- ವಯೋನಿವೃತ್ತ ವ್ಯವಸ್ಥಾಪಕ ಟಿ.ಸಿ.ಬಸವರಾಜಯ್ಯ, ಪೌರ ಕಾರ್ಮಿಕರಾದ ಹಿರಿಯವ್ವಗೆ ಬೀಳ್ಕೊಡುಗೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಮಹಾ ಜನರಿಗೆ ಉತ್ತಮ ಸೇವೆ ಕೊಡುವ ನಿಟ್ಟಿನಲ್ಲಿ ಪೌರ ಕಾರ್ಮಿಕರಿಂದ ಆಯುಕ್ತರವರೆಗೆ ನೀವು, ನಾವೆಲ್ಲರೂ ಸೇರಿ, ಉತ್ತಮವಾಗಿ ಕೆಲಸ ಮಾಡೋಣ ಎಂದು ಪಾಲಿಕೆ ಆಯುಕ್ತ ಡಾ. ಎನ್.ಮಹಾಂತೇಶ ಪಾಲಿಕೆ ಅಧಿಕಾರಿ, ಸಿಬ್ಬಂದಿಗೆ ಹೇಳಿದರು.
ನಗರದ ಪಾಲಿಕೆ ಸಭಾಂಗಣದಲ್ಲಿ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ, ದಾವಣಗೆರೆ ಪಾಲಿಕೆ ಕಚೇರಿ ವ್ಯವಸ್ಥಾಪಕರಾಗಿ ಸೇವೆಯಿಂದ ನಿವೃತ್ತರಾದ ಟಿ.ಸಿ.ಬಸವರಾಜಯ್ಯ ಹಾಗೂ ಆರೋಗ್ಯ ಶಾಖೆಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾದ ಹಿರಿಯವ್ವ ಅವರಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಟಿ.ಸಿ. ಬಸವರಾಜಯ್ಯ ತಮ್ಮ ಸುದೀರ್ಘ ಸೇವೆಯಲ್ಲಿ ಎಲ್ಲರಿಗೂ ಪ್ರೇರಣೆಯಾಗಿದ್ದರು ಎಂದರು.ಟಿ.ಸಿ. ಬಸವರಾಜಯ್ಯನವರ ನಿವೃತ್ತಿ ಜೀವನ ಸುಖಮಯವಾಗಿರಲಿ. ಚುನಾವಣೆ, ಗಣತಿ, ಸಮೀಕ್ಷೆ ಸೇರಿದಂತೆ ಯಾವುದೇ ಕೆಲಸ, ಕಾರ್ಯಗಳ ವೇಳೆ ತ್ವರಿತರಾಗಿ ಕೆಲಸ ಆಗುವಂತೆ ನೋಡಿಕೊಳ್ಳುವಂತಹ ಹಿರಿಯ ಅನುಭವಿ ಅಧಿಕಾರಿಯಾಗಿದ್ದ ಬಸವರಾಜಯ್ಯ ಅವರ ಸೇವೆಯನ್ನು ನಾವು ಅವಶ್ಯಕತೆ ಇದ್ದಾಗ ಬಳಸಿಕೊಳ್ಳುತ್ತೇವೆ. ಪಾಲಿಕೆಯಲ್ಲಿ ಗುತ್ತಿಗೆ ನೌಕರನಾಗಿ ಸೇರಿಕೊಂಡು, ಕಚೇರಿ ವ್ಯವಸ್ಥಾಪಕ ಆಗುವವರೆಗೂ ಬಸವರಾಜಯ್ಯ ಸೇವೆ ಅವಿಸ್ಮರಣೀಯವಾದುದು ಎಂದು ತಿಳಿಸಿದರು.
ದೂಡಾ ಆಯುಕ್ತೆ ರೇಣುಕಾ ಮಾತನಾಡಿ, ಪಾಲಿಕೆಯಲ್ಲಿ ತಾವು ಆಯುಕ್ತರಿದ್ದಾಗ ಅನೇಕ ನೌಕರರನ್ನು ಕಾಯಂ ನೌಕರರಾಗಿ ಮಾಡಿದೆವು. ಅದರಲ್ಲಿ ಟಿ.ಸಿ. ಬಸವರಾಜಯ್ಯನವರ ಪರಿಶ್ರಮ ಹೆಚ್ಚಾಗಿದೆ. ದಾವಣಗೆರೆಯಲ್ಲಿ ನಾವು ಕಾಯಂ ಮಾಡಿದ ವಿಧಾನ ಹೇಗೆಂದು ಬೇರೆ ಮಹಾನಗರ ಪಾಲಿಕೆ ಅಧಿಕಾರಿಗಳು ಸಹ ನಮಗೆ ಕೇಳುವಷ್ಟರ ಮಟ್ಟಿಗೆ ಅತ್ಯುತ್ತಮವಾಗಿ, ಜಾಣ್ಮಯಿಂದ ಕೆಲಸ ಮಾಡಿದ್ದರು. ಬೆಟ್ಟದಷ್ಟು ಕೆಲಸವಿದ್ದರೂ ಶಾಂತಿ, ಸಮಾಧಾನದಿಂದ ನಿರ್ವಹಿಸುವ ಮೂಲಕ ಗಮನ ಸೆಳೆಯುತ್ತಿದ್ದವರು ಬಸವರಾಜಯ್ಯ ಎಂದು ಹೇಳಿದರು.
