ಸಾರಾಂಶ
ಮಾಗಡಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ತಾಲೂಕಿನ ಜನತೆಯ ಆಶಯದಂತೆ ಸಮಗ್ರ ಅಭಿವೃದ್ಧಿ ಪಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ತೋರಿಸುತ್ತೇನೆ ಎಂದು ಶಾಸಕ ಬಾಲಕೃಷ್ಣ ಹೇಳಿದರು.
ಪಟ್ಟಣದ ಕೋಟೆ ಮೈದಾನದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ತಿಂಗಳ ಒಳಗೆ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತದೆ. ಪಟ್ಟಣದ ಕೆಂಪೇಗೌಡರು ಕಟ್ಟಿಸಿದ ಐತಿಹಾಸಿಕ ಕೋಟೆ ಮೈದಾನ ಅಭಿವೃದ್ಧಿಗೆ 50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಟದ ಮೈದಾನ ನಿರ್ಮಾಣ, 20 ಕೋಟಿ ವೆಚ್ಚದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ರಸ್ತೆಗಳ ಅಭಿವೃದ್ಧಿ, 5 ಕೋಟಿ ವೆಚ್ಚದಲ್ಲಿ ಗುರುಭವನ ಕಟ್ಟಡಕ್ಕೆ ಶೀಘ್ರದಲ್ಲೇ ಭೂಮಿ ಪೂಜೆ ನೆರವೇರಿಸಲಾಗುತ್ತದೆ. ಪ್ರತಿ ಮನೆಗೂ ಕುಡಿಯುವ ನೀರು ನಲ್ಲಿ ಯೋಜನೆಗೆ 600 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.ಪಟ್ಟಣದಲ್ಲಿ ಡಿಪ್ಲೊಮಾ ಕಾಲೇಜು ಆರಂಭಿಸುವುದು ಪಟ್ಟಣದ ಗೌರಮ್ಮನಕೆರೆ, ಹೊಂಬಾಡಮ್ಮನಕೆರೆ ಅಭಿವೃದ್ಧಿ ಪಡಿಸಲಾಗುತ್ತದೆ. ಕುದೂರಿನಲ್ಲಿ 10 ಕೋಟಿ ವೆಚ್ಚದಲ್ಲಿ ಕೆಪಿಎಸ್ಸಿ ಶಾಲಾ ಕಟ್ಟಡವನ್ನು ಕಟ್ಟಲು 15 ದಿನದ ಒಳಗೆ ಭೂಮಿಪೂಜೆ, ತಾಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ಹೇಮಾವತಿ ಯೋಜನೆಗೆ ಎಕ್ಸ್ ಪ್ರೆಸ್ ನಾಲೆ ಅಭಿವೃದ್ಧಿಗೆ 900 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಎರಡು ವರ್ಷದಲ್ಲಿ ಈ ಎಲ್ಲಾ ಯೋಜನೆ ಜಾರಿಗೆ ತರಲಾಗುತ್ತದೆ. ತಾಲೂಕಿಗೆ 25 ಹೊಸ ಬಸ್ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿಯವರು ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಗ್ರಾಮೀಣರಿಗೆ ಅನುಕೂಲವಾಗಲಿದ್ದು ಐದು ವರ್ಷದಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಿ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆಂದು ಶಾಸಕರು ತಿಳಿಸಿದರು.
ತಹಶೀಲ್ದಾರ್ ಸುರೇಂದ್ರ ಮೂರ್ತಿ ಮಾತನಾಡಿ, ಸಂವಿಧಾನದಡಿ ಸರ್ವರಿಗೂ ಸಮಪಾಲು ಸಮಬಾಳು ಅವಕಾಶ ಕಲ್ಪಸಿಕೊಟ್ಟ ಮಹನೀಯರನ್ನು ಸ್ಮರಿಸುವ ಕೆಲಸ ಮಾಡಬೇಕಾಗಿದೆ. ನಮ್ಮ ದೇಶ ಬೇರೆ ದೇಶಗಳ ಜೊತೆ ಈಗ ಪೈಪೋಟಿಯಲ್ಲಿ ನಿಲ್ಲುವ ಸ್ಥಿತಿಯಲ್ಲಿದ್ದು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ತಿಳಿಸಿದರು.ತಹಸೀಲ್ದಾರ ಸುರೇಂದ್ರ ಮೂರ್ತಿ ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸ್ವೀಕರಿಸಿದರು. ತಾಲೂಕಿನ ಗಣ್ಯರನ್ನು ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಯಿತು.
ಪೋಟೋ 26ಮಾಗಡಿ1: ಮಾಗಡಿಯ ಕೋಟೆ ಮೈದಾನದಲ್ಲಿ ತಾಲೂಕು ಆಡಳಿತದಿಂದ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ಬಾಲಕೃಷ್ಣ ಉದ್ಘಾಟಿಸಿದರು. ತಹಶೀಲ್ದಾರ್ ಸುರೇಂದ್ರ ಮೂರ್ತಿ ಇತರರಿದ್ದರು.