ಸಾರಾಂಶ
ವಕೀಲ ವೃತ್ತಿಗೆ ಜಾತಿ ಧರ್ಮ ಸ್ವಂತ, ಅನ್ಯ, ನಮ್ಮವರು, ಬೇರೆಯವರು ಎಂಬ ಹಂಗು ಇರಬಾರದು. ಕಾನೂನು ಮಾಡುವವರು ಶಾಸಕಾಂಗದವರೇ ಆದರೂ ಸತ್ ಸಮಾಜಕ್ಕೆ ಬೇಕಾದ ಶಾಸನ ರೂಪಿಸುವಂತೆ ಪ್ರೇರೇಪಿಸುವ ಶಕ್ತಿ ವಕೀಲರಿಗೆ ಇದೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವಕೀಲರ ಸೇವೆ ಇಲ್ಲದಿದ್ದರೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕಷ್ಟವಾಗಲಿದೆ. ಇದನ್ನು ಮನಗಂಡು ಯುವ ವಕೀಲರು ತಮ್ಮ ವೃತ್ತಿಯಲ್ಲಿ ಶ್ರದ್ಧೆಯನ್ನು ಉಳಿಸಿಕೊಳ್ಳಬೇಕು. ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ.ಎಸ್.ದೀಕ್ಷಿತ್ ತಿಳಿಸಿದರು. ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದಲ್ಲಿ ಹೆಚ್.ಆರ್.ಎಸ್. ಫೌಡೇಷನ್ ಮತ್ತು ಅಡ್ವೋಕೇಟ್ಸ್ ಅಸೋಸಿಯೇಷನ್ ಚಿಕ್ಕಬಳ್ಳಾಪುರ ಇವರ ಸಹಯೋಗದಲ್ಲಿ ಹೆಚ್.ಆರ್.ಸೀತಾರಾಮ್ ಸ್ಮಾರಕ ಉಪನ್ಯಾಸ ಮಾಲಿಕೆಯಡಿ ಏರ್ಪಡಿಸಿದ್ದ ಕಾನೂನು ಮತು ವಕೀಲರು ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.ಹಣ ಗಳಿಕೆ ಮಾನದಂಡವಲ್ಲ
ವಕೀಲ ವೃತ್ತಿಗೆ ಜಾತಿ ಧರ್ಮ ಸ್ವಂತ, ಅನ್ಯ, ನಮ್ಮವರು, ಬೇರೆಯವರು ಎಂಬ ಹಂಗು ಇರಬಾರದು. ಹಣಗಳಿಕೆಯೊಂದೇ ಮಾನದಂಡವೂ ಆಗಬಾರದು. ಕಾನೂನು ಮಾಡುವವರು ಶಾಸಕಾಂಗದವರೇ ಆದರೂ ಸತ್ ಸಮಾಜಕ್ಕೆ ಬೇಕಾದ ಶಾಸನ ರೂಪಿಸುವಂತೆ ಪ್ರೇರೇಪಿಸುವ ಶಕ್ತಿ ವಕೀಲರಿಗೆ ಇದೆ. ಜಾತಿ ಕುಲ ಮತ ಯಾವುದನ್ನೂ ನೋಡದೆ ವೃತ್ತಿಯಲ್ಲಿ ಹೆಚ್ಚಿನ ಬದ್ಧತೆ ಮತ್ತು ನೈಪುಣ್ಯತೆ ಗಳಿಸಲು ಹಿರಿಯ ವಕೀಲರು ಮುಂದಾಗಬೇಕು. ಯಾಕೋ ಇತ್ತೀಚೆಗೆ ವಕೀಲ ವೃತ್ತಿಯಲ್ಲಿ ಜಾತಿಪ್ರೇಮ ಜಾಸ್ತಿ ಆಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದರು.ಕರ್ನಾಟಕದ ನ್ಯಾಯಾಂಗ ಕ್ಷೇತ್ರಕ್ಕೆ ತನ್ನದೇ ಆದ ಭವ್ಯವಾದ ಇತಿಹಾಸವಿದೆ. ಅನೇಕ ಹಿರಿಯ ವಿಧ್ವಜ್ಜನ ವಕೀಲರು ಸಾಕಷ್ಟು ಬಾರಿ ಅನೇಕ ಕೇಸುಗಳನ್ನು ದುಡ್ಡು ಪಡೆಯದೆ ನಡೆಸಿದ್ದಾರೆ. ತಮ್ಮಗಿಂತ ಕಿರಿಯ ವಕೀಲರಿಗೆ ಅವರ ಕಷ್ಟಗಳಿಗೆ ಒಂದಷ್ಟು ಹಣ ಕೊಡುತ್ತಿದ್ದರು. ಇಂತಹವರ ಸಾಲಿಗೆ ಸೇರುವವರು ಹೆಚ್.ಆರ್.ಸೀತಾರಾಮ್ ರಂತಹ ವಕೀಲರು. ಇವರ ಕೆಲಸ, ಕಾರ್ಯತತ್ಪರತೆ, ವೃತ್ತಿಧರ್ಮ, ಬದ್ದತೆ ಇಂದಿನ ವಕೀಲರಲ್ಲಿ ಹೆಚ್ಚೆಚ್ಚು ಆಗಬೇಕು ಎಂದರು.ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಕವನ ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬಾಳಿನಲಿ ಎಂಬ ಸಾಲುಗಳು ಸದಾ ನಮ್ಮ ಬದುಕಿನಲ್ಲಿ ಅನುರಣಿಸುತ್ತಿರಲಿ ಎಂದು ಕಿವಿ ಮಾತು ಹೇಳಿದರು.ಈ ವೇಳೆ ಉಚ್ಚನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಹರೀಶ್ ಕುಮಾರ್,ಎಂ.ಐ ಅರುಣ್,ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ,ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ್,ಕಾರ್ಯದರ್ಶಿ ಮುರಳಿ ಮೋಹನ್ ಮತ್ತಿತರರು ಇದ್ದರು.