ಶ್ರೀ ವಿದ್ಯಾಮಾನ್ಯತೀರ್ಥರ ಸಂಸ್ಮರಣಾ ಕಾರ್ಯಕ್ರಮ

| Published : May 21 2024, 12:33 AM IST

ಸಾರಾಂಶ

ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ಶ್ರೀ ಭಂಡಾರಕೇರಿ ಮತ್ತು ಶ್ರೀ ಪಲಿಮಾರು ಉಭಯ ಮಠಾಧಿಪತಿಗಳಾಗಿದ್ದ ಪ್ರಾತ:ಸ್ಮರಣೀಯ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದಂಗಳವರ ಆರಾಧನೆ, ನಡೆದ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ಶ್ರೀ ಭಂಡಾರಕೇರಿ ಮತ್ತು ಶ್ರೀ ಪಲಿಮಾರು ಉಭಯ ಮಠಾಧಿಪತಿಗಳಾಗಿದ್ದ ಪ್ರಾತ:ಸ್ಮರಣೀಯ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದಂಗಳವರ ಆರಾಧನೆ, ನಡೆದ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗುರುಸ್ಮರಣೆ ಮಾಡುತ್ತಾ, ನಮ್ಮ ಸ್ವರೂಪೋದ್ಧಾರಕ ಗುರುಗಳಾದ ಶ್ರೀ ವಿದ್ಯಾಮಾನ್ಯ ತೀರ್ಥರು ನಿಷ್ಕಳಂಕ ಶುದ್ಧ ವ್ಯಕ್ತಿತ್ವದವರು. ಮನಸ್ಸು ಮಾತು ಕ್ರಿಯೆಗಳಲ್ಲಿ ಒಂದೇ ರೀತಿಯಲ್ಲಿ ಇದ್ದವರು. ಶುದ್ಧವಾದ ಯತಿಧರ್ಮ ಪಾಲನೆ, ಪಾಠ-ಪ್ರವಚನಗಳಲ್ಲಿ ಅಚಲವಾದ ದೀಕ್ಷೆ, ಶಿಷ್ಯ ವಾತ್ಸಲ್ಯ, ಸಮಾಜದ ಅಭಿವೃದ್ಧಿಯ ಹಂಬಲ ಮುಂತಾದ ಆದರ್ಶ ಗುಣಗಳುಳ್ಳ ಗುರುಗಳಾಗಿದ್ದರು ಎಂದು ಕೊಂಡಾಡಿದರು.

ಅವರು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರೇ ಮೊದಲಾದ ಅನೇಕ ಯತಿಗಳನ್ನು ವಿದ್ವಾಂಸರನ್ನಾಗಿ ರೂಪಿಸಿದವರು. ಇಂಥಹ ಪರಿಶುದ್ಧ ಚಿನ್ನದಂತಹ ವ್ಯಕ್ತಿತ್ವದ ಗುರುಗಳಿಂದ ಪೂಜಿಸಿಕೊಳ್ಳಲು ಸಂಕಲ್ಪಿಸಿ ಶ್ರೀಕೃಷ್ಣನು ಗುರುಗಳಿಗೆ ಶ್ರೀಭಂಡಾರಕೇರಿ ಮಠದ ಜೊತೆಗೆ ಶ್ರೀ ಪಲಿಮಾರು ಮಠದ ಆಧಿಪತ್ಯವನ್ನು ಕರುಣಿಸಿದ, ಆತನ ಪರಮಾನುಗ್ರಹದಿಂದ ಶ್ರೀಕೃಷ್ಣ ಪೂಜಾ ಪರ್ಯಾಯದಲ್ಲಿ ಚಿನ್ನದ ರಥ, ವಜ್ರಕಿರೀಟಗಳನ್ನು ಸಮರ್ಪಿಸಿ ಧನ್ಯರಾದರು ಎಂದಭಿಪ್ರಾಯಪಟ್ಟರು.

ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದಂಗಳವರು ಶ್ರೀಮದ್ಭಾಗವತದ ದಶಮಸ್ಕಂಧದ ಚಿಂತನೆಯನ್ನು ಮಾಡಿ ಶ್ರೀ ವಿದ್ಯಾಮಾನ್ಯರಿಗೆ ಸಮರ್ಪಿಸಿದರು.

ಸಭೆಯಲ್ಲಿ ಡಾ. ಶಂಕರನಾರಾಯಣ ಅಡಿಗ, ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ತಿರುಪತಿ, ವಿದ್ವಾನ್ ನಂದಿಕೂರು ಜನಾರ್ದನ ಭಟ್, ವಿದ್ವಾನ್ ಹೃಷೀಕೇಶ ಮಠದ, ಉಡುಪಿ ಇವರು ಶ್ರೀವಿದ್ಯಾಮಾನ್ಯ ತೀರ್ಥರ ಮಹಿಮೆಗಳನ್ನು ಮನೋಜ್ಞವಾಗಿ ವರ್ಣಿಸಿದರು.

ವಿದ್ವಾಂಸರಾದ ಡಾ.ಬಿ.ಗೋಪಾಲಾಚಾರ್ ಹಾಗೂ ಮಹಿತೋಷ ಆಚಾರ್ಯ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.