ಪಾಲಿಕೆ ಅತ್ಯುತ್ತಮ ಸಾಧನೆ: ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ ಆಯುಕ್ತೆ

| Published : Jul 18 2025, 12:45 AM IST

ಪಾಲಿಕೆ ಅತ್ಯುತ್ತಮ ಸಾಧನೆ: ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ ಆಯುಕ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಸ್ವಚ್ಛ ಸರ್ವೇಕ್ಷಣೆ 2024ರ ಸ್ವಚ್ಛತಾ ಸಮೀಕ್ಷೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಸ್ವಚ್ಛತೆ ಹಾಗೂ ಘನತ್ಯಾಜ್ಯ ನಿರ್ವಹಣೆಯಲ್ಲಿ ತೋರಿದ ಅತ್ಯುತ್ತಮ ಸಾಧನೆಗೆ ರಾಷ್ಟ್ರಮಟ್ಟದಲ್ಲಿ 32ನೇ ಸ್ಥಾನ ಹಾಗೂ ಕರ್ನಾಟಕ ರಾಜ್ಯಮಟ್ಟದಲ್ಲಿ ಅಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

- ಸ್ವಚ್ಛತೆ, ಘನತ್ಯಾಜ್ಯ ನಿರ್ವಹಣೆಯಲ್ಲಿ ರಾಜ್ಯಕ್ಕೆ ಅಗ್ರ, ರಾಷ್ಟ್ರಮಟ್ಟದಲ್ಲಿ 32ನೇ ಸ್ಥಾನದ ಸಾಧನೆ । ಕೇಂದ್ರ ಸಚಿವ ಮನೋಹರ ಲಾಲ್ ಶ್ಲಾಘನೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದಲ್ಲಿ ಸ್ವಚ್ಛ ಸರ್ವೇಕ್ಷಣೆ 2024ರ ಸ್ವಚ್ಛತಾ ಸಮೀಕ್ಷೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಸ್ವಚ್ಛತೆ ಹಾಗೂ ಘನತ್ಯಾಜ್ಯ ನಿರ್ವಹಣೆಯಲ್ಲಿ ತೋರಿದ ಅತ್ಯುತ್ತಮ ಸಾಧನೆಗೆ ರಾಷ್ಟ್ರಮಟ್ಟದಲ್ಲಿ 32ನೇ ಸ್ಥಾನ ಹಾಗೂ ಕರ್ನಾಟಕ ರಾಜ್ಯಮಟ್ಟದಲ್ಲಿ ಅಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯು 2024-25ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆಯಲ್ಲಿ ಸ್ವಚ್ಛತೆ ಹಾಗೂ ಘನತ್ಯಾಜ್ಯ ನಿರ್ವಹಣೆಯ ಅತ್ಯುತ್ತಮ ಸಾಧನೆಗಾಗಿ ಕೇಂದ್ರ ಸರ್ಕಾರದ ಪ್ರಶಸ್ತಿಗೆ ಪಾತ್ರವಾಗಿದೆ.

ಕೇಂದ್ರ ಸಚಿವ ಮನೋಹರ ಲಾಲ್ ಅವರು ಪ್ರಶಸ್ತಿಯನ್ನು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್‌, ಸ್ವಚ್ಛ ಭಾರತ್ ಮಿಷನ್ ನಿರ್ದೇಶಕ ಸೆಲ್ವಮಣಿ, ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಜನತೆ ಪರವಾಗಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಸ್ವೀಕರಿಸಿದರು.

ಪಾಲಿಕೆ ಎಇಇ ಎಸ್.ಆರ್‌. ಜಗದೀಶ, ಪರಿಸರ ಅಭಿಯಂತರ ಬಸವಣ್ಣ, ಎಸ್‌ಡಬ್ಲ್ಯುಎಂ ಎಕ್ಸಪರ್ಟ್‌ ಜಿ.ಡಿ.ಚೈತ್ರಾ, ಆರೋಗ್ಯ ನಿರೀಕ್ಷಕರಾದ ಮಲ್ಲಿಕಾ ಗುಡೇಕೋಟಿ, ಶಶಿಧರ ಎಸ್.ಬಳಿಗಾರ, ಜೆ.ಎಚ್‌.ನಿಖಿಲ್, ಜಿ.ರಾಘವೇಂದ್ರ, ಪೌರ ಕಾರ್ಮಿಕರಾದ ಎನ್.ಶಿವರಾಜ, ಕೆ.ಸಿ.ನಿಖಿಲ್, ಎನ್.ಶಿವರಾಜ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸುವ ಮೂಲಕ ಸಂಭ್ರಮಿಸಿದರು.

