ರಾಮನಗರ: ಕೇಂದ್ರ ಸರ್ಕಾರದ ಅರ್ಬನ್ ಚಾಲೆಂಜ್ ಫಂಡ್ (ನಗರ ಸವಾಲು ನಿಧಿ) ಯೋಜನೆ ಧನ ಸಹಾಯ ಬಳಸಿಕೊಂಡು ನಗರಸಭೆ ಸಭಾಭವನದ ಆವರಣದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸೋಮವಾರ ನಡೆದ ನಗರಸಭೆ ವಿಶೇಷ ಸಾಮಾನ್ಯಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು

ರಾಮನಗರ: ಕೇಂದ್ರ ಸರ್ಕಾರದ ಅರ್ಬನ್ ಚಾಲೆಂಜ್ ಫಂಡ್ (ನಗರ ಸವಾಲು ನಿಧಿ) ಯೋಜನೆ ಧನ ಸಹಾಯ ಬಳಸಿಕೊಂಡು ನಗರಸಭೆ ಸಭಾಭವನದ ಆವರಣದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸೋಮವಾರ ನಡೆದ ನಗರಸಭೆ ವಿಶೇಷ ಸಾಮಾನ್ಯಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ನಗರಸಭೆಯ ಪ್ರಶಸ್ತಿ ಭವನದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯಸಭೆಯಲ್ಲಿ ಸಭಾ ಭವನ ಇರುವ ಆವರಣದಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಕಾರ್ಯಕ್ಕೆ ಸರ್ವ ಸದಸ್ಯರು ಪಕ್ಷಾತೀತವಾಗಿ ಒಪ್ಪಿಗೆ ಸೂಚಿಸಿದರು.

ಸಭಾ ಭವನದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಅರ್ಬನ್ ಚಾಲೆಂಜ್ ಫಂಡ್ ಅಡಿಯಲ್ಲಿ ಕೇಂದ್ರ ಸರ್ಕಾರ ಶೇ.25 ಅನುದಾನ (6.50 ಕೋಟಿ ) ಒದಗಿಸುತ್ತದೆ. ಮುನಿಸಿಪಲ್ ಬಾಂಡ್, ಬ್ಯಾಂಕ್ ಸಾಲ, ಪಬ್ಲಿಕ್ ಪ್ರೈವೇಟ್ ಪಾಲುದಾರಿಕೆಗಳ ಮೂಲಕ ಕನಿಷ್ಠ ಶೇ.50ರಷ್ಟು ಅನುದಾನ ಸೃಷ್ಟಿಸಿಕೊಳ್ಳಬೇಕು. ಇನ್ನುಳಿದ ಹಣವನ್ನು ನಗರಸಭೆ ನಿಧಿಯಿಂದ ಭರಿಸಬೇಕಾಗುತ್ತದೆ ಎಂದು ಅಧ್ಯಕ್ಷ ಕೆ.ಶೇಷಾದ್ರಿ ವಿವರಿಸಿದರು.

ಈ ವಾಣಿಜ್ಯ ಸಂಕೀರ್ಣ ಅಂದಾಜು 26 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ 6.50 ಕೋಟಿ ಅನುದಾನ ಒದಗಿಸುತ್ತದೆ. ನಗರಸಭೆ ನಿಧಿಯಿಂದ ಶೇಕಡ 25ರಷ್ಟು ಅನುದಾನ ಭರಿಸುವುದು ಕಷ್ಟಸಾಧ್ಯ. ಹೀಗಾಗಿ ಶೇ.75ರಷ್ಟು ಅನುದಾನವನ್ನು ಬ್ಯಾಂಕಿನಿಂದಲೇ ಸಾಲದ ರೂಪದಲ್ಲಿ ಪಡೆಯಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ವಾಣಿಜ್ಯ ಸಂಕೀರ್ಣ ನಿರ್ಮಾಣ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ರಾಮನಗರದ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲಾಗಲಿದೆ. ನಮ್ಮ ಅವಧಿಯಲ್ಲಿಯೇ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸೋಣ. ಈ ಸಂಕೀರ್ಣದಲ್ಲಿಯೇ ನಗರಸಭೆ ಕಚೇರಿ ಜೊತೆಗೆ ಉಳಿದ ಸ್ಥಳವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಬೇರೆಲ್ಲೂ ವಾಣಿಜ್ಯ ಸಂಕೀರ್ಣ ನಿರ್ಮಿಸುವಷ್ಟು ಜಾಗ ಮತ್ತು ವಿಸ್ತಾರವಾದ ರಸ್ತೆ ಇಲ್ಲ. ರಸ್ತೆಗಳು ಚಿಕ್ಕದಾಗಿರುವ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ನಗರಸಭೆ ಸಭಾಂಗಣದ ಆವರಣದಲ್ಲಿಯೇ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದ್ದು, ಬ್ಯಾಂಕಿನವರು ಸಾಲ ಕೊಡಲು ಒಪ್ಪಿದ್ದಾರೆ ಎಂದು ಕೆ.ಶೇಷಾದ್ರಿ ಹೇಳಿದ್ದಕ್ಕೆ ಸರ್ವ ಸದಸ್ಯರು ಸಮ್ಮತಿ ಸೂಚಿಸಿದರು.

