ಸಮಾಜಕ್ಕೆ ಕೊಡುಗೆ ಕೊಟ್ಟ ಮಹನೀಯರ ಸ್ಮರಿಸಿ

| Published : Apr 25 2024, 01:05 AM IST

ಸಾರಾಂಶ

ಸಮಾಜಕ್ಕೆ ಕೊಡುಗೆ ಕೊಟ್ಟ ಮಹನೀಯರನ್ನು ಎಲ್ಲ ಕಾಲಕ್ಕೂ ಸಮಾಜ ಸ್ಮರಿಸಬೇಕು ಎಂದು ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಸಮಾಜಕ್ಕೆ ಕೊಡುಗೆ ಕೊಟ್ಟ ಮಹನೀಯರನ್ನು ಎಲ್ಲ ಕಾಲಕ್ಕೂ ಸಮಾಜ ಸ್ಮರಿಸಬೇಕು ಎಂದು ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿದರು.

ಪಟ್ಟಣದ ಅಕ್ಕನಾಗಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯು ಬುಧವಾರ ಹಮ್ಮಿಕೊಂಡಿದ್ದ ಬಸವೇಶ್ವರ ದೇವಾಲಯ ಸಂಸ್ಥೆಯ ಮೂಲ ಸಂಸ್ಥಾಪಕ ನಿವೃತ್ತ ಮಾಮಲೇದಾರ ಲಿಂ. ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಸಮಾಜಕ್ಕೆ ಕೊಡುಗೆ ಕೊಟ್ಟವರ ಸಾಲಿನಲ್ಲಿರುವ ಅಮೀನಗಡದ ನಿವೃತ್ತ ಮಾಮಲೇದಾರ ಲಿಂ. ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರು ತಮ್ಮ ನಿವೃತ್ತಿಯ ನಂತರ ಬಸವೇಶ್ವರ ದೇವಾಲಯ ಸಂಸ್ಥೆಯ ಮೂಲಸಂಸ್ಥಾಪಕರಾಗಿ ಬಸವೇಶ್ವರ ದೇವಸ್ಥಾನದ ಮೂಲ ಜೀರ್ಣೋದ್ಧಾರಕರಾಗಿ ಧಾರ್ಮಿಕ ಕ್ಷೇತ್ರದ ಕಾರ್ಯ ಮಾಡಿದ್ದಾರೆ. ಇವರು ಆರಂಭದಲ್ಲಿ ತಾವು ದೇಣಿಗೆ ನೀಡಿ ನಂತರ ಸಮಾಜದಲ್ಲಿರುವ ಎಲ್ಲ ಬಾಂಧವರ ದೇಣಿಗೆ ಸಹಾಯದೊಂದಿಗೆ ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯ ಬಸವೇಶ್ವರ ದೇವಾಲಯದ ಜೀರ್ಣೋದ್ಧಾರ, ದೇವಾಲಯದ ಸುತ್ತಲೂ ಕಲ್ಲು ನಿರ್ಮಿತ ಅತ್ಯಾಕರ್ಷಕ ಆವರಣಗೋಡೆ ನಿರ್ಮಾಣ ಸೇರಿದಂತೆ ಇತರೇ ಕಟ್ಟಡಗಳ ನಿರ್ಮಾಣ ಕಾರ್ಯ ಮಾಡಿದ್ದಾರೆ. ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಅಂದಿನ ಬ್ರಿಟಿಷ್ ಸರ್ಕಾರ ಇವರಿಗೆ ರಾವ್‌ಸಾಹೇಬ ಎಂಬ ಬಿರುದು ನೀಡಿತ್ತು. ಇಂತಹ ಮಹನೀಯರ ತತ್ವದಾರ್ಶಗಳನ್ನು ಇಂದಿನ ಪೀಳಿಗೆ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ನಿವೃತ್ತ ಶಿಕ್ಷಕ ಎಫ್.ಡಿ.ಮೇಟಿ ಮಾತನಾಡಿ, ನಾವು ನಮ್ಮ ಶರೀರದಿಂದ ಸಮಾಜದಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ನಮ್ಮ ಕರ್ತವ್ಯದಿಂದ ಸಮಾಜವನ್ನು ಗೆಲ್ಲಬಹುದು. ಅನೇಕ ಮಹನೀಯರು ತಮ್ಮ ಪ್ರಾಮಾಣಿಕ ಕರ್ತವ್ಯ, ನಿಸ್ವಾರ್ಥ ಸೇವೆಯಿಂದ ಸಮಾಜದಲ್ಲಿ ಸದಾ ಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.

ಸಿಂಹಾಸನರ ವಂಶಸ್ಥ, ನಿವೃತ್ತ ಕೃಷಿ ಅಧಿಕಾರಿ ಎಂ.ಎಸ್.ಸಿಂಹಾಸನ ಮಾತನಾಡಿ, ನಮ್ಮ ಮುತ್ತಜ್ಜನವರು ಮಾಡಿದ ಕಾರ್ಯ ಸ್ಮರಣೀಯವಾಗಿದೆ. ಇಂದು ಡಾ.ಎಸ್.ಎಂ. ಜಾಮದಾರ ಅವರು ಸಹ ಈ ದೇವಾಲಯ ಪುನರ್ ಜೀರ್ಣೋದ್ಧಾರ ಮಾಡಿದ್ದಾರೆ. ಇವರ ಕಾರ್ಯವನ್ನು ಇಲ್ಲಿ ಸ್ಮರಿಸಬೇಕಿದೆ ಎಂದರು.

ಸಾಹಿತಿ ಮಹಾಂತೇಶ ಸಂಗಮ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಮಂಡಳಿಯ ಅಭಿಯಂತರ ಡಿ.ಎಸ್.ಹಿರೇಮಠ ವಹಿಸಿದ್ದರು. ಶರಣು ಬಸ್ತಾಳ ಪ್ರಾರ್ಥಿಸಿದರು. ಎಸ್.ಕೆ.ಸೋಮನಕಟ್ಟಿ ಸ್ವಾಗತಿಸಿದರು. ಬಸವರಾಜ ನಂದಿಹಾಳ ನಿರೂಪಿಸಿದರು. ಪಿ.ಎಲ್.ಹಿರೇಮಠ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ದೇವಾಲಯದ ಹೊರಆವರಣದಲ್ಲಿರುವ ಲಿಂ.ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.