ಸಾರಾಂಶ
ಸಿದ್ದಾಪುರ: ಸರ್ಕಾರ ಮತ್ತು ನ್ಯಾಯಾಲಯದ ನಿಯಮಗಳನ್ನು ನಾವೆಲ್ಲರೂ ಪಾಲಿಸಲು ಬದ್ಧರಾಗಿರಬೇಕು. ಹಬ್ಬಗಳನ್ನು ಆಚರಿಸುವುದರೊಂದಿಗೆ ನಿಯಮ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಬೇಕು ಎಂದು ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ನಡೆದ ಶಾಂತಿಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು.ಸಾರ್ವಜನಿಕವಾಗಿ ಗಣೇಶ ಕೂರಿಸುವವರು ಸರ್ಕಾರ ಮತ್ತು ನ್ಯಾಯಾಲಯದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗಣೇಶ ವಿಗ್ರಹ ಸ್ಥಾಪಿಸಿದ ಸ್ಥಳದಲ್ಲಿ ಕಾರ್ಯಕರ್ತರನ್ನು ನಿಯೋಜಿಸಿ ಶಾಂತಿಯುತವಾಗಿ ಹಬ್ಬ ಆಚರಿಸಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ, ಇಲಾಖೆ ನಿಮಗೆ ಸಹಕರಿಸಲು ಸದಾ ಸಿದ್ಧವಿದೆ ಎಂದರು.
ಸ್ಥಳೀಯ ಠಾಣೆಯ ಸಿಪಿಐ ಜೆ.ಬಿ.ಸೀತಾರಾಮ ಮಾತನಾಡಿ, ಗಣೇಶ ವಿಗ್ರಹ ಸ್ಥಾಪಿಸಿದ ಸ್ಥಳದಲ್ಲಿ ಸಿಸಿ ಕ್ಯಾಮೇರಾ ಅಳವಡಿಕೆ ಮಾಡಿದರೆ ಉತ್ತಮ. ಸ್ಥಳದಲ್ಲಿ ನಿಯೋಜನೆಗೊಂಡ ಕಾರ್ಯಕರ್ತರ ಪಟ್ಟಿ ಪೊಲೀಸರಿಗೆ ನೀಡಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಈಗಾಗಲೇ ನೀಡಿರುವ ಕಾರ್ಯಕ್ರಮ ಯಾದಿಯಂತೆ ಕಾರ್ಯಕ್ರಮ ನಡೆಸಬೇಕು. ಯಾವುದಾದರೂ ಬದಲಾವಣೆ ಇದ್ದರೆ ಪೊಲೀಸರ ಗಮನಕ್ಕೆ ತರಬೇಕು. ಡಿಜೆಗೆ ಅವಕಾಶವಿಲ್ಲ ಎಂದರು.ಪಪಂ ಹಿರಿಯ ಸದಸ್ಯ ಕೆ.ಜಿ. ನಾಯ್ಕ ಹಣಜೀಬೈಲ್ ಮಾತನಾಡಿ, ತಾಲೂಕಿನಲ್ಲಿ ಸುಮಾರು ೧೮೦ ಕಡೆ ಸಾರ್ವಜನಿಕ ಗಣೇಶೋತ್ಸವ ನಡೆಸುತ್ತಿದ್ದೇವೆ.ಈ ವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಈ ಬಾರಿಗೂ ಇಲಾಖೆಯೊಂದಿಗೆ ನಾವೆಲ್ಲರೂ ಸಹಕರಿಸಿ ಉತ್ಸವ ಯಶಸ್ವಿಗೊಳಿಸುತ್ತೇವೆ. ಧಾರ್ಮಿಕ ಆಚರಣೆ ತಲೆತಲಾಂತರದಿಂದ ನಡೆದು ಬಂದಿದೆ. ನಿಯಮಗಳನ್ನು ಬಲವಂತವಾಗಿ ಅಧಿಕಾರಿಗಳು ಸಾರ್ವಜನಿಕರ ಮೇಲೆ ಹೇರಬಾರದು ಎಂದರು.
ಸಭೆಯಲ್ಲಿ ತಹಸೀಲ್ದಾರ ಎಂ.ಆರ್.ಕುಲಕರ್ಣಿ, ತಾಪಂ ಇಒ ದೇವರಾಜ ಹೊತ್ತಲಕೊಪ್ಪ ಮಾತನಾಡಿದರು.ಸಭೆಯಲ್ಲಿ ಧಾರ್ಮಿಕ ಮುಖಂಡರುಗಳು, ವಿವಿಧ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಸಾರ್ವಜನಿಕರು ಇದ್ದರು.