ರಾಜಕುಮಾರ್ ಕಾಂಪ್ಲೆಕ್ಸ್ ನವೀಕರಿಸಿ:

ಸದಸ್ಯ ಅಕ್ಲಿಂ ಮಾತನಾಡಿ, ಇದೊಂದು ಒಳ್ಳೆಯ ಯೋಜನೆಯಾಗಿದ್ದು ನಮ್ಮ ಸ್ವಾಗತವಿದೆ. ಈಗಿರುವ ರಾಜಕುಮಾರ್ ಕಾಂಪ್ಲೆಕ್ಸ್ ನ ಕೆಲ ಮಹಡಿಗಳು ಪಾಳು ಬಿದ್ದಿವೆ. ಅದನ್ನೂ ದುರಸ್ತಿ ಮಾಡಿ, ಬಾಡಿಗೆ ನೀಡಿದರೆ ನಗರಸಭೆಗೆ ಆದಾಯ ಬರುತ್ತದೆ. ಅದರ ಬಗ್ಗೆಯೂ ಗಮನ ಹರಿಸುವಂತೆ ಸಭೆಯ ಗಮನ ಸೆಳೆದರು.

ಇದಕ್ಕೆ ಅಧ್ಯಕ್ಷ ಕೆ.ಶೇಷಾದ್ರಿ ಪ್ರತಿಕ್ರಿಯಿಸಿ, ರಾಜಕುಮಾರ್ ಕಾಂಪ್ಲೆಕ್ಸ್ ದುರಸ್ತಿ ಬಗ್ಗೆಯೂ ಚರ್ಚೆ ನಡೆಸಲಾಗಿದ್ದು, ಕೆಲ ಸಮಸ್ಯೆಗಳಿಂದ ತಡವಾಗಿದೆ. ಮುಂದೆ ಅದನ್ನೂ ದುರಸ್ತಿ ಪಡಿಸಲಾಗುವುದು ಎಂದು ತಿಳಿಸಿದರು.

ಸದಸ್ಯ ಫೈರೋಜ್ ಪಾಷಾ ಮಾತನಾಡಿ, ಯುಐಡಿಎಫ್‌ ಕಾಮಗಾರಿಯ ಅವಧಿ 18 ತಿಂಗಳಾದರೂ, ಕೆಲವೆಡೆ ಇನ್ನೂ ತೆವಳುತ್ತಾ ಸಾಗುತ್ತಿದೆ. ಕೊತ್ತಿಪುರದ ಅಶ್ವತ್ಥ ಕಟ್ಟೆಯಿಂದ ಟಿಪ್ಪು ಮಸೀದಿವರೆಗೆ ರಸ್ತೆ ಮತ್ತು ಚರಂಡಿಯನ್ನು ಅಗೆಯಲಾಗಿದೆ. ರಸ್ತೆಗೆ ವೆಟ್‌ಮಿಕ್ಸ್ ಹಾಕಿದ್ದಾರೆ. ಚನ್ನಾಗಿದ್ದ ರಸ್ತೆಯನ್ನು ಕಿತ್ತು ಹಾಕಿದ್ದಾರೆ. ಇದರಿಂದ‌ ಜನ ನಮಗೆ ಉಗಿಯುತ್ತಿದ್ದಾರೆ. ಇಡೀ ಪ್ರದೇಶ ಹಾಳಾಗಿದ್ದು, ಜನರಿಗೆ ಉತ್ತರ ಕೊಡಲಾಗುತ್ತಿಲ್ಲ ಎಂದು ಗುತ್ತಿಗೆದಾರ ಮತ್ತು ಎಂಜಿನಿಯರ್ ವಿರುದ್ಧ ಆಕ್ರೋಶ ಹೊರಹಾಕಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆ.ಶೇಷಾದ್ರಿ, ಆ ಭಾಗದ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ಮೌಖಿಕವಾಗಿ ಸೂಚನೆ ನೀಡಿದ್ದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ನೋಟಿಸ್ ಜಾರಿ ಮಾಡಿ, ಇಲ್ಲ ನಿಮಗೂ ನೋಟಿಸ್ ಜಾರಿ ಮಾಡಬೇಕಾಗುತ್ತೆ. ನೀವು ಹೇಳಿದಂತೆ ಗುತ್ತಿಗೆದಾರ ಕೇಳಬೇಕೇ ಹೊರತು ಗುತ್ತಿಗೆದಾರ ಹೇಳಿದಂತೆ ನೀವೇಕೆ ಕೇಳುತ್ತೀರಾ ಎಂದು ಎಂಜಿನಿಯರ್‌ಗಳ ವಿರುದ್ಧ ಹರಿಹಾಯ್ದರು.

