡ ನಾಡು, ನುಡಿಗೆ ಧಕ್ಕೆ ಬಾರದಂತೆ ಕಾಪಾಡಿಕೊಳ್ಳುವ ಗುರುತರ ಜವಾಬ್ದಾರಿಯೂ ನಮ್ಮೆಲರ ಮೇಲಿದೆ ಎಂದರು.
ಕವಿವ ಸಂಘದ ಸಹ ಕಾರ್ಯದರ್ಶಿ ಶಂಕರ ಕುಂಬಿ ಪ್ರಾಸ್ತಾವಿಕ ಮಾತನಾಡಿ, ಕನ್ನಡ ನಾಡಿನ ನಿರ್ಮಾಣದಲ್ಲಿ ಹೋರಾಟಗಾರರ ಪರಿಶ್ರಮ ಅಧಿಕವಾಗಿದೆ. ಇದಕ್ಕೆ ಸಂಘ ತನ್ನದೆ ಆದ ಕೊಡುಗೆ ನೀಡಿದೆ ಎಂದರು.ಅದರಗುಂಚಿ ಶಂಕರಗೌಡರ ಪ್ರತಿಷ್ಠಾನದ ಅಧ್ಯಕ್ಷ ವಿರೂಪಾಕ್ಷಗೌಡ ಪಾಟೀಲ, ಖಜಾಂಚಿ ಗೌಡಪ್ಪಗೌಡ ಪಾಟೀಲ, ವ್ಹಿ.ಜಿ. ಪಾಟೀಲ ಮಾತನಾಡಿದರು. ತಾಲೂಕು ಜಾನಪದ ಪರಿಷತ್ ಅಧ್ಯಕ್ಷೆ ಪೂರ್ಣಿಮಾ ಮುತ್ನಾಳ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಜಾನಪದ ಅಕಾಡೆಮಿ ಪುರಸ್ಕಾರಕ್ಕೆ ಪಾತ್ರರಾಗಿರುವ ದತ್ತಿ ದಾನಿ ರಾಮಣ್ಣ ಪ್ರತಿಷ್ಠಾನದ ಡಾ. ರಾಮು ಮೂಲಗಿ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಗುರುರಾಜ ಸಬನೀಸ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಸಂಜಯ ಮಾಳಿ, ಡಾ. ಬಸವರಾಜ ಮೂಡಬಾಗಿಲ, ಸುಮಾ ಸೋಪ್ಪಿ, ಸುವರ್ಣಾ ಕಡಕೋಳ, ಜಯಶ್ರೀ ಉಡುಪಿ, ಜೋಗಾ ಶೆಟ್ಟರ್, ಮಂಜುಳಾ ಜ್ಯೋತಿ, ಮಹಾಂತೇಶ ಹುಬ್ಬಳ್ಳಿ, ಸುರೇಂದ್ರ ಕಡಕೋಳ ಇನ್ನಿತರರು ಇದ್ದರು.
ಕವಿವ ಸಂಘದ ಮಾಜಿ ಕೋಶಾಧ್ಯಕ್ಷ ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಿಕ್ಷಕ ಸುನೀಲ ಪಾಟೀಲ ನಿರೂಪಿಸಿದರು. ಪ್ರವೀಣ ಪವಾರ ವಂದಿಸಿದರು.