ರಾಜ್ಯಮಟ್ಟದ ಪಾಲಿಕೆ ಅದಿಕಾರಿ, ಸಿಬ್ಬಂದಿ ಕ್ರೀಡಾಕೂಟವನ್ನು ದಾವಣಗೆರೆ ಪಾಲಿಕೆಯಿಂದ ನಡೆಸಲು ಸಂಘದ ಕೆ.ಎಸ್. ಗೋವಿಂದರಾಜು, ಟಿ.ಸಿ. ಬಸವರಾಜಯ್ಯ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದರು. ಆಗ ಸಮಿತಿಗಳನ್ನು ರಚಿಸಿ, ಇಡೀ ರಾಜ್ಯಕ್ಕೆ ಮಾದರಿ ಆಗುವಂತಹ ಕ್ರೀಡಾಕೂಟವನ್ನು ದಾವಣಗೆರೆ ಪಾಲಿಕೆ ಯಶಸ್ವಿಯಾಗಿಸಿತು. ಆಗಲೂ ಯುವಕರ ರೀತಿ ಬಸವರಾಜಯ್ಯ ಕ್ರೀಡಾಕೂಟದುದ್ದಕ್ಕೂ ಸಂಭ್ರಮಿಸಿದ್ದನ್ನು ಕಂಡಿದ್ದೇವೆ. ಇಂತಹ ಉತ್ಸಾಹ ಎಲ್ಲರಲ್ಲೂ ನಿರಂತರವಾಗಿರಲಿ ಎಂದು ಸಲಹೆ ನೀಡಿದರು.
ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭದ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ಮಾತನಾಡಿ, ಹಿಂದೆ ಪಾಲಿಕೆ ನೌಕರರಾಗಿದ್ದ ತಿಪ್ಪೇಸ್ವಾಮಿಯವರ ಮಗ ಟಿ.ಸಿ.ಬಸವರಾಜಯ್ಯ ಜನಾನುರಾಗಿ ಅಧಿಕಾರಿ. ಪಾಲಿಕೆಯಲ್ಲಿ ಇಂತಹ ಅಧಿಕಾರಿ, ಸಿಬ್ಬಂದಿ ಸಂಖ್ಯೆ ಹೆಚ್ಚಾಗಬೇಕಿದೆ. ಸಾರ್ವಜನಿಕರು ಯಾವುದೇ ಕೆಲಸ, ಕಾರ್ಯಕ್ಕೆ ಬಂದಾಗ ಇಲ್ಲಿ ಅಧಿಕಾರಿ, ಸಿಬ್ಬಂದಿ ಜನಸ್ನೇಹಿಯಾಗಿ ಸ್ಪಂದಿಸುವ ಮೂಲಕ ಕೆಲಸ, ಕಾರ್ಯ ಮಾಡಿಕೊಡಬೇಕು. ಬಸವರಾಜಯ್ಯ ವಯೋನಿವೃತ್ತರಾದರೂ ಪಾಲಿಕೆ ಕಿರಿಯ ಅಧಿಕಾರಿ, ಸಿಬ್ಬಂದಿಗೆ ಸದಾ ಮಾರ್ಗದರ್ಶನ ನೀಡುವಂತಾಗಲಿ ಎಂದರು.ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ ಅಧ್ಯಕ್ಷತೆ ವಹಿಸಿದ್ದರು. ಉಪ ಆಯುಕ್ತರಾದ ಸಿ.ಮಂಜುಳಾ ದೇವಿ, ಎಂ.ಎಚ್. ಉದಯಕುಮಾರ, ಬಿ.ಮನೋಹರ, ಮುಖ್ಯ ಲೆಕ್ಕಾಧಿಕಾರಿ ಡಿ.ಪ್ರಿಯಾಂಕ, ಸಂಘದ ಪಾಂಡುರಾಜ, ಹಿರಿಯ ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್, ಪೌರ ಕಾರ್ಮಿಕರ ಸಂಘದ ರಾಜ್ಯ ನಾಯಕ ಎಲ್.ಎಂ. ಹನುಮಂತಪ್ಪ, ಪಾಲಿಕೆ ಮಾಜಿ ಸದಸ್ಯರಾದ ಕೆ.ಎಂ.ವೀರೇಶ, ಎಲ್.ಎಂ.ಎಚ್.ಸಾಗರ್, ಅಸ್ಲಂ ಇತರರು ಇದ್ದರು.
- - --3ಕೆಡಿವಿಜಿ5: ದಾವಣಗೆರೆ ಪಾಲಿಕೆಯಲ್ಲಿ ಕಚೇರಿ ವ್ಯವಸ್ಥಾಪಕ ಟಿ.ಸಿ. ಬಸವರಾಜಯ್ಯ ಸೇವೆಯಿಂದ ನಿವೃತ್ತರಾದ ಹಿನ್ನೆಲೆ ಅವರನ್ನು ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಅಧಿಕಾರಿಗಳು, ಕುಟುಂಬದವರು ಇದ್ದರು.