ಸಾರಾಂಶ
ಶಿಗ್ಗಾಂವಿ: ಜನಕಲ್ಯಾಣಕ್ಕಾಗಿ ಜನರು ನಮ್ಮನ್ನು ಆಯ್ಕೆ ಮಾಡಿದ ಮೇಲೆ ಜನರ ನಾಡಿಮಿಡಿತಕ್ಕೆ ಅನುಗುಣವಾಗಿ ಜನಸೇವೆ ಮಾಡಲು ಬದ್ಧರಾಗಿರಬೇಕು. ಸೇವೆಯಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.ತಾಲೂಕಿನ ಜೇಕಿನಕಟ್ಟಿ ಬಳಿ ₹೬.೫೦ ಲಕ್ಷ ಅನುದಾನದಡಿ ಸರ್ಕಾರಿ ಮೆಟ್ರಿಕ್ ನಂತರ, ವೃತ್ತಿಪರ ಬಾಲಕರ ವಿದ್ಯಾರ್ಥಿನಿಲಯದ ನೂತನ ಕಟ್ಟಡದ ನಡೆದ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದರು.ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಆರ್ಥಿಕತೆ ಸುಧಾರಣೆಯತ್ತ ಸಾಗಿದ್ದು, ಜಗತ್ತಿನ ಐದನೇ ಬಲಿಷ್ಠ ಆರ್ಥಿಕ ದೇಶವಾಗಿದ್ದು, ಮುಂದಿನ ಎರಡು ವರ್ಷಗಳ ಒಳಗಾಗಿ ಬಲಿಷ್ಠ ಮೂರರೊಳಗೆ ಭಾರತ ಇರಲಿದೆ. ಕ್ಷೇತ್ರದ ಜನರ ಅನುಕೂಲಕ್ಕೆ ತಕ್ಕಂತೆ ರಾಜಕಾರಣಿಗಳು ಬದಲಾದರೂ ಸಹಿತ ಅಭಿವೃದ್ಧಿ ಕಾರ್ಯಗಳು ಬದಲಾಗದೆ ನಿರಂತರವಾಗಿರಬೇಕು ಎಂದರು. ಒಂದೇ ಕ್ಷೇತ್ರದಲ್ಲಿ ಎರಡು ರಾಜಕೀಯ ಪಕ್ಷಗಳ ಮುಖಂಡರು ಬೇರೆಯಾಗಿದ್ದರೂ ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಬೆರೆಸದೆ ರಾಜಕೀಯ ಮರೆತು, ಅವರಿವರ ಟೀಕೆ ಮಾಡದೆ ಜನರ ಅಭಿವೃದ್ಧಿಗೋಸ್ಕರ ಶ್ರಮಿಸಬೇಕು ಎಂದರು.ಈ ಭಾಗದ ರೈತರು ನದಿ ಜೋಡಣೆಗಳ ಬೇಡಿಕೆಗಳ ತಕ್ಕಂತೆ ರಾಜ್ಯ ಸರ್ಕಾರ ನೀಲನಕ್ಷೆ ತಯಾರಿಸಿ ಅನುಮೋದನೆಯೊಂದಿಗೆ ಕೇಂದ್ರಕ್ಕೆ ವರದಿ ಸಲ್ಲಿಸಿದರೆ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಲು ನಾನು ಸಹಕರಿಸುವೆ ಎಂದರು.
ಶಾಸಕ ಯಾಸೀರಖಾನ್ ಪಠಾಣ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಕೇಂದ್ರ ಸರ್ಕಾರದ ಒಪ್ಪಿಗೆಯೊಂದಿಗೆ ವಿಶೇಷ ಅನುದಾನ ಕಲ್ಪಿಸಿ, ವರದಾ- ಬೇಡ್ತಿ ನದಿ ಜೋಡಣೆ ಯೋಜನೆ ಅನುಷ್ಠ್ಠಾನಗೊಳಿಸಿ, ಈ ಭಾಗದ ರೈತರ ಬಹುದಿನಗಳ ಕನಸು ನನಸಾಗಿಸಬೇಕು ಎಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.ಬೆಣ್ಣಿಹಳ್ಳದ ಉಗಮ ಸ್ಥಾನ ಕ್ಷೇತ್ರದಲ್ಲಿದೆ. ಇದರ ಅಭಿವೃದ್ಧಿಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ₹೧೬೦೦ ಕೋಟಿ ಅನುದಾನ ಪ್ರಸ್ತಾವನೆ ಸಲ್ಲಿಸಿದೆ. ಬಿಡುಗಡೆ ಮಾಡಿಸಬೇಕು. ರಾಜ್ಯ ಸರ್ಕಾರದ ₹200 ಕೋಟಿ ಅನುದಾನದಲ್ಲಿ ಕೆಲಸ ನಡೆದಿದೆ ಎಂದರು.ಗಡಿ ಪ್ರದೇಶ ಅಭಿವೃದ್ಧಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಪಕ್ಷ ಬೇರೆಯಾದರೂ ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಉಳಿದ ದಿನಗಳಲ್ಲಿ ಒಗ್ಗಟ್ಟಾಗಿ ಕ್ಷೇತ್ರದ ಅಭಿವೃದ್ಧಿ ಮಾಡೋಣ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಸಹಕಾರ ನೀಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಕೊಡುವ ಮೂಲಕ ಕೈಜೋಡಿಸಬೇಕು ಎಂದು ಕೋರಿದರು.
ಗುಡ್ಡಪ್ಪ ಜಲದಿ, ಎಸ್.ಎಫ್. ಮಣಕಟ್ಟಿ, ಸುಧೀರ ಅಂಗಡಿ ಸೇರಿದಂತೆ ಇತರರಿದ್ದರು.