ಈ ವೇಳೆ ನಿಜಾಮುದ್ದೀನ್ ಷರೀಫ್ , ನನ್ನ ವಾರ್ಡಿನಲ್ಲಿ ಒಂದು ರಸ್ತೆ ಬಿಟ್ಟು ಬೇರೆಲ್ಲೂ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಕಳ್ಳರಿಗೆ ಗುತ್ತಿಗೆ ಕೆಲಸ ನೀಡಿದ್ದೀರಿ. ಮುಖ್ಯ ಗುತ್ತಿಗೆದಾರ ಇತ್ತ ತಲೆಹಾಕಿಯೂ ನೋಡಿಲ್ಲ. ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ನಾನೊಬ್ಬ ಸದಸ್ಯ ಅಂತ ಹೇಳಿಕೊಳ್ಳುವುದಕ್ಕೂ ನಾಚಿಕೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಿಜಾಮುದ್ದೀನ್ ಮಾತಿಗೆ ಧ್ವನಿಗೂಡಿಸಿದ ಫೈರೋಜ್ ಪಾಷ ಮತ್ತು ಅಕ್ಲಿಂ, ಮುಖ್ಯ ಗುತ್ತಿಗೆದಾರನ ಬಳಿ ಮಾತನಾಡಲು ಎಂಜಿನಿಯರ್ ಗಳಿಗೆ ಭಯ ಇರಬೇಕು. ಕಾಮಗಾರಿ ಸ್ಥಳದಲ್ಲಿ ಎಂಜಿನಿಯರ್ ಅಥವಾ ಮುಖ್ಯ ಗುತ್ತಿಗೆದಾರ ಇರುವುದಿಲ್ಲ ಎಂದು ಆರೋಪಿಸಿದಾಗ ಕೆ.ಶೇಷಾದ್ರಿ, ಸ್ಥಳಕ್ಕೆ ನಾನು ಮತ್ತು ಆಯುಕ್ತರು ಬಂದು ಪರಿಶೀಲಿಸುತ್ತೇವೆ. ಆಗ ಉಪಗುತ್ತಿಗೆದಾರನ ಬದಲು ಮುಖ್ಯ ಗುತ್ತಿಗೆದಾರ ಉದಯ್ ನನ್ನು ಕರೆಸಿ ಎಂದು ಎಂಜಿನಿಯರ್ ಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಆರೀಫ್ , ಆಯುಕ್ತ ಜಯಣ್ಣ ಉಪಸ್ಥಿತರಿದ್ದರು.

ಬಾಕ್ಸ್ ...............

ಕೌನ್ಸಿಲ್ ಒಪ್ಪಿಗೆ ಇಲ್ಲದೆ ಕಾಮಗಾರಿ ಕೈಗೆತ್ತಿಕೊಳ್ಳಬೇಡಿ

ರಾಮನಗರ: ನಗರಸಭೆ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ಇಲ್ಲದ ಯಾವುದೇ ಕೆಲಸಗಳನ್ನು ಆಯುಕ್ತರಾಗಲಿ ಅಥವಾ ಎಂಜಿನಿಯರ್ ಗಳಾಗಲಿ ಒಪ್ಪಿಕೊಳ್ಳಬಾರದು. ಕೌನ್ಸಿಲ್ ಒಪ್ಪಿಗೆ ಇಲ್ಲದೆ ಕಾಮಗಾರಿ ಕೈಗೆತ್ತಿಕೊಂಡರೆ ನೀವೇ ಹೊಣೆ ಆಗಬೇಕಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಎಚ್ಚರಿಸಿದರು.

ರೈಲ್ವೆ ನಿಲ್ದಾಣ ವೃತ್ತದಿಂದ ಚರ್ಚ್ ವರೆಗಿನ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಇಕ್ಬಾಲ್ ಹುಸೇನ್ ರವರ ಹೆಸರೇಳದೆ ಪರೋಕ್ಷವಾಗಿ ವಿಷಯ ಪ್ರಸ್ತಾಪಿಸಿದ ಸದಸ್ಯ ಅಕ್ಲಿಂ, ಒಂದೇ ಕೆಲಸಕ್ಕೆ ಎರಡೆರೆಡು ಬಾರಿ ಭೂಮಿ ನೆರವೇರಿಸುತ್ತಿದ್ದಾರೆ. ಬರೀ ಭೂಮಿ ಪೂಜೆ ಮಾಡಿಕೊಂಡು ಹೋದರೆ ಏನು ಪ್ರಯೋಜನ. ಜನರಿಗೆ ಏನಂತ ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು.

ಇದಕ್ಕೆ ಕೆ.ಶೇಷಾದ್ರಿ ಪ್ರತಿಕ್ರಿಯಿಸಿ ನಗರಸಭೆ ಒಪ್ಪಿಗೆ ಇಲ್ಲದೆ ಯಾವುದೇ ಕೆಲಸಗಳನ್ನು ಆಯುಕ್ತರಾಗಲಿ ಅಥವಾ ಎಂಜಿನಿಯರ್ ಗಳಾಗಲಿ ಒಪ್ಪಿಕೊಳ್ಳಬಾರದು. ನಮ್ಮ ಅವಧಿಯಲ್ಲೇ ಯುಐಡಿಎಫ್‌ ಕಾಮಗಾರಿಗಳನ್ನು‌ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

18ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ನಗರಸಭೆ ಸಭಾಂಗಣದಲ್ಲಿ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯಸಭೆ ನಡೆಯಿತು.