ಸಾರಾಂಶ
ಸಿದ್ದಾಪುರ: ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ೧೨ನೇ ಪುಣ್ಯರಾಧನೆ ಅಂಗವಾಗಿ ತಾಲೂಕಿನ ಮೇಲಿನ ಸರಕುಳಿ, ಅಕ್ಕುಂಜಿ ಹಾಗೂ ಬಿಳೇಗೋಡ ಗ್ರಾಮಗಳಲ್ಲಿ ಗುರುಗಳ ಪಾದುಕೆ ಹಾಗೂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಆದಿಚುಂಚನಗಿರಿ ಮಹಾಸಂಸ್ಥಾನ ಮಿರ್ಜಾನ್ ಶಾಖಾ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಮೂರು ಗ್ರಾಮಗಳಲ್ಲಿ ಗುರುವಾರ ಪ್ರತ್ಯೇಕವಾಗಿ ನಡೆದ ಪದ್ಮಭೂಷಣ, ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಆಗಮಿಸಿದ್ದರು. ಇದೇ ವೇಳೆ ಸ್ವಾಮಿಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.ಇದೇ ವೇಳೆ ೧೨ನೇ ಪುಣ್ಯರಾಧನೆ ನಿಮಿತ್ತ ಗುರುಗಳ ಪಾದುಕೆ ಯಾತ್ರೆಗೆ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ತಾಲೂಕಿನ ಮೇಲಿನ ಸರಕುಳಿಯಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸ್ವಾಮೀಜಿ, ಸಮಾಜಕ್ಕಾಗಿ, ಪರರಿಗಾಗಿ ಬದುಕಿದಂತ ಮಹಾನ್ ವ್ಯಕ್ತಿಗಳು ಸದಾ ಜನರ ಮನಸ್ಸಿನಲ್ಲಿ ಇರುತ್ತಾರೆ. ಅದೇ ರಿತಿ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಜಗತ್ತಿಗೆ ಧಾರ್ಮಿಕ ಪರಂಪರೆಯ ಮೌಲ್ಯವನ್ನು ಎತ್ತಿ ಹಿಡಿದ ಮಹಾನ್ ಸಂತರು. ಜಗತ್ತಿಗೆ ಧಾರ್ಮಿಕ, ಸಾಮಾಜಿಕ, ಶಿಕ್ಷಣ ಕ್ರಾಂತಿ ಮೂಡಿಸಿದ್ದಾರೆ. ಇಂದು ಅವರ ಹಾಕಿದ ಬುನಾದಿಯಿಂದಾಗಿ ಶ್ರೀ ಮಠದ ೫೦೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ ಎಂದರು.
ರಾಜ್ಯದಲ್ಲಿ ಒಕ್ಕಲಿಗ ಸಮುದಾಯವನ್ನು ಒಂದುಗೂಡಿಸಿದ ಸ್ವಾಮೀಜಿ ಪ್ರತಿ ಜಿಲ್ಲೆಗಳಲ್ಲಿಯೂ ಸಮುದಾಯವನ್ನು ಒಗ್ಗಟ್ಟಾಗಿಸುವಂತೆ ಮಾಡಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ಒಕ್ಕಲಿಗರು ಹರಿದು ಹಂಚಿಹೋಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಲ್ಲಿ ಒಕ್ಕಲಿಗರನ್ನು ಒಂದು ಮಾಡುವ ಕಾರ್ಯ ಹಲವು ಸಂಘಟನೆಗಳಿಂದ ನಿರಂತರವಾಗಿ ನಡೆಯುತ್ತಿದೆ. ಅದರಂತೆ ಇದೀಗ ಸಿದ್ದಾಪುರದಲ್ಲಿ ಒಕ್ಕಲಿಗರ ಸಭಾಭವನ ನಿರ್ಮಾಣಕ್ಕೆ ಸಿದ್ದತೆಗಳು ನಡೆಯುತ್ತಿದ್ದು ಈ ಕಾರ್ಯಕ್ರಮಕ್ಕೆ ಮಹಾಸಂಸ್ಥಾನ ಮಠದ ಪರಮಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿ ಅವರು ಆಗಮಿಸಲಿದ್ದಾರೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಸೇರಿ ಪರಮಪೂಜ್ಯರ ದರ್ಶನ ಪಡೆಯಬೇಕು ಎಂದರು.ಅದೇ ರಿತಿ ಪರಮಸ್ವರೂಪಿಯಾಗಿರುವ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪಾದುಕೆ ಯಾತ್ರೆಯೂ ಸಿದ್ದಾಪುರ ತಾಲೂಕಿನಾದ್ಯಂತ ಪ್ರತಿ ಒಕ್ಕಲಿಗರ ಮನೆಗೆ ಸಂಚರಿಸಲಿದೆ. ಈ ವೇಳೆ ದೇವರ ಸ್ವರೂಪಿಯಾದ ಈ ಪಾದುಕೆ ದರ್ಶನ ಪಡೆದುಕ್ಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಾದ ಎಂ.ಟಿ ಗೌಡ, ಸಿದ್ದಾಪುರ ಕರೆ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಮಹಾಬಲೇಶ್ವರ ಗೌಡ ಸರಕುಳಿ, ಅಧ್ಯಕ್ಷ ಸುಬ್ರಾಯ್ ಗೌಡ, ಉಪಾಧ್ಯಕ್ಷ ಅಮ್ಮುಗೌಡ, ಸೀತಾರಾಮ ಗೌಡ ಕುಳ್ಳೆ, ನಾಗಪತಿ ಗೌಡ, ಗಣಪತಿ ಗೌಡ ಪಡಂಬೈಲ್, ಸಂತೋಷ್ ಹಲಗಡಿಕೊಪ್ಪ, ವಿನಾಯಕ ಗೌಡ ಉಡಳ್ಳಿ, ಗೋವಿಂದ ಗೌಡ ಬಿಳೆಗೋಡ ಸೇರಿದಂತೆ ಇನ್ನಿತರರು ಇದ್ದರು.