ಆ.8 ರಂದು ಮಲ್ಲಿಕಾರ್ಜುನ ಶ್ರೀಗಳ ಸ್ಮರಣೋತ್ಸವ

| Published : Jul 15 2024, 01:57 AM IST

ಆ.8 ರಂದು ಮಲ್ಲಿಕಾರ್ಜುನ ಶ್ರೀಗಳ ಸ್ಮರಣೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳಲ್ಕೆರೆ ಒಂಟಿ ಕಂಬದ ಮಠದಲ್ಲಿ ಭಾನುವಾರ ನಡೆದ ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳ ಸ್ಮರಣೋತ್ಸವದ ಪೂರ್ವ ಸಿದ್ದತಾ ಸಭೆಯಲ್ಲಿ ಬಸವ ಪ್ರಭು ಸ್ವಾಮೀಜಿ ಮಾತನಾಡಿದರು.

ಕನ್ನಡಪ್ರಭವಾರ್ತೆ ಹೊಳಲ್ಕೆರೆಚಿತ್ರದುರ್ಗ ಬಸವಕೇಂದ್ರ ಮುರುಘಾಮಠದ ಲಿಂಗೈಕ್ಯ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಸ್ಮರಣೋತ್ಸವವನ್ನು ಆ.8 ರಂದು ಹೊಳಲ್ಕೆರೆ ಒಂಟಿಕಲ್ಲು ಕಂಬದ ಮಠದ ಆವರಣದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ತಿಳಿಸಿದರು.

ಭಾನುವಾರ ಒಂಟಿಕಲ್ಲು ಕಂಬದ ಮಠದಲ್ಲಿ ನಡೆದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಶ್ರೀಗಳು ದೊಡ್ಡ ಪಂಡಿತರು. ಶ್ರೀಗಳಿಗೆ ದಲಿತರ ಮೇಲೆ ಅಪಾರ ಕಾಳಜಿ ಇತ್ತು. ವಿದ್ವತ್ ಪರಂಪರೆಯಲ್ಲಿ ಶ್ರೀಮಠವು ದೊಡ್ಡ ಹೆಸರು ಮಾಡಲು ಅವರು ಪ್ರಮುಖ ಕಾರಣ. ಅಂತಹ ಶ್ರೀಗಳ ಸ್ಮರಣೋತ್ಸವವನ್ನು ಕಳೆದ ಮೂವತ್ತು ವರ್ಷಗಳಿಂದ ಮಾಡುತ್ತ ಬಂದಿದ್ದೇವೆ ಎಂದರು.

ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಲಿಂಗೈಕ್ಯ ಮಲ್ಲಿಕಾರ್ಜುನ ಶ್ರೀಗಳು ಸಂದರ್ಭಕ್ಕೆ ಸರಿಯಾಗಿ ಪಾಂಡಿತ್ಯ ಪೂರ್ಣವಾಗಿ ಮಾತನಾಡುತ್ತಿದ್ದರು. ಮಾತನಾಡುವಾಗ ಅಹಂಕಾರ, ಕುಹಕ ಇರಬಾರದು. ಮಾತನಾಡುವ ಪ್ರತಿಮಾತು ಮಂತ್ರವಾಗಬೇಕು ಎನ್ನುತ್ತಿದ್ದರು ಎಂದು ಶ್ರಗಳನ್ನು ಸ್ಮರಿಸಿದರು.

