ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಹುತಾತ್ಮರ ಕುಟುಂಬದ ನೋವನ್ನು ಯಾವುದೇ ಕಾರ್ಯಕ್ರಮದಿಂದ ಕಡಿಮೆ ಮಾಡಲು ಸಾಧ್ಯವಿಲ್ಲ. ಆದರೂ ಸೆಪ್ಟೆಂಬರ್ ೧೧ರಂದು ಹುತಾತ್ಮರನ್ನು ಸ್ಮರಿಸುವ ಮೂಲಕ ಅವರ ಸೇವೆ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸಲಾಗುತ್ತಿದೆ ಎಂದರು. ಇಂತಹ ಕಾರ್ಯಕ್ರಮಗಳಲ್ಲಿ ಆಯಾ ವಲಯದಲ್ಲಿ ಹುತಾತ್ಮರಾದ ಸಿಬ್ಬಂದಿಯ ಕುಟುಂಬದವರನ್ನೂ ಆಹ್ವಾನಿಸಿ ಗೌರವಿಸಬೇಕು. ತಮ್ಮ ಕುಟುಂಬದ ಸದಸ್ಯರ ಸೇವೆ ಹಾಗೂ ತ್ಯಾಗವನ್ನು ಸರ್ಕಾರ ಮತ್ತು ಇಲಾಖೆ ಸ್ಮರಿಸುತ್ತಿದೆ ಎಂಬ ಭಾವನೆ ಅವರಿಗೆ ಮೂಡಬೇಕು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳ ರಕ್ಷಣೆಯ ಕರ್ತವ್ಯ ಅತ್ಯಂತ ಸವಾಲಿನದ್ದಾಗಿದ್ದು, ತಮ್ಮ ಕುಟುಂಬದ ಹಿತಾಸಕ್ತಿಗಿಂತ ಕರ್ತವ್ಯಕ್ಕೆ ಆದ್ಯತೆ ನೀಡಿ ಈ ಸಂಪತ್ತಿನ ರಕ್ಷಣೆ ವೇಳೆ ಪ್ರಾಣ ತ್ಯಾಗ ಮಾಡಿದ ಅರಣ್ಯ ಇಲಾಖೆಯ ಸಿಬ್ಬಂದಿಗಳ ಸೇವೆ ಸ್ಮರಣೀಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೇಮಾವತಿ ತಿಳಿಸಿದರು.ನಗರದ ಜಿಲ್ಲಾ ಅರಣ್ಯ ಭವನದ ಆವರಣದಲ್ಲಿ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಾಣಾರ್ಪಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಯ ಬಲಿದಾನವನ್ನು ಸ್ಮರಿಸುವ ಉದ್ದೇಶದಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ನಗರದ ಡೇರಿ ವೃತ್ತದ ಬಳಿ ಇರುವ ಜಿಲ್ಲಾ ಅರಣ್ಯ ಭವನದಲ್ಲಿ ಶುಕ್ರವಾರ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ನ್ಯಾಯಾಧೀಶರು ಉದ್ದೇಶಿಸಿ ಮಾತನಾಡಿ, ಅರಣ್ಯದಲ್ಲಿ ಮರಗಳು, ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಸಂಪತ್ತನ್ನು ರಕ್ಷಿಸುವ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಹುತಾತ್ಮರ ಕುಟುಂಬದ ನೋವನ್ನು ಯಾವುದೇ ಕಾರ್ಯಕ್ರಮದಿಂದ ಕಡಿಮೆ ಮಾಡಲು ಸಾಧ್ಯವಿಲ್ಲ. ಆದರೂ ಸೆಪ್ಟೆಂಬರ್ ೧೧ರಂದು ಹುತಾತ್ಮರನ್ನು ಸ್ಮರಿಸುವ ಮೂಲಕ ಅವರ ಸೇವೆ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸಲಾಗುತ್ತಿದೆ ಎಂದರು. ಇಂತಹ ಕಾರ್ಯಕ್ರಮಗಳಲ್ಲಿ ಆಯಾ ವಲಯದಲ್ಲಿ ಹುತಾತ್ಮರಾದ ಸಿಬ್ಬಂದಿಯ ಕುಟುಂಬದವರನ್ನೂ ಆಹ್ವಾನಿಸಿ ಗೌರವಿಸಬೇಕು. ತಮ್ಮ ಕುಟುಂಬದ ಸದಸ್ಯರ ಸೇವೆ ಹಾಗೂ ತ್ಯಾಗವನ್ನು ಸರ್ಕಾರ ಮತ್ತು ಇಲಾಖೆ ಸ್ಮರಿಸುತ್ತಿದೆ ಎಂಬ ಭಾವನೆ ಅವರಿಗೆ ಮೂಡಬೇಕು ಎಂದು ಹೇಳಿದರು.
