ನಶಾ ಮುಕ್ತ ಗ್ರಾಮಕ್ಕಾಗಿ ಪಣತೊಡಿ: ಬಾಗಲಿ

| Published : Nov 01 2025, 02:45 AM IST

ಸಾರಾಂಶ

ನಶೆಯ ಮೂಲ ಹಾಗೂ ಕ್ಯಾನ್ಸರ್ ಕಾರಕಗಳು ಮತ್ತು ಅವುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳು ಕುರಿತು ಸಮಗ್ರ ಮಾಹಿತಿ

ಕುಷ್ಟಗಿ: ಗ್ರಾಮವನ್ನು ನಶಾಮುಕ್ತ ಗ್ರಾಮವನ್ನಾಗಿ ಮಾಡುವಲ್ಲಿ ಎಲ್ಲರೂ ಪಣತೊಡಬೇಕು ಎಂದು ಮುಖ್ಯೋಪಾಧ್ಯಾಯ ಬಸವರಾಜ ಬಾಗಲಿ ಹೇಳಿದರು.

ತಾಲೂಕಿನ ಬಿಜಕಲ್ಲ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಶಾಮುಕ್ತ ಭಾರತ ಅಭಿಯಾನದ ಅಂಗವಾಗಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯು ಅಭಿಯಾನದ ಪ್ರತಿಜ್ಞೆ ಮಾಡುವ ಮೂಲಕ ಮನೆ ಹಾಗೂ ಸುತ್ತಮುತ್ತಲಿನ ವಾತಾವರಣದಲ್ಲಿ ನಶೆ ಮುಕ್ತ ವಾತಾವರಣ ನಿರ್ಮಿಸುವ ಮೂಲಕ ಇಡೀ ಸಮಾಜವನ್ನು ನಂತರ ಗ್ರಾಮವನ್ನು ನಶಾ ಮುಕ್ತಗೊಳಿಸಿ ಈ ಅಭಿಯಾನದ ಯಶಸ್ವಿಗೆ ಕಾರಣಿಭೂತರಾಗಬೇಕೆಂದು ಹೇಳಿದರು.

ಆರೋಗ್ಯ ಕೇಂದ್ರದ ಸಿಬ್ಬಂದಿ ಉಮೇಶ ಮಾತನಾಡಿ, ನಶೆಯ ಮೂಲ ಹಾಗೂ ಕ್ಯಾನ್ಸರ್ ಕಾರಕಗಳು ಮತ್ತು ಅವುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳು ಕುರಿತು ಸಮಗ್ರ ಮಾಹಿತಿ ನೀಡಿದರು.

ಜಾಗೃತಿ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು, ಶಿಕ್ಷಕ ವಿಜಯಕುಮಾರ್ ಬಿರಾದಾರ್ ನಶಾ ಮುಕ್ತ ಭಾರತ ಅಭಿಯಾನದ ಪ್ರತಿಜ್ಞಾವಿಧಿ ಬೋಧಿಸಿದರು,

ಈ ಸಂದರ್ಭದಲ್ಲಿ ಶಿಕ್ಷಕ ಸಂತೋಷ್ ನಾಗಲೋಟಿ, ಮಹಾಂತಯ್ಯ ಮಾಲಿಪಾಟೀಲ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.