ಸಾರಾಂಶ
ನೌಕರಿ ಪಡೆಯುವುದು, ದೀರ್ಘಕಾಲ ಸೇವೆ ಸಲ್ಲಿಸುವುದು ದೊಡ್ಡ ಸಾಧನೆಯಲ್ಲ. ಬದಲಿಗೆ ದೊರೆತ ಹುದ್ದೆಗೆ ಪ್ರಾಮಾಣಿಕತೆ, ನಿಷ್ಠೆ ಹಾಗೂ ಕರ್ತವ್ಯ ಬದ್ಧತೆಯಿಂದ ಸೇವೆ ಸಲ್ಲಿಸುವುದು ಮುಖ್ಯ.
ಕನ್ನಡಪ್ರಭ ವಾರ್ತೆ ಚಿತ್ತಾಪುರ
ನೌಕರಿ ಪಡೆಯುವುದು, ದೀರ್ಘಕಾಲ ಸೇವೆ ಸಲ್ಲಿಸುವುದು ದೊಡ್ಡ ಸಾಧನೆಯಲ್ಲ. ಬದಲಿಗೆ ದೊರೆತ ಹುದ್ದೆಗೆ ಪ್ರಾಮಾಣಿಕತೆ, ನಿಷ್ಠೆ ಹಾಗೂ ಕರ್ತವ್ಯ ಬದ್ಧತೆಯಿಂದ ಸೇವೆ ಸಲ್ಲಿಸುವುದು ಮುಖ್ಯ. ಜಿಲ್ಲೆಯ ವಿವಿಧ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಉತ್ತಮ, ಬದ್ಧತೆ, ನಿಷ್ಠೆ, ತಾಳ್ಮೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿರುವ ಅಲ್ಲಾಪಟೇಲ್ ಬಿರಾದಾರ ಅತ್ಯಂತ ಸರಳ ವ್ಯಕ್ತಿಯಾಗಿದ್ದಾರೆ. ಅವರು ನೀಡಿರುವ ಸೇವೆ ನಿಜಕ್ಕೂ ಸಾರ್ಥಕತೆಯಾಗಿದ್ದು, ನೌಕರರಿಗೆ ಮಾದರಿಯಾಗಿದೆ ಎಂದು ಮಾಡಬೂಳ ಕೆಪಿಎಸ್ ಪ್ರಾಚಾರ್ಯೆ ಪ್ರಭಾವತಿ ಪಾಟೀಲ ಅಭಿಪ್ರಾಯಪಟ್ಟರು.ತಾಲೂಕಿನ ಮಾಡಬೂಳ ಕೆಪಿಎಸ್‌ನ ಸರ್ಕಾರಿ ಪಿಯು ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಅಲ್ಲಾಪಟೇಲ್ ಬಿರಾದಾರ ದಂಪತಿಗೆ ಕೆಪಿಎಸ್, ಜಿಲ್ಲೆಯ ವಿವಿಧ ಪಿಯು ಕಾಲೇಜುಗಳು ಮತ್ತು ವಿದ್ಯಾರ್ಥಿಗಳ ವತಿಯಿಂದ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲಬುರಗಿ ವಿಭಾಗೀಯ ಎನ್.ಎಸ್.ಎಸ್. ಅಧಿಕಾರಿ ಡಾ. ಚಂದ್ರಶೇಖರ ದೊಡ್ಡಮನಿ ಮಾತನಾಡಿ, ಅಲ್ಲಾಪಟೇಲರು ಉತ್ತಮ ಎನ್.ಎಸ್.ಎಸ್. ಅಧಿಕಾರಿಯಾಗಿದ್ದರು. ನೂರಾರು ಜನ ಸ್ವಯಂ ಸೇವಕರಿಗೆ ಸೂಕ್ತ ಮಾರ್ಗದರ್ಶನ ಮಾಡಿದ್ದಾರೆ. ವಿದ್ಯಾರ್ಥಿಸ್ನೇಹಿ ಶಿಕ್ಷಕರಾಗಿದ್ದರು. ಅವರಲ್ಲಿರುವ ಸೇವಾ ಕಳಕಳಿ ಶ್ಲಾಘನೀಯವಾಗಿದೆ ಎಂದರು.ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಪ್ರಲ್ಹಾದ ಬುರ್ಲಿ, ಗೌಸುದ್ದೀನ್ ತುಮಕೂರಕರ್, ಬಿ.ಶಂಕರ ರಡ್ಡಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂತೋಷ ಹಿರೇಮನಿ, ಮುಖ್ಯ ಶಿಕ್ಷಕಿ ಸಿದ್ದಮ್ಮ, ಗುವಿವಿಯ ಸಿಂಡಿಕೇಟ ಮಾಜಿ ಸದಸ್ಯ ಯೋಗೇಶ್, ಗ್ರಾಮ ಪ್ರಮುಖರಾದ ರಮೇಶ, ಉಪನ್ಯಾಸಕ ಎಚ್.ಬಿ. ಪಾಟೀಲ, ಮಲ್ಲಿಕಾರ್ಜುನ ದೊಡ್ಡಮನಿ ಸೇರಿದಂತೆ ಜಿಲ್ಲೆಯ ವಿವಿಧ ಕಾಲೇಜುಗಳ ಉಪನ್ಯಾಸಕರು, ಕೆಪಿಎಸ್‌ನ ವಿದ್ಯಾರ್ಥಿಗಳು, ಅಲ್ಲಾಪಟೇಲ್ ಪರಿವಾರದವರು ಭಾಗವಹಿಸಿದ್ದರು.