ಪ್ರಶಸ್ತಿ ಸ್ವೀಕರಿಸಿದ ಪಾಲಿಕೆ ಆಯುಕ್ತರಾದ ರೇಣುಕಾ, ಸ್ವಚ್ಚ ಸರ್ವೇಕಣೆ-2024ರ ಸ್ವಚ್ಛತಾ ಸಮೀಕ್ಷೆಯಲ್ಲಿ ದಾವಣಗೆರೆ ಮಹಾ ನಗರ ಪಾಲಿಕೆ ಸ್ವಚ್ಛತೆ ಹಾಗೂ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆಗಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಲಭಿಸಿದೆ. ಈ ಸಾಧನೆಗೆ ಪೂರಕವಾಗಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಘನ ತ್ಯಾಜ್ಯ ನಿರ್ವಹಣಾ ಕಾಮಗಾರಿ ಅನುಷ್ಠಾನ, ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹ, ಮೂಲದಲ್ಲೇ ತ್ಯಾಜ್ಯ ವಿಂಗಡಣೆ ಹಾಗೂ ಸಂಸ್ಕರಣೆಯೊಂದಿಗೆ ನಗರ ಸ್ವಚ್ಛತೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಹಕರಿಸಿದ ಎಲ್ಲರಿಗೂ ಹೃತ್ಫೂರ್ವಕ ಧನ್ಯವಾದಗಳು ಎಂದರು.

ದಾವಣಗೆರೆ ನಗರದ ಸಾರ್ವಜನಿಕರಿಗೆ, ಪೌರಕಾರ್ಮಿಕರು, ವಾಹನ ಚಾಲಕರು, ಕ್ಲೀನರ್ಸ್‌, ಲೋಡರ್ಸ್, ಆರೋಗ್ಯ ನಿರೀಕ್ಷಕರು, ಎಲ್ಲ ಸ್ವಚ್ಛತಾ ಸಿಬ್ಬಂದಿ ಹಾಗೂ ಅಭಿಯಂತರರು, ಸಿಬ್ಬಂದಿ ವರ್ಗಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ. ವಿಶೇಷವಾಗಿ ಈ ಸಾಧನೆಗಾಗಿ ಆರೋಗ್ಯ ಶಾಖೆ ತಂಡದೊಂದಿಗೆ ಶ್ರಮಿಸಿ ಮುನ್ನಡೆಸಿದ ನಮ್ಮೆಲ್ಲಾ ಕಾರ್ಯಗಳನ್ನು ಸದಾ ಪ್ರೋತ್ಸಾಹಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಪಾಲಿಕೆಯ ಎಲ್ಲ ಮಾಜಿ ಸದಸ್ಯರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಹೇಳಿದ್ದಾರೆ.

- - -

(ಬಾಕ್ಸ್‌) * ಇನ್ನೂ ಉತ್ತಮ ಸಾಧನೆ ಸಂಕಲ್ಪ: ಆಯುಕ್ತೆ ರೇಣುಕಾರಾಷ್ಟ್ರಮಟ್ಟದಲ್ಲಿ 32ನೇ ಸ್ಥಾನ, ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಸಿಕ್ಕಿರುವುದು ಕಡಿಮೆ ಸಾಧನೆಯೇನಲ್ಲ. ಸ್ವಚ್ಛ ಸರ್ವೇಕಣಾ ಅಭಿಯಾನವು ಪ್ರತಿ ವರ್ಷ ನಡೆಸುವ ಸ್ವಚ್ಛತೆ ಮತ್ತು ನೈರ್ಮಲ್ಯದ ಸಮೀಕ್ಷೆಯಲ್ಲಿ ದಾವಣಗೆರೆ ಪಾಲಿಕೆ ಪರಿಶ್ರಮ, ಸಾಧನೆ ಪ್ರಶಸ್ತಿಗೆ ಕಾರಣವಾಗಿದೆ. ನಗರವನ್ನು ಸ್ವಚ್ಛವಾಗಿಟ್ಟು, ಜನರ ಆರೋಗ್ಯ ಕಾಪಾಡುವ ಹಾಗೂ ಜನರ ಜೀವನಮಟ್ಟ ಸುಧಾರಿಸುವುದು ಅಭಿಯಾನ ಮತ್ತು ಸಮೀಕ್ಷೆಯ ಉದ್ದೇಶವಾಗಿದೆ. ಪ್ರಶಸ್ತಿಯು ದಾವಣಗೆರೆ ಪಾಲಿಕೆ ಹಾಗೂ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಮಹಾಜನತೆ ಸಹಕಾರದಲ್ಲಿ ಪಾಲಿಕೆ ಇನ್ನೂ ಉತ್ತಮ ಸಾಧನೆ ಮಾಡುವ ಸಂಕಲ್ಪ ಮಾಡಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.

- - -

-17ಕೆಡಿವಿಜಿ8:

ದೆಹಲಿಯ ವಿಜ್ಞಾನ ಭವನದಲ್ಲಿ ಸ್ವಚ್ಛ ಸರ್ವೇಕ್ಷಣೆ 2024ರ ಸ್ವಚ್ಛತಾ ಸಮೀಕ್ಷೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಸ್ವಚ್ಛತೆ ಹಾಗೂ ಘನತ್ಯಾಜ್ಯ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆ ತೋರಿ, ರಾಷ್ಟ್ರ ಮಟ್ಟದಲ್ಲಿ 32ನೇ ಸ್ಥಾನ ಹಾಗೂ ಕರ್ನಾಟಕ ರಾಜ್ಯ ಮಟ್ಟದಲ್ಲಿ ಅಗ್ರ ಪ್ರಶಸ್ತಿಗೆ ಭಾಜವಾಗಿದ್ದು, ಪಾಲಿಕೆ ಆಯುಕ್ತರಾದ ರೇಣುಕಾ ಮಹಾನಗರದ ಜನತೆ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.