ಸೇವಾ ಸೌಲಭ್ಯ, ಭದ್ರತೆ ಅಥವಾ ಇತರೆ ಹಕ್ಕುಗಳು ದೊರೆಯದೆ ವಿಳಂಬವಾದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗಮನಕ್ಕೆ ತರಬಹುದು. ನ್ಯಾಯಾಂಗ ವ್ಯವಸ್ಥೆಯ ಮೂಲಕ ಅರ್ಹರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ತಲುಪಿಸಲು ಪ್ರಾಧಿಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಹಿಡಿದು ಅಧಿಕಾರಿವರೆಗೆ ಎಲ್ಲರೂ ಕಾನೂನಿನ ಮುಂದೆ ಸಮಾನರಾಗಿದ್ದು, ಪ್ರತಿಯೊಬ್ಬರ ಹಕ್ಕುಗಳ ರಕ್ಷಣೆಗೆ ಕಾನೂನು ಸೇವೆಗಳ ಪ್ರಾಧಿಕಾರ ಬದ್ಧವಾಗಿದೆ ಎಂದು ತಿಳಿಸಿದರು.ಹಾಸನ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕೊಂಡಲು ತಮ್ಮ ಅಧ್ಯಕ್ಷತೆ ನುಡಿಯಲ್ಲಿ ಮಾತನಾಡಿ, ದೇಶದಾದ್ಯಂತ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಒಂದೇ ಬದ್ಧತೆ, ಭಾವನೆ ಮತ್ತು ಸಂಕಲ್ಪದೊಂದಿಗೆ ಆಚರಿಸಲಾಗುತ್ತಿದೆ. ಪ್ರಕೃತಿ ಸಂಪತ್ತು, ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಹೊಣೆಗಾರಿಕೆ ಇಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮುಂದೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದರು. ಪ್ರಕೃತಿ ಸಂಪನ್ಮೂಲಗಳ ನಾಶದಿಂದಾಗಿ ಹವಾಮಾನ ವೈಪರೀತ್ಯಗಳು ಹಾಗೂ ವಿವಿಧ ರೀತಿಯ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ಮಳೆ ಪ್ರಮಾಣದಲ್ಲಿನ ಏರಿಳಿತ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿರುವ ಹವಾಮಾನ ಬದಲಾವಣೆಯ ಪರಿಣಾಮಗಳು ಪ್ರಕೃತಿಯ ಮೇಲೆ ಮಾನವ ನಡೆಸುತ್ತಿರುವ ಅತಿಕ್ರಮಣ ಮತ್ತು ಅರಣ್ಯ ನಾಶದ ಪರಿಣಾಮವನ್ನು ಸ್ಪಷ್ಟಪಡಿಸುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹುತಾತ್ಮ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಹುತಾತ್ಮರಾದ ಪಟ್ಟಿಯನ್ನು ಓದಲಾಯಿತು. ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಿದರು.ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಜಿ.ಕೆ., ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಹನಕುಮಾರ ಟಿ.ಎಂ., ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯಶ್ರೀ, ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಹಾಸನ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ ವಿ.ಎಸ್., ಹಾಸನ ವಲಯ ಅರಣ್ಯಾಧಿಕಾರಿ ಶಿವಾನಂದ ಕೋಟ್ಯಾಳ ಸೇರಿದಂತೆ ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.===========
ಬಾಕ್ಸ್:: ಸಮನ್ವಯತೆಯಿಂದ ಪ್ರಕೃತಿ ಸಂಪತ್ತಿನ ರಕ್ಷಣೆಗೆ ಮುಂದಾಗಬೇಕುಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ರಕ್ಷಣೆಯ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಇಂದಿನ ಆಡಳಿತ ವ್ಯವಸ್ಥೆಯಲ್ಲಿ ದೊಡ್ಡ ಸವಾಲಾಗಿದೆ. ವಿವಿಧ ಇಲಾಖೆಗಳು ಹಾಗೂ ಆಡಳಿತ ವ್ಯವಸ್ಥೆಗಳ ನಡುವೆ ಸಮನ್ವಯದ ಕೊರತೆಯಿಂದ ಕೆಲವೊಮ್ಮೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಅಗತ್ಯವಾದ ಆದ್ಯತೆ ದೊರೆಯುತ್ತಿಲ್ಲ ಎಂದು ಹಾಸನ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕೊಂಡಲು ತಿಳಿಸಿದರು. ಆದ್ದರಿಂದ ಅರಣ್ಯ ಸಂರಕ್ಷಣೆಯನ್ನು ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯನ್ನಾಗಿ ನೋಡದೆ, ಸರ್ಕಾರದ ವಿವಿಧ ಇಲಾಖೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಒಗ್ಗೂಡಿ ಪ್ರಕೃತಿ ಸಂಪತ್ತಿನ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.