ಮಾನವ ಹಕ್ಕುಗಳ ರಕ್ಷಣೆಗೆ ಆಯೋಗ ಬದ್ಧ: ಸುರೇಶ ಒಂಟಿಗೋಡಿ

| Published : Mar 08 2024, 01:47 AM IST

ಸಾರಾಂಶ

. ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಉಲ್ಲಂಘನೆ ಸಲ್ಲ. ಹಕ್ಕುಗಳ ಉಲ್ಲಂಘಿಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸುರೇಶ ಒಂಟಿಗೋಡಿ ಭರವಸೆ ನೀಡಿದರು.

ಮಾನವ ಹಕ್ಕುಗಳು-ಸಂವಿಧಾನ ಗೋಷ್ಠಿಯಲ್ಲಿ ಆಯೋಗದ ಸದಸ್ಯ ಸುರೇಶ ಒಂಟಿಗೋಡಿಕನ್ನಡಪ್ರಭ ವಾರ್ತೆ ಧಾರವಾಡ

ಮಾನವ ಹಕ್ಕುಗಳ ರಕ್ಷಣೆಗೆ ಆಯೋಗ ಬದ್ಧವಾಗಿದೆ. ಹಕ್ಕುಗಳ ಉಲ್ಲಂಘನೆಯ ವಿರುದ್ಧ ದೂರು ನೀಡಿದರೆ, ನ್ಯಾಯ ಒದಗಿಸುವ ಕೆಲಸ ಮಾಡಲಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸುರೇಶ ಒಂಟಿಗೋಡಿ ಭರವಸೆ ನೀಡಿದರು.

ಇಲ್ಲಿಯ ಜೆಎಸ್ಸೆಸ್ಸ್‌ ಸಂಸ್ಥೆಯ ಸನ್ನಿಧಿ ಕಲಾಕ್ಷೇತ್ರದಲ್ಲಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗುರುವಾರ ಮಾನವ ಹಕ್ಕುಗಳು-ಸಂವಿಧಾನ ಗೋಷ್ಠಿಯಲ್ಲಿ ಮಾತನಾಡಿದರು.

ಸರ್ವರು ಮಾನವ ಹಕ್ಕುಗಳನ್ನು ಗೌರವಿಸಬೇಕು. ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಉಲ್ಲಂಘನೆ ಸಲ್ಲ. ಹಕ್ಕುಗಳ ಉಲ್ಲಂಘಿಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಿದೆ. ಹೀಗಾಗಿ ನೊಂದವರು ಧೈರ್ಯವಾಗಿ ದೂರು ನೀಡುವಂತೆ ಹೇಳಿದರು.

ಮಾನವ ಹಕ್ಕು ಸಂರಕ್ಷಣೆ, ಉಲ್ಲಂಘನೆ ತಡೆ, ಉಲ್ಲಂಘನೆಯಲ್ಲಿ ನೊಂದವರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವಲ್ಲಿ ಆಯೋಗ ಕೆಲಸ ಮಾಡುತ್ತಿದೆ. ಪ್ರತಿ ನಾಗರಿಕರು ಮಾನವ ಹಕ್ಕುಗಳ ಬಗ್ಗೆ ಮಹತ್ವ ಅರಿತು ನಡೆಯುವಂತೆ ಸಲಹೆ ನೀಡಿ, ಆಯೋಗದ ರಚನೆ ಕುರಿತು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮಾನವ ಹಕ್ಕುಗಳ ಆಯೋಗದ ಇನ್ನೋರ್ವ ಸದಸ್ಯ ಡಾ. ಟಿ. ಶ್ಯಾಮ ಭಟ್ಟ ಮಾತನಾಡಿದರು. ಸರ್ವಾಧ್ಯಕ್ಷ ಡಾ. ಕೆ.ಎ.ಎಸ್. ಶರ್ಮಾ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಪೊಲೀಸಪಾಟೀಲ, ಹಿರಿಯ ಪತ್ರಕರ್ತ ಗಿರೀಶ ಪಟ್ಟಣಶೆಟ್ಟಿ, ಡಾ. ಡಿ.ಪಿ. ಚೌರಿ, ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಲಿಂಗಯ್ಯ ಹಿರಮೇಠ ಇದ್ದರು. ಗುರುರಾಜ ಸಬನಿಸ್ ಸ್ವಾಗತಿಸಿದರು. ಪೂರ್ಣಿಮಾ ಮುತ್ನಾಳ ನಿರೂಪಿಸಿದರು. ಏಕನಾಥ ಸಿಂಪಿ ನಿರ್ವಹಿಸಿದರು. ಪ್ರವೀಣ ಪವಾರ ವಂದಿಸಿದರು.ಹೆಣ್ಣಿನ ಬದುಕಿನಲ್ಲಿ ಯಾವ ಬದಲಾವಣೆಗಳಾಗಿಲ್ಲ: ವಿನಯಾ ವಕ್ಕುಂದ

ಕನ್ನಡಪ್ರಭ ವಾರ್ತೆ ಧಾರವಾಡ

ಜಗತ್ತಿನ ಎಲ್ಲ ಚಳವಳಿಗಳು ಮಹಿಳೆಯರನ್ನು ಬಳಸಿಕೊಂಡಿವೆಯೇ ವಿನಃ ಈ ಯಾವ ಚಳುವಳಿಗಳು ಮಹಿಳಾ ಸಮುದಾಯಕ್ಕೆ ಯಾವ ಕೊಡುಗೆ ನೀಡಿಲ್ಲ. ಅವಳ ಬದುಕಿನಲ್ಲಿ ಬಹುದೊಡ್ಡ ಪಲ್ಲಟವೂ ತಂದುಕೊಟ್ಟಿಲ್ಲ ಎಂದು ಸಾಹಿತಿ ಡಾ.ವಿನಯಾ ವಕ್ಕುಂದ ಬೇಸರ ವ್ಯಕ್ತಪಡಿಸಿದರು.

