ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಹಿಂದುಳಿದ ಸಮುದಾಯಗಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಬದ್ಧವಾಗಿದ್ದು, ಅಗತ್ಯ ಕಾರ್ಯಕ್ರಮ ರೂಪಿಸಿದೆ ಎಂದು ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ನಗರದ ಗಾಂಧಿ ಭವನದಲ್ಲಿ ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್ ಮತ್ತು ಜಿಲ್ಲಾ ಕುಂಬಾರ ಜಾಗೃತಿ ವೇದಿಕೆ ಸಂಯುಕ್ತವಾಗಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಮಾಜದ ಸಾಧಕರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಣ್ಣ ಸಮಾಜಗಳಲ್ಲಿ ಶಿಕ್ಷಣದ ಜಾಗೃತಿ ಮೂಡುತ್ತಿರುವುದು ಉತ್ತಮ ಬೆಳವಣಿಗೆ ಆಗಿದೆ. ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳ ಮೂಲಕ ಇನ್ನಷ್ಟು ಅಭಿವೃದ್ಧಿ ಹೊಂದಲು ಸಹಕಾರಿ ಆಗಲಿದೆ. ಕುಂಬಾರ ಮತ್ತಿತರೆ ಸಮಾಜಗಳ ವಿದ್ಯಾರ್ಥಿಗಳು ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಉನ್ನತ ಸ್ಥಾನ ಅಲಂಕರಿಸಬೇಕು ಎಂದರು.ಅಭಿನಂದನೆ ಸ್ವೀಕರಿಸಿದ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬೋರೇಗೌಡ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ಅದನ್ನು ಯಶಸ್ಸಿನ ಸಾಧನೆಗೆ ಬಳಸಬೇಕು. ಶ್ರಮ, ಶ್ರದ್ಧೆ ಮತ್ತು ಕಲಿಕೆಯಿಂದ ಉತ್ತಮ ಹುದ್ದೆಗಳನ್ನು ಪಡೆದುಕೊಳ್ಳಬೇಕು ಎಂದು ಉತ್ಸಾಹ ತುಂಬಿದರು.
ಪಿಯುಸಿ ನಂತರ ಮೆಡಿಕಲ್ ಎಂಜಿನಿಯರಿಂಗ್ ಹೊರತಾಗಿಯೂ ಶೈಕ್ಷಣಿವಾಗಿ ಹತ್ತಾರು ಅವಕಾಶಗಳ ದಾರಿ ಇದೆ. ಕೆಎಎಸ್, ಐಪಿಎಸ್‌ನಂತಹ ವಿಷಯದ ಕಡೆ ಗಮನಹರಿಸಬೇಕು. ಆಸಕ್ತಿಗೆ ಅನುಗುಣವಾಗಿ ಓದನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ಪ್ರತಿಪಾದಿಸಿದರು.ಶಾಸಕ ಪಿ.ರವಿಕುಮಾರ್ ಗಣಿಗ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಕೋರಿದರು. ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುಂಬಾರ ಜಾಗೃತ ವೇದಿಕೆ ಅಧ್ಯಕ್ಷ ಎಂ.ಕೃಷ್ಣ, ಕುಂಬಾರ ಸಮುದಾಯದ ಸ್ಥಿತಿಗತಿಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಾರಿಗೆ ಹಿರಿಯ ಅಧೀಕ್ಷಕ ಜೆ.ಪಿ.ಪ್ರಕಾಶ್ ಅವರನ್ನು ಅಭಿನಂದಿಸಲಾಯಿತು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್, ತಾಲೂಕು ಖಜಾನೆ ಸಹಾಯಕ ನಿರ್ದೇಶಕರಾದ ಎ.ಎಲ್.ನಾಗರಾಜು, ಅಬಕಾರಿ ನಿರೀಕ್ಷಕ ಬಿ.ಶಿವಣ್ಣ, ಮದ್ದೂರು ಕುಂಬಾರ ಸರ್ವಜ್ಞ ಸಂಘದ ಗೌರವ ಅಧ್ಯಕ್ಷ ನಾರಾಯಣಪ್ಪ, ಮುಖಂಡರಾದ ಪಿ.ಎನ್.ಕಾಂತರಾಜು, ಪು, ಪ್ರದೀಪ್ ಯಲಿಯೂರು, ಕೆರಗೋಡು ವೆಂಕಟೇಶ್, ಅರಕೆರೆ ದಾಸಪ್ಪ, ಆನಂದ್, ಪುಟ್ಟಸ್ವಾಮಿ, ಸತೀಶ್ ಇತರರಿದ್ದರು.