ಲಿಂಗೈಕ್ಯ ಮಲ್ಲಿಕಾರ್ಜುನ ಶ್ರೀಗಳಿಗೆ ಸಾಟಿ ಬೇರೆ ಯಾರೂ ಇಲ್ಲ. ಅಥಣಿ ಶ್ರೀಗಳ, ಮೃತ್ಯುಂಜಯಪ್ಪ ಹಾಗೂ ಸಿದ್ಧಲಿಂಗ ಅಪ್ಪಗಳ ಆಶೀರ್ವಾದ ಮಲ್ಲಿಕಾರ್ಜುನ ಜಗದ್ಗುರುಗಳ ಮೇಲಿತ್ತು. ನಮ್ಮಂತಹ ವಟುಗಳಿಗೆ ಶ್ರೀಗಳು ಅನೇಕ ಪುಸ್ತಕಗಳನ್ನು ಕೊಟ್ಟು ಓದಲು ಹೇಳುತ್ತಿದ್ದರು. ಅವರ ಸ್ಮರಣೋತ್ಸವ ದಿನದಂದು ಅವರ ಬಗ್ಗೆ ಅನೇಕ ವಿದ್ವಾಂಸರು ಬರೆದಿರುವ ಲೇಖನಗಳ ಸಂಗ್ರಹದ ಪುಸ್ತಕವನ್ನು ಬಿಡುಗಡೆಗೊಳಿಸಲಾಗುವುದು. ಲಕ್ಷ್ಮಣ ತೆಲಗಾವಿಯವರು ಮಲ್ಲಿಕಾರ್ಜುನ ಶ್ರೀಗಳು ಲಿಂಗೈಕ್ಯರಾದಾಗ ಸುಮಾರು ಮೂವತ್ತು ಲೇಖನಗಳನ್ನು ಸಂಗ್ರಹಿಸಿದ್ದರು. ಚಿನ್ಮೂಲಾದ್ರಿಯ ಮುದ್ರೆಬಿದ್ದರೆ ಮಾತ್ರ ಕರ್ನಾಟಕದ ಯಾವುದೇ ವಿರಕ್ತಮಠಕ್ಕೆ ಸ್ವಾಮಿಗಳಾಗಬೇಕಿತ್ತು ಎಂದು ಸ್ಮರಿಸಿದರು.

ಡಾ.ಬಸವಪ್ರಭು ಸ್ವಾಮಿಗಳು ಮಾತನಾಡಿ, ನುಡಿದಂತೆ ನಡೆದವರು ಮಲ್ಲಿಕಾರ್ಜುನ ಸ್ವಾಮಿಗಳು. ಅವರೊಂದು ಜ್ಞಾನದ ಶಿಖರ. 1964ರಲ್ಲಿ ಶ್ರೀಗಳು ಪೀಠವನ್ನು ಅಲಂಕರಿಸಿದ್ದು, 1966ರಲ್ಲಿ ವಿದ್ಯಾಪೀಠ ಪ್ರಾರಂಭಿಸುತಾರೆ. ಆ ಶಿಕ್ಷಣ ಸಂಸ್ಥೆಗಳಲ್ಲಿಂದು ಸಾವಿರಾರು ಜನರು ಓದುತ್ತಿದ್ದಾರೆ. ಮಠವೆಂದರೆ ಮರವಿದ್ದ ಹಾಗೆ. ಲಿಂಗೈಕ್ರ ಶ್ರೀಗಳು ಅನೇಕರಿಗೆ ಆಶ್ರಯ ಕೊಟ್ಟಿದ್ದಾರೆ ಎಂದರು.

ಕೆಇಬಿ ಷಣ್ಮುಖಪ್ಪ ಮಾತನಾಡಿ, ಜಯವಿಭವ ಶ್ರೀಗಳು ಮಲ್ಲಿಕಾರ್ಜುನ ಸ್ವಾಮಿಗಳನ್ನು ಪೀಠಾಧಿಪತಿಯನ್ನಾಗಿ ನೇಮಕ ಮಾಡಿದರು. ಶ್ರೀಮಠಕ್ಕೆ ಬಂದ ಮೇಲೆ ಅವರು ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಪ್ರತಿವರ್ಷ ಆ.8ರಂದು ಅವರ ಸ್ಮರಣೆ ಕಾರ್ಯಕ್ರಮ ನಡೆಯಬೇಕು ಎಂದು ತಿಳಿಸಿದರು. ಎಚ್.ಆನಂದಪ್ಪ ಮಾತನಾಡಿ, 8ನೇ ತಾರೀಕು ನಡೆಯುವ ಅನ್ನಸಂತರ್ಪಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ತಿಳಿಸಿದರು.

ಎಸ್.ಎಂ. ಕೊಟ್ರೇಶಪ್ಪ ಮಾತನಾಡಿ, ಕಾರ್ಯಕ್ರಮಕ್ಕೆ ₹10 ಸಾವಿರ ದೇಣಿಗೆ ನೀಡುವುದಾಗಿ ತಿಳಿಸಿದರು.

ಈ ವೇಳೆ ಮಹಾಂತ ಸ್ವಾಮಿಗಳು ಬೇಲೂರು, ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಉಪ್ಪುಣಸಿಯ ಶ್ರೀ ಜಯಬಸವ ಸ್ವಾಮಿಜಿ, ದೆಹಲಿಯ ಶ್ರೀ ಮಹಾಂತ ಪೂರ್ಣಾನಂದ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಎಚ್.ಸಿ.ನಿರಂಜನಮೂರ್ತಿ, ಸುರೇಶ್‍ಬಾಬು ಇದ್ದರು.