ಸಾರಾಂಶ
ತಾಲೂಕು ಕ್ರೀಡಾಂಗಣದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವಿದ್ಯುತ್ ಸಂಪರ್ಕ ಕಡಿತ ಮಾಡಿದೆ.
- ಬಯಲಾದ ಬಾಡಿಗೆ ದಂಧೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ತಾಲೂಕು ಕ್ರೀಡಾಂಗಣದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವಿದ್ಯುತ್ ಸಂಪರ್ಕ ಕಡಿತ ಮಾಡಿದೆ.ನಿಯಮಾನುಸಾರ ಬಾಡಿಗೆ ಪಾವತಿ ಮಾಡಿಲ್ಲ ಎಂದು ನೋಟಿಸ್ ಜಾರಿ ಮಾಡಿದರೂ ಪಾವತಿ ಮಾಡದೆ ಇರುವುದರಿಂದ ಈಗ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ.ಏನಿದು ಸಮಸ್ಯೆ:
ವಾಣಿಜ್ಯ ಮಳಿಗೆಗಳನ್ನು ಹರಾಜಿನಲ್ಲಿ ಬಾಡಿಗೆ ಪಡೆದವರು ವರ್ಷವಾದರೂ ಬಾಡಿಗೆ ಪಾವತಿ ಮಾಡಿಲ್ಲ. ಅಷ್ಟೇ ಅಲ್ಲ, ಬಾಡಿಗೆ ಕೇಳಲು ಹೋಗುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಿಬ್ಬಂದಿಗೆ ಧಮ್ಕಿ ಹಾಕಿದ್ದಾರೆ.ರಾಜಕೀಯ ಶಿಫಾರಸ್ಸು ತಂದು, ಬಾಡಿಗೆ ಪಾವತಿ ಮಾಡದೆ ಮುಂದುವರೆದಿದ್ದಾರೆ. ಹೀಗಾಗಿ, ಈಗ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಈಗ ಮೊದಲ ಹಂತವಾಗಿ ವಿದ್ಯುತ್ ಸಂಪರ್ಕ ಕಡಿತ ಮಾಡಿದೆ. ಈಗಲೂ ಪಾವತಿ ಮಾಡದೆ ಇದ್ದರೇ ಖಾಲಿ ಮಾಡಿಸಲು ನಿರ್ಧರಿಸಿದೆ.
₹90 ಸಾವಿರದಿಂದ ಬರೋಬ್ಬರಿ 2 ಲಕ್ಷದವರೆಗೂ ಬಾಡಿಗೆ ಕಟ್ಟುವುದು ಬಾಕಿ ಇದೆ. ಈಗ ಲಕ್ಷ ರುಪಾಯಿಗೂ ಅಧಿಕ ಬಾಕಿ ಇರುವ ಸುಮಾರು 17 ವಾಣಿಜ್ಯ ಮಳಿಗೆಗಳಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ. ಇದರಿಂದ ಅಂಗಡಿಗಳು ಬಂದ್ ಆಗಿವೆ.ಬಾಡಿಗೆ ದಂಧೆ:ಬಾಡಿಗೆ ಇರುವುದೇ ಬೇರೆ, ಬಿಡ್ ನಲ್ಲಿ ಬಾಡಿಗೆ ಪಡೆದಿರುವವರೇ ಬೇರೆ. ಕಡಿಮೆ ಬಾಡಿಗೆಗೆ ಮಳಿಗೆ ಪಡೆದು, ಅದನ್ನು ಹೆಚ್ಚು ಬಾಡಿಗೆಗೆ ನೀಡುವ ದಂಧೆ ಇಲ್ಲಿ ಬಯಲಾಗಿದೆ.
ಈಗ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಬಿಡ್ ನಲ್ಲಿ ಬಾಡಿಗೆ ಪಡೆದವರು ಇರುವುದು ಕೆಲವೇ ಕೆಲವರು. ಬಹುತೇಕರು ಬೇರೆಯವರೇ ಬಾಡಿಗೆ ಇದ್ದಾರೆ. ಇವರು ಬಿಡ್ ಮಾಡಿಕೊಂಡವರಿಗೆ ತಪ್ಪದೆ ಬಾಡಿಗೆ ಪಾವತಿ ಮಾಡಿದ್ದಾರೆ. ಆದರೆ, ಇವರು(ಮೂಲ ಬಾಡಿಗೆದಾರರು) ಸರ್ಕಾರಕ್ಕೆ ಬಾಡಿಗೆ ಪಾವತಿ ಮಾಡಿಲ್ಲ ಎನ್ನುವ ಆರೋಪವೂ ಇದೆ. ಈ ಬಗ್ಗೆ ಪರಿಶೀಲನೆ ಮಾಡಿದಾಗ ಸತ್ಯ ಗೊತ್ತಾಗುತ್ತದೆ.ಶೀಘ್ರ ಖಾಲಿ:ಈಗ ಪ್ರಾರಂಭದಲ್ಲಿ ಕೇವಲ ವಿದ್ಯುತ್ ಕಡಿತ ಮಾಡಲಾಗಿದೆ. ತಿಂಗಳೊಳಗಾಗಿ ಪಾವತಿ ಮಾಡದೆ ಇದ್ದರೇ ಖಾಲಿ ಮಾಡಿಸಲು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ನಿರ್ಧರಿಸಿದೆ.ಈಗಾಗಲೇ ಈ ಕುರಿತು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆ. ಜಿಲ್ಲಾಧಿಕಾರಿ ಸಹ ಸರ್ಕಾರಕ್ಕೆ ನಷ್ಟ ಮಾಡುವುದಕ್ಕೆ ಅವಕಾಶ ನೀಡಬೇಡಿ, ತಕ್ಷಣ ಕ್ರಮವಹಿಸಿ ಎಂದು ಹೇಳಿದ್ದಾರೆ.ಶಾಸಕರ ಮಧ್ಯೆ ಪ್ರವೇಶ: ಶಾಸಕ ರಾಘವೇಂದ್ರ ಹಿಟ್ನಾಳ ಈ ಹಿಂದೆ ಮಧ್ಯೆ ಪ್ರವೇಶ ಮಾಡಿ, ಸಮಯವಕಾಶ ಕೊಡಿ ಎಂದು ಹೇಳಿದ್ದರು. ಅದರಂತೆ ಸಮಯವಕಾಶ ನೀಡಲಾಗಿದೆ. ಆದರೂ ಪಾವತಿ ಮಾಡದೆ ಇರುವುದರಿಂದ ಅವರು ಸಹ ನಿಯಮಾನುಸಾರ ಕ್ರಮವಹಿಸಿ ಎಂದಿದ್ದಾರೆ ಎನ್ನಲಾಗಿದೆ.