ಇಲ್ಲಿಯ ಸನ್ನಿಧಿ ಕಲಾಕ್ಷೇತ್ರದ ನಡೆದ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗುರುವಾರ ''''ಮಹಿಳಾ ಸಂವೇದನೆ'''' ಗೋಷ್ಠಿಯಲ್ಲಿ ವಚನ ಸಾಹಿತ್ಯದಲ್ಲಿ ಮಹಿಳಾ ಸಂವೇದನೆಗಳ ಬಗ್ಗೆ ಮಾತನಾಡಿದ ಅವರು, ಹೆಣ್ಣು ಒಂದು ಬೋನಿನಿಂದ ಮತ್ತೊಂದು ಬೋನಿಗೆ ಸ್ಥಳಾಂತರವಾಗಿದ್ದಾಳೆ ವಿನಃ ಅವಳ ಬದುಕಿನಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಆಧುನಿಕ ಕಾಲದಲ್ಲೂ ಹೆಣ್ಣನ್ನು ದೇವರು ಮತ್ತು ದೇವಸ್ಥಾನಗಳಿಂದ ನಿರ್ಬಂಧ ವಿಧಿಸಿರುವುದು ಖೇದ ವ್ಯಕ್ತಪಡಿಸಿದರು.

ನಾವು ಹೊರಗೆ ಆಧುನೀಕರಾಗಿ, ಒಳಗೆ ಸನಾತನವಾದಿಗಳಾಗಿ ಇರುವುದೇ ಹೆಣ್ಣಿನ ಸ್ಥಿತಿಗತಿ ಬದಲಾಗದೇ ಇರವುದಕ್ಕೆ ಕಾರಣ. ಇದಕ್ಕೆ ಜಾತಿ, ಲಿಂಗ ಮತ್ತು ವರ್ಗಗಳು ಎಂಬ ರೋಗಗಳು ಹೊಸ ಶಕ್ತಿ ರೂಪ ಪಡೆಯುತ್ತಿರುವುದು ಪ್ರಮುಖ ಕಾರಣ ಎಂದ ಅವರು, 900 ವರ್ಷಗಳ ಹಿಂದಿನ ವಚನ ಸಾಹಿತ್ಯ ಆಧುನಿಕ ಮಹಿಳಾ ಸಂವೇದನೆಗೆ ಬಹಳಷ್ಟು ಹತ್ತಿರವಿದೆ. ವಚನ ಸಾಹಿತ್ಯ ಹೇಗೆ ಇದೆಯೋ, ಹಾಗೆಯೇ ಸ್ವೀಕರಿಸಬೇಕಿದೆ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಡೀನ್ ಡಾ. ಜಯಶ್ರೀ ಶಿವಾನಂದ ಮಾತನಾಡಿ, ಪುರುಷ ಸಮಾಜ ಮಹಿಳಾ ಸಮುದಾಯದ ಭಾವನೆಗಳು, ತಲ್ಲಣ ಗಮನಿಸುವುದಿಲ್ಲ. ಮಹಿಳೆಯರ ಸ್ಥಾನದಲ್ಲಿ ನಿಂತು ಅವರ ಸಮಸ್ಯೆ ಅರಿತು, ಸ್ಪಂದಿಸುವ ಗುಣ ಸಮಾಜ ಬೆಳೆಸಿಕೊಳ್ಳಬೇಕು ಎಂದರು.

ಡಾ. ವೀಣಾ ಯಲಿಗಾರ ''''ಮಹಿಳೆಯರ ರಕ್ಷಣೆಯಲ್ಲಿ ಸಮಾಜದ ಹೊಣೆಗಾರಿ'''' ಬಗ್ಗೆ ವಿಷಯ ಮಂಡಿಸಿದರು. ಕವಿವಿ ಕಾನೂನು ಕಾಲೇಜು ಪ್ರಾಚಾರ್ಯ ಡಾ. ಮಂಜುಳಾ ಎಸ್.ಆರ್., ಮಹಾಂತ ಕಾಲೇಜಿನ ಪ್ರಾಚಾರ್ಯ ಡಾ. ಕೆ. ಶಾಂತಯ್ಯ ಇದ್ದರು. ಲಲಿತಾ ಸಾಲಿಮಠ ಸ್ವಾಗತಿಸಿದರು. ಎನ್.ಎಸ್. ಮೇಲ್ಮುರಿ ನಿರೂಪಿಸಿದರು. ಅನೃತೇಶ ಶೆಟ್ಟರ ಮತ್ತು ಮಾರ್ತಾಂಡಪ್ಪ ಕತ್ತಿ ನಿರ್ವಹಿಸಿದರು. ವಿ.ಡಿ.ಅಂದಾನಿಗೌಡ್ರ ವಂದಿಸಿದರು.