ಸಾರಾಂಶ
ಜಗಳೂರು : ನಾನು ಶಿಕ್ಷಣ ಸಚಿವನಾದ ಮೇಲೆ 13,500 ಸರಕಾರಿ ಶಾಲೆಗಳ ಶಿಕ್ಷಕರ ನೇಮಕಾತಿಗೆ ಈಗಾಗಲೇ ಆರ್ಥಿಕ ಅನುಮೋದನೆ ಪಡೆಯಲಾಗಿದ್ದು, ನನ್ನ ಅವಧಿಯಲ್ಲಿ ಕಲ್ಯಾಣ ಕರ್ನಾಟಕವೂ ಸೇರಿದಂತೆ 25 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಬದ್ಧನಾಗಿದ್ದೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ಹುಚ್ಚಂಗಿಪುರ ಗ್ರಾಮದಲ್ಲಿ ಶುಕ್ರವಾರ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮತ್ತು ಸಂಸದರು ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಿಸಲಾದ 3.5 ಕೋಟಿ ರು. ವೆಚ್ಚದ ರಾಜ್ಯದಲ್ಲೇ 2ನೇ ಹೈಟೆಕ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಲೋಕಾರ್ಪಣೆಗೊಳಿಸಿದ ನಂತರ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ತಮ್ಮ ಗ್ರಾಮದಲ್ಲಿ ಅದ್ಭುತವಾದ ಶಾಲೆ ನಿರ್ಮಿಸಲು ಸಾಕಷ್ಟು ಶ್ರಮಿಸಿದ್ದಾರೆ. ಶಾಲೆ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರವಾಗಿದೆ. ಹುಟ್ಟಿದ ಊರಿನ ಋಣ ತೀರಿಸಿದ್ದಾರೆ. ಅವರು ಪಟ್ಟ ಕಷ್ಟ ಇಂದಿನ ಮಕ್ಕಳು ಯಾತನೆ ಅನುಭವಿಸಬಾರುದು ಎಂದು ತಂದೆ, ತಾಯಿಯ ಮಾತಿನಂತೆ ಅವರ ಅನುಧಾನ ಬಳಸಿ ಈ ಹೈಟೆಕ್ ಶಾಲೆ ನಿರ್ಮಿಸಿದ್ದಾರೆ. ಈ ಶಾಲೆ ಹಿರಿಯ ಪ್ರಾಥಮಿಕ ಶಾಲೆಯಾಗಿದ್ದು, ಅವರ ಬೇಡಿಕೆಯಂತೆ ಮುಂದಿನ ವರ್ಷದಿಂದ ಈ ಶಾಲೆಯಲ್ಲಿ ಹೈಸ್ಕೂಲ್ ಪ್ರಾರಂಭಿಸಲು ಒಪ್ಪಿಗೆ ನೀಡಿದ್ದೇನೆ ಎಂದು ಕಾರ್ಯಕ್ರಮದಲ್ಲಿ ಘೋಷಿಸಿದರು.
ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಮಕ್ಕಳು ಶಾಲೆಗೆ ಬರುತ್ತಿರಲಿಲ್ಲ ಕಾರಣ ಆಗ ಬಡತನವಿತ್ತು. ನಮ್ಮ ತಂದೆಯವರು ಶಿಕ್ಷಣದಿಂದ ವಂಚಿತರಾಗಬಾರದೆಂದು ಮಕ್ಕಳಿಗೆ ಒಂದು ರೂ ಪ್ರೋತ್ಸಹಧನ ನೀಡಿದರು. ಗ್ರಾಮೀಣ ಕೃಪಾಂಕ ನೀಡಿದರು. ಅವರ ಹಾದಿಯಲ್ಲಿ ನಡೆದು ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ಶ್ರಮಿಸುತ್ತೇನೆ. ಶಿಕ್ಷಕರು ಸರಕಾರದ ನಿಯಮದಂತೆ ವಾರದಲ್ಲಿ ಆರು ದಿನ ಮೊಟ್ಟೆಯನ್ನು ಪೂರೈಸಬೇಕು. ಅಪೌಷ್ಟಿಕತೆ ನಿರ್ಮೂಲನೆಗೆ ಅಜಿತ್ ಪ್ರೇಮ್ ಜೀ ಫೌಂಡೇಶ್ 1591 ಕೋಟಿ ರು. ನೀಡಿದ್ದು ಅಪೌಷ್ಠಿಕತೆ ನಿರ್ಮೂಲನೆಗೆ ಬದ್ಧನಾಗಿದ್ದೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಶಾಸಕ ದೇವೇಂದ್ರಪ್ಪ, ಎಂಎಲ್ಸಿ ಪ್ರೊ. ಸಂಕನೂರ, ಚಿದಾನಂದ ಗೌಡ್ರು, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಡಿಡಿ ಜಿ.ಕೊಟ್ರೇಶ್, ದಾನಿಗಳಾದ ಡಾ.ದಿನೇಶ್, ಟಾಟಾ ಶಿವನ್, ಬಿಇಒ ಈ.ಹಾಲಮೂರ್ತಿ, ಗ್ರಾಪಂ ಅಧ್ಯಕ್ಷೆ ಗುತ್ಯಮ್ಮ ಸಿದ್ದಪ್ಪ, ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ಕೆ.ಪಿ.ಪಾಲಯ್ಯ ಇತರರು ಇದ್ದರು.
ಶಾಲಾ ಕಟ್ಟಡಕ್ಕೆ ₹ 25 ಲಕ್ಷ
ಗ್ರಂಥಾಲಯಗಳು ಶಿಕ್ಷಕ ರಹಿತ ವಿಶ್ವವಿದ್ಯಾಲಯಗಳಿದ್ದಂತೆ. ಪ್ರತಿ ಗ್ರಾಮಗಳಲ್ಲಿ ಗ್ರಂಥಾಲಯಗಳ ನಿರ್ಮಾಣಕ್ಕೆ ವಿಧಾನಸೌಧದಲ್ಲಿ ಚರ್ಚಿಸಲಾಗುವುದು.ಶಾಲಾ ಕಟ್ಟಡ ಅಭಿವೃದ್ದಿಗೆ 25 ಲಕ್ಷ ರು. ಅನುದಾನ ಒದಗಿಸಲು ಬದ್ದನಾಗಿರುವೆ ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.